ಕೆಂಪೇಗೌಡರ ಮಾದರಿಯಲ್ಲಿ ಮೋದಿ ಸಹ ವಿಕಾಸ ಪುರುಷ: ಸಿಎಂ ಬಸವರಾಜ ಬೊಮ್ಮಾಯಿ

ಒಬ್ಬ ವಿಕಾಸಪುರುಷನ ಪ್ರತಿಮೆಯನ್ನು ಮತ್ತೊಬ್ಬ ವಿಕಾಸ ಪುರುಷ ಅನಾವರಣಗೊಳಿಸಿದ್ದು ದೈವ ಇಚ್ಛೆಯಾಗಿದ್ದು, ಕೆಂಪೇಗೌಡರ ಮಾದರಿಯಲ್ಲಿ ಮೋದಿ ಸಹ ವಿಕಾಸ ಪುರುಷ ಎಂದು ಸಿಎಂ ಬಸವರಾಜ ಬೊಮ್ಮಾಯಿ ಬಣ್ಣಿಸಿದ್ದಾರೆ. 
ಕೆಂಪೇಗೌಡ ಪ್ರತಿಮೆ ಉದ್ಘಾಟನೆ ಬಳಿಕ ಪ್ರಧಾನಿ ಮೋದಿ ಭಾಷಣ
ಕೆಂಪೇಗೌಡ ಪ್ರತಿಮೆ ಉದ್ಘಾಟನೆ ಬಳಿಕ ಪ್ರಧಾನಿ ಮೋದಿ ಭಾಷಣ

ಬೆಂಗಳೂರು: ಒಬ್ಬ ವಿಕಾಸಪುರುಷನ ಪ್ರತಿಮೆಯನ್ನು ಮತ್ತೊಬ್ಬ ವಿಕಾಸ ಪುರುಷ ಅನಾವರಣಗೊಳಿಸಿದ್ದು ದೈವ ಇಚ್ಛೆಯಾಗಿದ್ದು, ಕೆಂಪೇಗೌಡರ ಮಾದರಿಯಲ್ಲಿ ಮೋದಿ ಸಹ ವಿಕಾಸ ಪುರುಷ ಎಂದು ಸಿಎಂ ಬಸವರಾಜ ಬೊಮ್ಮಾಯಿ ಬಣ್ಣಿಸಿದ್ದಾರೆ. 

ಕೆಂಪೇಗೌಡರ ಪ್ರಗತಿ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ವಿಶ್ವದಲ್ಲಿ ಆರ್ಥಿಕ ಹಿಂಜರಿತದಿಂದ ಹಲವು ಸಮಸ್ಯೆಗಳಾಗಿದ್ದರೂ ಭಾರತದಲ್ಲಿ ಮೋದಿ ಅವರ ನಾಯಕತ್ವದ ಪರಿಣಾಮ  ಆರ್ಥಿಕತೆ ಸದೃಢವಾಗಿದೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಕರ್ನಾಟಕಕ್ಕೆ ಸಬ್ ಅರ್ಬನ್ ರೈಲು, ಬೆಂಗಳೂರು, ಮೈಸೂರು ಚೆನ್ನೈ ಸಂಪರ್ಕಿಸುವ ವಂದೇ ಭಾರತ ರೈಲು, ಬೆಂಗಳೂರು ಅಂತರರಾಷ್ಟ್ರೀಯ ವಿಮಾಣ ನಿಲ್ದಾಣದ ಟರ್ಮಿನಲ್ 2 ಸೇರಿದಂತೆ ಹಲವು ಕೊಡುಗೆ ಕೊಟ್ಟಿದ್ದಾರೆ. ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಿಎಂ ಹೇಳಿದ್ದಾರೆ. 

ಬೆಂಗಳೂರು ಸುತ್ತಮುತ್ತಲ ಗ್ರಾಮಗಳಿಗೆ ನಾಡಪ್ರಭು ಕೆಂಪೇಗೌಡ ವಿಜಯನಗರ ಕಾಲದ ಸುವರ್ಣ ಯುಗದ ದರ್ಶನ ಮಾಡಿಸಿದರು. ಅವರು ಯೋಜನಾಬದ್ಧ ನಗರ ನಿರ್ಮಿಸಿ, ಪೇಟೆಗಳನ್ನು ಕಟ್ಟಿದರಿಂದ ಜನರಿಗೆ ಸುಖ-ನೆಮ್ಮದಿ ಕಲ್ಪಿಸಿಕೊಟ್ಟರು. ಕೆಂಪೇಗೌಡರಿಗೆ ಗೌರವ ಸಲ್ಲಿಸುವ ಮೂಲಕ ನಾಡಿನ ಪರಂಪರೆ, ಪ್ರಗತಿಪರ ಚಿಂತನೆಗೆ ಗೌರವ ಕೊಟ್ಟಂತೆ ಆಗಿದೆ. ನಾವೂ ಸಹ ಇಂದು ಸಂಕಲ್ಪ ಮಾಡುತ್ತೇವೆ. ಕೆಂಪೇಗೌಡರ ಚಿಂತನೆ, ವಿಚಾರಧಾರೆಯಂತೆ ನಾಡು ಕಟ್ಟಲು ನಮ್ಮ ಸರ್ಕಾರ ಸಂಕಲ್ಪ ಮಾಡುತ್ತದೆ.

ಕೆಂಪೇಗೌಡರು ವಿಕಾಸ ಪುರುಷ. ಹೀಗಾಗಿಯೇ ಕೆಂಪೇಗೌಡರ ಪ್ರಗತಿಗೆ ‘ಸಮೃದ್ಧಿಯ ಪ್ರತಿಮೆ’ ಎಂದು ಕರೆದಿದ್ದೇವೆ. ಪ್ರಧಾನಿ ಇಂದು ದೇಶದ ಹತ್ತಾರು ಮೂಲಭೂತ ಸಮಸ್ಯೆಗಳನ್ನು ಪರಿಹರಿಸಿ, ಆತ್ಮನಿರ್ಭರ ಭಾರತ ರೂಪಿಸಲು ಯತ್ನಿಸುತ್ತಿದ್ದಾರೆ. ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಎತ್ತರಕ್ಕೆ ಕೊಂಡೊಯ್ದಿದ್ದಾರೆ. ವಿಕಾಸಪುರುಷ ದಾರಿಯಲ್ಲಿ ನವಭಾರತ ನಿರ್ಮಾಣ ಮಾಡುತ್ತಿರುವವರ ಕೈಯಿಂದ ಕೇಂಪೇಗೌಡರ ಮೂರ್ತಿ ಅನಾವರಣ ಮಾಡಿರುವುದು ದೈವೇಚ್ಛೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ, ಸಚಿವರಾದ ಆರ್. ಅಶೋಕ, ಡಾ.ಸಿ ಎನ್. ಅಶ್ವತ್ಥ ನಾರಾಯಣ, ಡಾ.ಕೆ. ಸುಧಾಕರ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com