ಹಾಸನ: ಶಿಥಿಲಾವಸ್ಥೆಯಲ್ಲಿ ಕೊಣನೂರು ಪಾದಚಾರಿ ತೂಗು ಸೇತುವೆ! ರಿಪೇರಿಗೆ ಮುಂದಾದ ಜಿಲ್ಲಾಡಳಿತ

ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕೊಣನೂರು ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಎರಡು ದಶಕಗಳ ಹಳೆಯದಾದ ತೂಗು ಸೇತುವೆ ದುರಸ್ತಿಗಾಗಿ ಜನರ ಸಂಚಾರವನ್ನು ನಿಷೇಧಿಸಲಾಗಿದೆ. ಸಂಭಾವ್ಯ ದುರಂತಕ್ಕೂ ಮುನ್ನ ಕೊನೆಗೂ ದುರಸ್ತಿಗೆ ನಿರ್ಧಾರ ಕೈಗೊಂಡಿರುವುದಕ್ಕೆ ಜಿಲ್ಲಾಡಳಿತಕ್ಕೆ ಧನ್ಯವಾದ ಸಲ್ಲಿಸಲಾಗುತ್ತಿದೆ.
ತೂಗು ಸೇತುವೆ
ತೂಗು ಸೇತುವೆ

ಅರಕಲಗೂಡು: ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕೊಣನೂರು ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಎರಡು ದಶಕಗಳ ಹಳೆಯದಾದ ತೂಗು ಸೇತುವೆ ದುರಸ್ತಿಗಾಗಿ ಜನರ ಸಂಚಾರವನ್ನು ನಿಷೇಧಿಸಲಾಗಿದೆ. ಸಂಭಾವ್ಯ ದುರಂತಕ್ಕೂ ಮುನ್ನ ಕೊನೆಗೂ ದುರಸ್ತಿಗೆ ನಿರ್ಧಾರ ಕೈಗೊಂಡಿರುವುದಕ್ಕೆ ಜಿಲ್ಲಾಡಳಿತಕ್ಕೆ ಧನ್ಯವಾದ ಸಲ್ಲಿಸಲಾಗುತ್ತಿದೆ.

196 ಮೀಟರ್ ಉದ್ದ ಮತ್ತು 1.30 ಮೀಟರ್ ಅಳತೆಯ ತೂಗು ಸೇತುವೆಯನ್ನು ಕೊಣನೂರು ಮತ್ತು ಅದಕ್ಕೆ ಹೊಂದಿಕೊಂಡ 10 ಇತರ ಹಳ್ಳಿಗಳನ್ನು ಸಂಪರ್ಕಿಸಲು ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ತೂಗು ಸೇತುವೆಯನ್ನು ನಿರ್ಮಿಸಲಾಗಿತ್ತು. 

ವರ್ಷಗಳಿಂದ ತೂಗುಸೇತುವೆ ಶಿಥಿಲಾವಸ್ಥೆ ತಲುಪಿದ್ದರೂ ಜಿಲ್ಲಾಡಳಿತ ನಿರ್ಲಕ್ಷಿಸಿತ್ತು. ಗುಜರಾತಿನ ಮೋರ್ಬಿ ದುರಂತದ ರೀತಿ ಮತ್ತೊಂದು ದುರಂತ ಸಂಭವಿಸುವ ಮುನ್ನ ತೂಗು ಸೇತುವೆಯ ದುರಸ್ಥಿ ಅಗತ್ಯವಿತ್ತು. ಈ ತೂಗುಸೇತುವೆ ಎರಡು ಪ್ರವೇಶದ್ವಾರಗಳಲ್ಲಿ ಕಬ್ಬಿಣದ ಶೀಟ್ ಗಳನ್ನು ಹಾಕಲಾಗಿದ್ದು, ಸೇತುವೆಯುದ್ದಕ್ಕೂ ತುಕ್ಕು ಹಿಡಿದಿದ್ದು, ಬಿರುಕುಗಳು ಕಾಣಿಸಿಕೊಂಡಿವೆ. ಸೇತುವೆಗೆ ಹಾಕಲಾಗಿರುವ ಕಬ್ಬಿಣದ ಸರಳುಗಳು ಕೂಡಾ ಹಲವು ವರ್ಷಗಳಿಂದ ನಿರ್ಲಕ್ಷ್ಯದಿಂದ ತುಕ್ಕು ಹಿಡಿದಿವೆ.

 ಹೋಬಳಿ ಕೇಂದ್ರವಾದ ಕೊಣ್ಣನೂರಿಗೆ ನಾನಾ ಉದ್ದೇಶಕ್ಕಾಗಿ ತೆರಳುತ್ತಿದ್ದ ನೂರಾರು ಜನರು ಈ ಸೇತುವೆಯನ್ನೆ ಅವಲಂಬಿಸಿದ್ದರು. ನಿರ್ಬಂಧದ ನಡುವೆಯೂ ಮೋಟಾರು ಸೈಕಲ್ ನಲ್ಲಿ ಜನರು ಸೇತುವೆ ದಾಟುತ್ತಿದ್ದರು. ಈ ಸೇತುವೆ ನಿರ್ಮಾಣಕ್ಕೂ ಮುನ್ನ ಕೊಣನೂರು ತಲುಪಲು ಹೆಚ್ಚುವರಿಯಾಗಿ 12 ಕಿ.ಮೀ. ಸುತ್ತಬೇಕಾಗಿತ್ತು.

ಈ ಸೇತುವೆ ಪ್ರವಾಸಿಗರನ್ನು ಕೂಡಾ ಆಕರ್ಷಿಸುತ್ತದೆ. ಸೇತುವೆ ಮೇಲೆ ಫೋಟೋಶೂಟ್ ಮಾಡುವ ಮೂಲಕ ಅನೇಕ ಮಂದಿ ಕಾಲ ಕಳೆಯುತ್ತಿದ್ದರು. ಗ್ರಾಮ ಪಂಚಾಯಿತಿಯಿಂದ ನಿರ್ವಹಣೆ ಕೊರತೆಯಿಂದ ಸೇತುವೆ ಕೆಟ್ಟ ಸ್ಥಿತಿಗೆ ತಲುಪಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ನೇತೃತ್ವದಲ್ಲಿ ಇತ್ತೀಚಿಗೆ ನಡೆದ ಕೆಡಿಪಿ ಸಭೆಯಲ್ಲಿ ಸೇತುವೆ ರಿಪೇರಿ ವಿಚಾರವನ್ನು ಶಾಸಕ ಎಟಿ ರಾಮಸ್ಥಾಮಿ ಪ್ರಸ್ತಾಪಿಸಿದ್ದಾಗಿ ಸ್ಥಳೀಯರು ಹೇಳುತ್ತಿದ್ದಾರೆ. 

ತೂಗುಸೇತುವೆ ರಿಪೇರಿ ಕಾರ್ಯವನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಎಂಜಿನಿಯರಿಂಗ್ ನಿರ್ದೇಶಿಸಿದ ಗೋಪಾಲಯ್ಯ, ರಿಪೇರಿ ಕಾರ್ಯಕ್ಕೆ ಅನುದಾನ ಒದಗಿಸುವ ಭರವಸೆ ನೀಡಿದರು. ನಿರ್ವಹಣೆ ಕೊರತೆಯಿಂದಾಗಿ ಸೇತುವೆ ಯಾವಾಗ ಬೇಕಾದರೂ ಕುಸಿಯುವ ಹಂತದಲ್ಲಿದ್ದು, ತಾಂತ್ರಿಕ ತಂಡದಿಂದ  ತ್ವರಿತಗತಿಯಲ್ಲಿ ರಿಪೇರಿ ಮಾಡಬೇಕಾದ ಅಗತ್ಯವಿದೆ ಎಂದು ಸ್ಥಳೀಯ ಶಾಸಕ ರಾಮಸ್ವಾಮಿ ಹೇಳಿದ್ದಾರೆ. 

 ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ, ಸೇತುವೆ ರಿಪೇರಿ ಕಾರ್ಯವನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಈಗಾಗಲೇ ನಿರ್ದೇಶಿಸಲಾಗಿದೆ. ಯಾವುದೇ ಅಪಾಯ ಸಂಭವಿಸಿದ್ದರೂ ಎಂಜಿನಿಯರ್ ಗಳೇ ಹೊಣೆ ಹೊರಬೇಕಾಗುತ್ತದೆ. ಇದೇ ಉದ್ದೇಶಕ್ಕಾಗಿ ಸರ್ಕಾರ ಕೂಡಾ ಈಗಾಗಲೇ ಸೂಕ್ತ ಅನುದಾನ ಬಿಡುಗಡೆ ಮಾಡಿದೆ ಎಂದು ತಿಳಿಸಿದರು. ಈ ಸಂಬಂಧ ಗ್ರಾಮ ಪಂಚಾಯಿತಿ ಅಧಿಕಾರಿಗಳಿಂದ ಯಾವುದೇ ಉತ್ತರ ಸಿಗಲಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com