ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ನಿವಾಸದ ಮೇಲೆ ಐಟಿ ಶೋಧ: ಮದುವೆ ದಿಬ್ಬಣದ ಸೋಗಿನಲ್ಲಿ ಬಂದಿದ್ದ ಅಧಿಕಾರಿಗಳು!

ಕಾಂಗ್ರೆಸ್ ನಾಯಕಿ, ಮಾಜಿ‌ ಎಂಎಲ್ ಸಿ ಗಾಯತ್ರಿ ಶಾಂತೇಗೌಡ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಗಾಯತ್ರಿ ಶಾಂತೇಗೌಡ ನಿವಾಸ
ಗಾಯತ್ರಿ ಶಾಂತೇಗೌಡ ನಿವಾಸ

ಚಿಕ್ಕಮಗಳೂರು: ಕಾಂಗ್ರೆಸ್ ನಾಯಕಿ, ಮಾಜಿ‌ ಎಂಎಲ್ ಸಿ ಗಾಯತ್ರಿ ಶಾಂತೇಗೌಡ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಚಿಕ್ಕಮಗಳೂರು ನಗರದ ಮಾರ್ಕೆಟ್ ರಸ್ತೆಯಲ್ಲಿರುವ ನಿವಾಸ, ಕಚೇರಿ ಬೇಲೂರು ರಸ್ತೆಯಲ್ಲಿರುವ ಅಳಿಯನ ನಿವಾಸದ ಮೇಲೆ ದಾಳಿ ನಡೆಸಿತು.

ಗಾಯತ್ರಿ ಶಾಂತೇಗೌಡ ಅವರ ನಗರದ ಮನೆ, ಕಚೇರಿ, ಮರ್ಲೆ ಗ್ರಾಮದ ಬಳಿಯ ಜಲ್ಲಿ ಕ್ರಷರ್‌ ಸಹಿತ ಆರು ಕಡೆ ಆದಾಯ ತೆರಿಗೆ (ಐಟಿ) ಇಲಾಖೆಯ ಅಧಿಕಾರಿಗಳು ಗುರುವಾರ ಏಕಕಾಲಕ್ಕೆ ದಾಳಿ ಮಾಡಿ, ಪರಿಶೀಲನೆ ನಡೆಸಿದರು. ನಗರದ ಹೂವಿನ ಮಾರುಕಟ್ಟೆ (ಹಿಂದೂ ಮುಸಾಫಿರ್‌ ಛತ್ರ)ಬಳಿ ಇರುವ ಮನೆಯಲ್ಲಿ ಬೆಳಿಗ್ಗೆಯಿಂದ ಬೀಡುಬಿಟ್ಟು ಗಾಯತ್ರಿ ಅವರ ವಹಿವಾಟುಗಳ ಮಾಹಿತಿ, ವಿವರ ಕಲೆ ಹಾಕಿದ್ದಾರೆ. ದಾಖಲೆಗಳನ್ನು ಪರಿಶೀಲಿಸಿದರು.  ದಾಳಿಯ ವೇಳೆ ಗಾಯತ್ರಿ ಶಾಂತೇಗೌಡ ಮನೆಯಲ್ಲಿದ್ದರು ಎಂದು ತಿಳಿದು ಬಂದಿದೆ.

ನಗರದ ಮಾರ್ಕೆಟ್ ರಸ್ತೆಯಲ್ಲಿರುವ ಮನೆಯಲ್ಲಿ ವಾಸವಿರುವ ಗಾಯತ್ರಿ ಶಾಂತೇಗೌಡ ಅವರ ಮನೆ ಮೇಲೆ ದಾಳಿ ನಡೆಸಲು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮದುವೆ ದಿಬ್ಬಣದ ಸೋಗಿನಲ್ಲಿ ಬಂದಿದ್ದಾರೆ. ಯಾರಿಗೂ ಅನುಮಾನ ಬಾರದಂತೆ ಕಾರಿನ ಮುಂಭಾಗದಲ್ಲಿ ಮದುವೆಯ ಬೋರ್ಡ್ ಹಾಕಿದ್ದು, ಅಭಿನವ್ ವೆಡ್ಸ್ ದೀಪಿಕಾ ಎಂದು ಬೋರ್ಡ್ ಹಾಕಲಾಗಿದೆ.

ಗಾಯತ್ರಿ ಶಾಂತೇಗೌಡ ಅವರ ಅಳಿಯ, ಸ್ಥಳೀಯ ಜೆಡಿಎಸ್ ಮುಖಂಡ ಬಿ.ಎಂ.ಸಂತೋಷ್ ಮನೆ ಮೇಲೂ  ಐಟಿ ಅಧಿಕಾರಿಗಳು  ದಾಳಿ ನಡೆಸಿದ್ದಾರೆ.  ಇಬ್ಬರು ಪಿಎಸ್‌ಐಗಳೊಂದಿಗೆ ಎರಡು ಬಾಡಿಗೆ ಕಾರಿನಲ್ಲಿ ಬಂದಿದ್ದ ಅಧಿಕಾರಿಗಳು, ಸಂತೋಷ್ ಮಾಲೀಕತ್ವದ  ಮನೆ, ಹೋಟೆಲ್, ವಸತಿಗೃಹ, ಕಲ್ಯಾಣ ಮಂಟಪದಲ್ಲಿ ದಾಖಲೆ ಪರಿಶೀಲಿಸಿದರು.

ಮಾಜಿ ಎಂಎಲ್ ಸಿ ಗಾಯತ್ರಿ ಶಾಂತೇಗೌಡ ಮುಂಬರುವ ವಿಧಾನಸಭೆ ಚುನಾವಣೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು, ಬಹುತೇಕ ಟಿಕೆಟ್ ಖಚಿತ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹುನ್ನಾರ ನಡೆಸಿ ಚುನಾವಣೆ ಹೊಸ್ತಿಲಲ್ಲಿ ಆದಾಯ ಇಲಾಖೆ ಅಧಿಕಾರಿಗಳಿಂದ ದಾಳಿ ಮಾಡಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿದ್ದ ಕೈ ಕಾರ್ಯಕರ್ತರು ಬಿಜೆಪಿ ಶಾಸಕ ಸಿ.ಟಿ ರವಿ ವಿರುದ್ಧ ಘೋಷಣೆ ಕೂಗಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com