ಸಂಚಾರ ದಟ್ಟಣೆ ಸಮಸ್ಯೆ: ಏರ್ಪೋರ್ಟ್ ರಸ್ತೆಯಲ್ಲಿ ಬೆಳಗ್ಗೆ ವೇಳೆ ಸರಕು ಸಾಗಣೆ ವಾಹನಗಳ ನಿಷೇಧ!
ಸಂಚಾರ ದಟ್ಟಣೆ ಸಮಸ್ಯೆ ಹಿನ್ನೆಲೆಯಲ್ಲಿ ನಗರದ ಹೆಬ್ಬಾಳ ಮೇಲ್ಸೇತುವೆಯಲ್ಲಿ ಒಂದು ತಿಂಗಳ ಕಾಲ ಪ್ರಾಯೋಗಿಕವಾಗಿ ಬೆಳಿಗ್ಗೆ 2 ಗಂಟೆಗಳ ಕಾಲ ಸರಕು ಸಾಗಣೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.
Published: 19th November 2022 10:01 AM | Last Updated: 19th November 2022 10:42 AM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಸಂಚಾರ ದಟ್ಟಣೆ ಸಮಸ್ಯೆ ಹಿನ್ನೆಲೆಯಲ್ಲಿ ನಗರದ ಹೆಬ್ಬಾಳ ಮೇಲ್ಸೇತುವೆಯಲ್ಲಿ ಒಂದು ತಿಂಗಳ ಕಾಲ ಪ್ರಾಯೋಗಿಕವಾಗಿ ಬೆಳಿಗ್ಗೆ 2 ಗಂಟೆಗಳ ಕಾಲ ಸರಕು ಸಾಗಣೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.
ಈ ವ್ಯವಸ್ಥೆಯು ಶನಿವಾರದಿಂದಲೇ ಜಾರಿಗೆ ಬರಲಿದ್ದು, ಪ್ರತಿದಿನ ಬೆಳಿಗ್ಗೆ 8.30ರಿಂದ 10.30ರವರೆಗೆ ಸರಕು ಸಾಗಾಣೆ ವಾಹನಗಳ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಈ ಅವಧಿಯಲ್ಲಿನ ಸಂಚಾರ ವ್ಯವಸ್ಥೆ ಸಾಧಕ ಬಾಧಕಗಳನ್ನು ಪರಾಮರ್ಶಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಂಚಾರ ವಿಭಾಗದ ನಗರ ವಿಶೇಷ ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ ಅವರು ಹೇಳಿದ್ದಾರೆ.
ಶುಕ್ರವಾರ ಸಲೀಂ ಅವರು ಇತರೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದು, ಈ ವೇಳೆ ಪರಿಶೀಲನೆ ನಡೆಸಿದರು. ನಗರದ ಹೆಬ್ಬಾಳ, ಯಲಹಂಕ ಹಾಗೂ ಚಿಕ್ಕಜಾಲ ಸೇರಿದಂತೆ ಈಶಾನ್ಯ ಪ್ರದೇಶದಲ್ಲಿ ಕೈಗಾರಿಕೆಗಳು ಮತ್ತು ವಾಣಿಜ್ಯೋದ್ಯಮಗಳು ಕ್ಷಿಪ್ರವಾಗಿ ಬೆಳೆಯುತ್ತಿದೆ. ಅದಕ್ಕೆ ಪೂರಕವಾಗಿ ಜನಸಂಖ್ಯೆಯೂ ಏರುಮುಖವಾಗಿದೆ.
ಇದನ್ನೂ ಓದಿ: ಸಂಚಾರ ದಟ್ಟಣೆ ಸಮಸ್ಯೆ: ಹೆಬ್ಬಾಳ-ಕೆಂಪಾಪುರ ಜಂಕ್ಷನ್'ಗೆ ವಿಶೇಷ ಆಯುಕ್ತ ಭೇಟಿ, ಪರಿಶೀಲನೆ
ಇದರಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಾವಿರಾರು ಜನರು ಸಂಚರಿಸುತ್ತಾರೆ. ಅಲ್ಲದೆ, ಆಗಮಿಸುವ ಗಣ್ಯರು ಕೂಡ ಇದೇ ಮಾರ್ಗದಲ್ಲಿ ಸಂಚರಿಸುವುದರಿಂದ ದೈನಂದಿನ ವಾಹನಗಳಿಗೆ ಸುಗಮ ಸಂಚಾರ ಕಲ್ಪಿಸುವುದು ಪೊಲೀಸರಿಗೆ ಸವಾಲಾಗಿದೆ.
ಇನ್ನು ರಾಷ್ಟ್ರೀಯ ಹೆದ್ದಾರಿ-7ರಲ್ಲಿ ಪ್ರತಿದಿನ ಲಕ್ಷಾಂತರ ಸರಕು ಸಾರಿಗೆ ವಾಹನಗಳು ಸಂಚರಿಸುತ್ತಿವೆ. ಹೀಗಾಗಿ ಪೀಕ್ ಅವರ್ ನಲ್ಲಿ ಅವುಗಳ ಸಂಚಾರದಿಂದ ವಾಹನ ದಟ್ಟಣೆಗೂ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ-7ರ ಸಾದಹಳ್ಳಿ ಜಂಕ್ಷನ್ ನಿಂದ ಹೆಬ್ಬಾಳ ಫ್ಲೈಓವರ್ ವರೆಗೆ ಪ್ರತಿದಿನ ಬೆಳಿಗ್ಗೆ 8.30ರಿಂದ 10.330ರವರೆಗೆ ಸರಕು ಸಾರಿಗೆ ವಾಹನಗಳನ್ನು ನಿಷೇಧಿಸಲಾಗಿದ್ದು, ಪ್ರಾಯೋಗಿಕ ವ್ಯವಸ್ಥೆ ಆಗಿರುವುದರಿಂದ ಸಾರ್ವಜನಿಕರು ಸಹಕರಿಸಬೇಕು ಎಂದು ಸಲೀಂ ಅವರು ಮನವಿ ಮಾಡಿಕೊಂಡಿದ್ದಾರೆ.