11 ರೂಪಾಯಿ ವಿದ್ಯುತ್ ಬಿಲ್ ಪಾವತಿಸಲು 2.05 ಲಕ್ಷ ಕಳೆದುಕೊಂಡ ಲೆಕ್ಕಿಗ! 

ಆತ ಫ್ರೀಲ್ಯಾನ್ಸ್ ಅಕೌಂಟೆಂಟ್, ಆತ ಪಾವತಿ ಮಾಡಬೇಕಿದ್ದ ವಿದ್ಯುತ್ ಬಿಲ್ ಕೇವಲ 11 ರೂಪಾಯಿಗಳಷ್ಟೇ! ಆದರೆ ಕಳೆದುಕೊಂಡಿದ್ದು 2.05 ಲಕ್ಷ ರೂಪಾಯಿಗಳನ್ನ! 
ಆನ್ ಲೈನ್ ವಂಚನೆ (ಸಂಗ್ರಹ ಚಿತ್ರ)
ಆನ್ ಲೈನ್ ವಂಚನೆ (ಸಂಗ್ರಹ ಚಿತ್ರ)

ಬೆಂಗಳೂರು: ಆತ ಫ್ರೀಲ್ಯಾನ್ಸ್ ಅಕೌಂಟೆಂಟ್, ಆತ ಪಾವತಿ ಮಾಡಬೇಕಿದ್ದ ವಿದ್ಯುತ್ ಬಿಲ್ ಕೇವಲ 11 ರೂಪಾಯಿಗಳಷ್ಟೇ! ಆದರೆ ಕಳೆದುಕೊಂಡಿದ್ದು 2.05 ಲಕ್ಷ ರೂಪಾಯಿಗಳನ್ನ! 

ಎಲ್ಲವೂ ಆಗಿದ್ದು ತಾನು ಬೆಸ್ಕಾಮ್ ನ ಅಧಿಕಾರಿಯೆಂದು ಹೇಳಿ ಕರೆ ಮಾಡಿದ್ದ ವ್ಯಕ್ತಿಯ ಸೂಚನೆಗಳನ್ನು ಪಾಲಿಸಿದ್ದರಿಂದ. 

ಕರೆ ಮಾಡಿದ ವ್ಯಕ್ತಿ 59 ವರ್ಷದ ಅಕೌಂಟೆಂಟ್ ಗೆ ಬಾಕಿ ಹಣ ಪಾವತಿ ಮಾಡಬೇಕಿದ್ದು, ತಾನು ಕಳಿಸಿರುವ ಲಿಂಕ್ ಕ್ಲಿಕ್ ಮಾಡಿ ಹಣ ಪಾವತಿ ಮಾಡದೇ ಇದ್ದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಆನ್ ಲೈನ್ ಮೂಲಕ ಬಿಲ್ ಪಾವತಿ ಮಾಡಲು ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿ ಮೋಸದ ಬಲೆಯಲ್ಲಿ ಸಿಲುಕಿದ್ದರು.

ಬೆಸ್ಕಾಮ್ ತನ್ನ ಗ್ರಾಹಕರಿಗೆ ವಂಚಕರ ಬಗ್ಗೆ ಜಾಗರೂಕವಾಗಿರುವಂತೆ ಎಚ್ಚರಿಕೆ ನೀಡಿದೆ. ಸಂತ್ರಸ್ತ ವ್ಯಕ್ತಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. 

ಹೊಸಕೋಟೆಯಲ್ಲಿರುವ ಕನ್ನಮಂಗಲದ ನಿವಾಸಿ ರವಿಶಂಕರ್ ರಮಣ್ ಸಂತ್ರಸ್ತ ವ್ಯಕ್ತಿಯಾಗಿದ್ದು, ವೈಟ್ ಫೀಲ್ಡ್ ಸಿಇಎನ್ ಪೊಲೀಸ್ ಠಾಣೆಯಲ್ಲಿ ಕಳೆದ ವಾರ ದೂರು ದಾಖಲಿಸಿದ್ದಾರೆ.
 
"ವಾಸ್ತವದಲ್ಲಿ ನನ್ನಿಂದ ಯಾವುದೇ ಬಾಕಿ ಹಣ ಪಾವತಿಯಾಗಬೇಕಾಗಿದ್ದಿರಲಿಲ್ಲ. ಕಳೆದ ತಿಂಗಳ ಬಿಲ್ ನ್ನು ಸರಿಯಾಗಿ ಪಾವತಿಸಿದ್ದೇನೆ. ಆದರೆ 3 ದಿನಗಳಿಂದ ಬಾಕಿ ಹಣ ಪಾವತಿಸುವಂತೆ ನಿರಂತರವಾಗಿ ಮೆಸೇಜ್ ಗಳು ಬರುತ್ತಿತ್ತು. ಮೆಸೇಜ್ ಕಳಿಸುತ್ತಿದ್ದ ವ್ಯಕ್ತಿಗೆ ಕರೆ ಮಾಡಿ ತಪ್ಪು ಮಾಡಿದೆ. ಆ ವಂಚಕ ನನಗೆ ಲಿಂಕ್ ಕಳಿಸಿ ಡೌನ್ ಲೋಡ್ ಮಾಡಿಕೊಳ್ಳುವಂತೆ ಸೂಚಿಸಿದ್ದ, 11 ರೂಪಾಯಿಗಳ ಬಾಕಿ ಇತ್ತು. ಆರೋಪಿ ನನ್ನ ಮೊಬೈಲ್ ನ ಸಂಪೂರ್ಣ ನಿಯಂತ್ರಣ ಪಡೆದುಕೊಂಡು 2.05 ಲಕ್ಷ ರೂಪಾಯಿ ಹಣವನ್ನು ಆತನ ಖಾತೆಗೆ ವರ್ಗಾವಣೆ ಮಾಡಿದ್ದ ಎಂದು ರಮಣ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಹೇಳಿದ್ದಾನೆ. 

ಬೆಸ್ಕಾಮ್ ಪ್ರಧಾನ ವ್ಯವಸ್ಥಾಪಕ ಎಸ್ ಆರ್ ನಾಗರಾಜ್ ಮಾತನಾಡಿ, ನಮ್ಮ ಗ್ರಾಹಕರ ಪೈಕಿ ಹಲವರು ಆನ್ ಲೈನ್ ವಂಚಕರು ಕಳಿಸಿದ ಲಿಂಕ್ ಮೂಲಕ ಬಿಲ್ ಪಾವತಿಸಲು ಹೋಗಿ ಹಣ ಕಳೆದುಕೊಂಡಿದ್ದಾರೆ. ಬೆಸ್ಕಾಮ್ ವಿದ್ಯುತ್ ಬಿಲ್ ಪಾವತಿಸುವಂತೆ ಮನವಿ ಮಾಡಿ ಯಾವುದೇ ಗ್ರಾಹಕರಿಗೂ ಮೆಸೇಜ್ ಕಳಿಸುವುದಿಲ್ಲ ಅಥವಾ ಕರೆ ಮಾಡುವುದಿಲ್ಲ, ಹಲವು ಬಾರಿ ಎಚ್ಚರಿಕೆ ನೀಡಿರುವುದರ ಹೊರತಾಗಿಯೂ ಸೈಬರ್ ವಂಚಕರ ಬಲೆಗೆ ಕೆಲವು ಗ್ರಾಹಕರು ಬಿದ್ದಿದ್ದಾರೆ ಎಂದು ಹೇಳಿದ್ದಾರೆ.
 
ಹಲವು ಮೆಸೇಜ್ ಗಳು ಬರುವುದು ಪಶ್ಚಿಮ ಬಂಗಾಳ ಹಾಗೂ ಉತ್ತರ ಪ್ರದೇಶಗಳಿಂದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com