ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಉದ್ಘಾಟಿಸಿದ ಪ್ರಧಾನಿ ಮೋದಿ; ಏನಿದರ ವಿಶೇಷತೆ?

ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. 
ಟರ್ಮಿನಲ್ 2 ಉದ್ಘಾಟನೆ
ಟರ್ಮಿನಲ್ 2 ಉದ್ಘಾಟನೆ

ಬೆಂಗಳೂರು: ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. 
ಇದು ಏಷ್ಯಾ ಖಂಡದ ಮೊದಲ ಗಾರ್ಡನ್‌ ಟರ್ಮಿನಲ್‌-2 ಆಗಿದೆ. 2.55 ಲಕ್ಷ ಚದರ ಮೀಟರ್​​ ವಿಸ್ತೀರ್ಣದಲ್ಲಿರುವ ಟರ್ಮಿನಲ್ ನಿರ್ಮಾಣಕ್ಕೆ 5 ಸಾವಿರ ಕೋಟಿ ವೆಚ್ಚ ಮಾಡಲಾಗಿದೆ.

ವಾರ್ಷಿಕ 5ರಿಂದ 6 ಕೋಟಿ ಪ್ರಯಾಣಿಕರ ನಿರ್ವಹಣೆಯ ಸಾಮರ್ಥ್ಯ ಈ ಟರ್ಮಿನಲ್​ಗೆ ಇದೆ. ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್, ಸಿಎಂ ಬೊಮ್ಮಾಯಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಎ.ನಾರಾಯಣಸ್ವಾಮಿ, ಮಾಜಿ ಸಿಎಂ ಯಡಿಯೂರಪ್ಪ, ಸಂಸದ ಮುನಿಸ್ವಾಮಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಗಾರ್ಡನ್ ಸಿಟಿ ಎಂದು ಕರೆಸಿಕೊಳ್ಳುವ ಬೆಂಗಳೂರಿಗೆ ಗೌರವಾರ್ಥ ಈ ಟರ್ಮಿನಲ್ 2ನ್ನು ವಿನ್ಯಾಸಗೊಳಿಸಲಾಗಿದ್ದು ವಾಕ್ ಇನ್ ಗಾರ್ಡನ್ ಅನುಭವವನ್ನು ಪ್ರಯಾಣಿಕರು ಪಡೆಯಲಿದ್ದಾರೆ. 10 ಸಾವಿರ ಚದರಡಿ ವಿಸ್ತೀರ್ಣದ ಹಸಿರು ಗೋಡೆಯ ಮಧ್ಯೆ, ನೇತಾಡುವ ಉದ್ಯಾನ ಮತ್ತು ಹೊರಾಂಗಣ ಗಾರ್ಡನ್ ಗಳ ಸೌಂದರ್ಯವನ್ನು ಪ್ರಯಾಣಿಕರು ಸವಿಯಬಹುದು. ಸ್ವದೇಶಿ ತಂತ್ರಜ್ಞಾನಗಳನ್ನು ಬಳಸಿ ಈ ಉದ್ಯಾನವನವನ್ನು ನಿರ್ಮಿಸಲಾಗಿದೆ.


ಟರ್ಮಿನಲ್ 2 ಮೂಲಕ ಪ್ರಯಾಣಿಕರ ನಿರ್ವಹಣೆ ಸಾಮರ್ಥ್ಯ ಹೆಚ್ಚಾಗಲಿದ್ದು, ಚೆಕ್ ಇನ್ ಮತ್ತು ಇಮ್ಮಿಗ್ರೇಶನ್ ಕೌಂಟರ್ ಗಳು ದ್ವಿಗುಣಗೊಳ್ಳಲಿದ್ದು, ಪ್ರಯಾಣಿಕರಿಗೆ ತ್ವರಿತ ಸೇವೆ ದೊರಕಲಿದೆ.


ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಈಗಾಗಲೇ ಸಂಪೂರ್ಣ ನವೀಕರಿಸಬಹುದಾದ ಇಂಧನ ವ್ಯವಸ್ಥೆಯಿದೆ. ಟರ್ಮಿನಲ್ 2ವನ್ನು ಕೂಡ ಅದೇ ರೀತಿ ವಿನ್ಯಾಸ ಮಾಡಲಾಗಿದೆ. ಉದ್ಯಾನದಲ್ಲಿ ಟರ್ಮಿನಲ್, ಸುಸ್ಥಿರತೆ, ತಂತ್ರಜ್ಞಾನ ಮತ್ತು ಕಲೆ ಹಾಗೂ ಸಂಸ್ಕೃತಿಯ ತತ್ವಗಳನ್ನು ಇದು ಒಳಗೊಂಡಿದೆ.

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಹೊಸದಾಗಿ ಟರ್ಮಿನಲ್ 2, ಎರಡನೇ ರನ್‌ ವೇ, ಮಲ್ಟಿಮೋಡಲ್ ಸಾರಿಗೆ ಕೇಂದ್ರ, ಪ್ರವೇಶ ರಸ್ತೆಗಳ ವಿಸ್ತರಣೆ ಮತ್ತು ಆಂತರಿಕ ರಸ್ತೆ ಮೂಲಸೌಕರ್ಯಗಳು ಪ್ರಯಾಣಿಕರಿಗೆ ಲಭ್ಯವಾಗಲಿವೆ. ಈ ಟರ್ಮಿನಲ್ 2 ವನ್ನು ಗಾರ್ಡನ್ ಟರ್ಮಿನಲ್ ಎಂದು ಕರೆಯಲಾಗುತ್ತದೆ.

ಅಮೆರಿಕ ಮೂಲದ ಖ್ಯಾತ ಕಂಪನಿ ಟರ್ಮಿನಲ್ 2 ವಿನ್ಯಾಸ ಮಾಡಿದೆ. ಹಲವು ಕೃತಕ ಉದ್ಯಾನಗಳನ್ನು ಟರ್ಮಿನಲ್‌ನಲ್ಲಿ ನಿರ್ಮಾಣ ಮಾಡಲಾಗಿದೆ.ಹಕ್ಕಿಗಳ ಕಲರವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್  2 ಒಳಗೆ ಕೇಳುವಂತೆ ಒಳಾಂಗಣ ವಿನ್ಯಾಸ ಮಾಡಲಾಗಿದೆ. 

2001ರಲ್ಲಿ ಮೊದಲ ಟರ್ಮಿನಲ್ ನಿರ್ಮಾಣ ಮಾಡುವಾಗಲೇ 2ನೇ ಟರ್ಮಿನಲ್ ಕಟ್ಟಡಕ್ಕೆ ಸಹ ಯೋಜನೆ ರೂಪಿಸಲಾಗಿತ್ತು.ಶೋ ರೂಂ, ಚೆಕ್ ಇನ್,  ಇಮಿಗ್ರೇಶನ್ ಸೇರಿದಂತೆ  ವಿದೇಶಿ ವಿಮಾನ ನಿಲ್ದಾಣಗಳನ್ನು ನೆನಪಿಸುವ ಮಾದರಿಯ ವ್ಯವಸ್ಥೆಗಳನ್ನು ಟರ್ಮಿನಲ್ 2 ಹೊಂದಿದೆ.ಟರ್ಮಿನಲ್‌ 2ನಲ್ಲಿ ನಾಮಫಲಕಗಳಲ್ಲಿ ಕನ್ನಡಕ್ಕೂ ಆದ್ಯತೆ ನೀಡಲಾಗಿದೆ. ವಿವಿಧ ಕಲಾಕೃತಿಗಳು ಸಹ ಗಮನವನ್ನು ಸೆಳೆಯುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com