13 ಸಾವಿರ ಹೊಸ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ ಪಟ್ಟಿ ಪ್ರಕಟ: ಮೊದಲ ಬಾರಿಗೆ ತೃತೀಯ ಲಿಂಗಿಗಳಿಗೂ ಅವಕಾಶ!

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇದ್ದ ಪದವೀಧರ ಶಿಕ್ಷಕರ ಹುದ್ದೆಗಳ (6ರಿಂದ 8ನೇ ತರಗತಿ) ನೇಮಕಾತಿ ಸಂಬಂಧ ಶಿಕ್ಷಣ ಇಲಾಖೆಯು ಶುಕ್ರವಾರ ಆಯ್ಕೆಪಟ್ಟಿ ಪ್ರಕಟಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇದ್ದ ಪದವೀಧರ ಶಿಕ್ಷಕರ ಹುದ್ದೆಗಳ (6ರಿಂದ 8ನೇ ತರಗತಿ) ನೇಮಕಾತಿ ಸಂಬಂಧ ಶಿಕ್ಷಣ ಇಲಾಖೆಯು ಶುಕ್ರವಾರ ಆಯ್ಕೆಪಟ್ಟಿ ಪ್ರಕಟಿಸಿದೆ.

15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ (6 ರಿಂದ 8 ನೇ ತರಗತಿ) ನೇಮಕಕ್ಕೆ ಸಂಬಂಧಿಸಿದಂತೆ 1:1 ಅನುಪಾತದಲ್ಲಿ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ. ಒಟ್ಟು 13,363 ಅಭ್ಯರ್ಥಿಗಳು ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 1,637 ಹುದ್ದೆಗಳು ನೇಮಕವಾಗದೇ ಖಾಲಿ ಉಳಿದಿವೆ.

ಒಟ್ಟು 15 ಸಾವಿರ ಹುದ್ದೆಗಳಿಗೆ ನಡೆದ ನೇಮಕಾತಿಯಲ್ಲಿ 13,363 ಹುದ್ದೆಗಳಿಗೆ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಉಳಿದ 1624 ಹುದ್ದೆಗಳಿಗೆ ಯಾವುದೇ ಅಭ್ಯರ್ಥಿಗಳು ಆಯ್ಕೆಯಾಗದ ಕಾರಣ ಆ ಹುದ್ದೆಗಳು ಖಾಲಿ ಉಳಿದಂತಾಗಿದೆ.

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೂವರು ತೃತೀಯ ಲಿಂಗಿಗಳು ಶಿಕ್ಷಕರಾಗಿ ಆಯ್ಕೆಯಾಗಿದ್ದಾರೆ. ಈ ಪೈಕಿ ಚಿಕ್ಕಬಳ್ಳಾಪುರ, ರಾಯಚೂರು  ಮತ್ತು ತುಮಕೂರು ಜಿಲ್ಲೆಗಳ ತೃತಿಯ ಲಿಂಗಿ ಶಿಕ್ಷಕರು ಅವಕಾಶ ಪಡೆದಿದ್ದಾರೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್‌ ಅವರು ಶುಕ್ರವಾರ ನಗರದ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ 1:1 ಅನುಪಾತದ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದರು.

ಇನ್ನು ವಿಷಯವಾರು ಇಂಗ್ಲೀಷ್‌ ಭಾಷೆಯಲ್ಲಿ ಖಾಲಿ ಇದ್ದ 1807 ಹುದ್ದೆಗಳಿಗೆ 1768 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಖಾಲಿ ಇದ್ದ 6500 ಹುದ್ದೆಗಳಿಗೆ 5550, ಸಮಾಜ ಪಾಠಗಳ 4693 ಹುದ್ದೆಗಳಿಗೆ 4521 ಜನ, ಜೀವ ವಿಜ್ಞಾನದ 2000 ಹುದ್ದೆಗಳಿಗೆ 1624 ಮಂದಿ ಆಯ್ಕೆಯಾಗಿದ್ದಾರೆ.

1:1 ಅನುಪಾತದ ಆಯ್ಕೆ ಪಟ್ಟಿಗೂ ಮುನ್ನ 1:2 ಅನುಪಾತದ ಆಯ್ಕೆ ಪಟ್ಟಿಪ್ರಕಟಿಸಲಾಗಿತ್ತು. ಇದಕ್ಕೆ ಆಕ್ಷೇಪಣೆಗಳನ್ನು ಆಹ್ವಾನಿಸಿ ಅವುಗಳನ್ನು ಪರಿಶೀಲಿಸಿ ಅಭ್ಯರ್ಥಿಗಳ ದಾಖಲೆಗಳ ಪರಿಶೀಲಿಸಿ ಬಳಿಕ 1:1 ಅನುಪಾತದ ಪಟ್ಟಿಸಿದ್ಧಪಡಿಸಲಾಗಿದೆ ಎಂದರು. 68,849 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com