ಮಂಗಳೂರು ಸ್ಫೋಟ ಪ್ರಕರಣ: ಎನ್ಐಎ ತನಿಖೆಗೆ ಸರ್ಕಾರ ಆದೇಶ, ಗೃಹ ಸಚಿವರಿಂದ ಅಧಿಕೃತ ಮಾಹಿತಿ

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ತನಿಖೆ ಹೊಣೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಬಗ್ಗೆ ಗೃಹಸಚಿವ ಆರಗ ಜ್ಞಾನೇಂದ್ರ ಅಧಿಕೃತ ಮಾಹಿತಿ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಂಗಳೂರು: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ತನಿಖೆ ಹೊಣೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಬಗ್ಗೆ ಗೃಹಸಚಿವ ಆರಗ ಜ್ಞಾನೇಂದ್ರ ಅಧಿಕೃತ ಮಾಹಿತಿ ನೀಡಿದ್ದಾರೆ.

ಶಂಕಿತ ಉಗ್ರ ಶಾರೀಕ್ ವಿರುದ್ಧ ​ಯುಎಪಿಎ ಕಾಯ್ದೆ ಅನ್ವಯ ಎನ್ಐಎ ತನಿಖೆ ನಡೆಸಲು ರಾಜ್ಯ ಸರ್ಕಾರ ಶಿಫಾರಸು ಮಾಡಿದೆ.

ನವೆಂಬರ್ 19 ಶನಿವಾರ ಸಂಜೆ ಮಂಗಳೂರಿನ ನಾಗುರಿ ಸಮೀಪ ಚಲಿಸುತ್ತಿದ್ದ ಆಟೋದಲ್ಲಿ ಸ್ಫೋಟ ಸಂಭವಿಸಿತ್ತು. ಈ ಪ್ರಕರಣದಲ್ಲಿ ಆಟೋ ಚಾಲಕ ಸೇರಿದಂತೆ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದರು.

ಘಟನೆ ನಡೆದ ಮರುದಿನವೇ ಘಟನಾ ಸ್ಥಳಕ್ಕೆ ಎನ್‌ಐಎ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿತ್ತು. ಮತ್ತೊಂದೆಡೆ ಮಂಗಳೂರು ಪೊಲೀಸರು ಚುರುಕಿನ ತನಿಖೆ ಕೈಗೊಂಡು, ಮಹತ್ವದ ದಾಖಲೆ ಕಲೆ ಹಾಕಿದ್ದರು. ಇದೀಗ ಈ ಪ್ರಕರಣದ ತನಿಖೆಯನ್ನು ಎನ್ಐಎಗೆ ಹಸ್ತಾಂತರಿಸಲಾಗಿದೆ.

ಈ ಕುರಿತಾಗಿ ಪತ್ರಿಕಾ ಹೇಳಿಕೆ ನೀಡಿರುವ ಗೃಹ ಸಚಿವರು, ಮಂಗಳೂರಿನ ಕಂಕನಾಡಿ ಸಮೀಪ ಇತ್ತೀಚೆಗೆ ನಡೆದ ಕುಕ್ಕರ್ ಸ್ಪೋಟ ಘಟನೆಗೆ ಸಂಬಂಧಿಸಿದಂತೆ, ಮುಂದಿನ ತನಿಖೆಯನ್ನು ಕೇಂದ್ರ ತನಿಖಾ ಸಂಸ್ಥೆ ಎನ್ಐಎಗೆ ವರ್ಗಾಯಿಸಲು ರಾಜ್ಯ ಸರಕಾರ ನಿರ್ಧರಿಸಿ ಆಜ್ಞೆ ಹೊರಡಿಸಿದೆ ಎಂದು ಹೇಳಿದ್ದಾರೆ.

ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ, ಪ್ರಾಥಮಿಕ ತನಿಖೆಯಲ್ಲಿ ಸಂಗ್ರಹಿಸಲಾದ ಸಾಕ್ಷ್ಯ ಹಾಗೂ ಇತರ ಮಾಹಿತಿಗಳ ಆಧಾರದ ಮೇಲೆ ರಾಜ್ಯ ಸರಕಾರ ಈ ನಿರ್ಧಾರ ಕೈಗೊಂಡು, ಯುಎಪಿಎ ಕಾಯಿದೆ ಅನ್ವಯ ತನಿಖೆಯನ್ನು ನಡೆಸಲು ಶಿಫಾರಸು ಮಾಡಿದೆ ಎಂದು ತಿಳಿಸಿದರು.

ಕಾರ್ಯವಿಧಾನದ ಪ್ರಕಾರ, ಪ್ರಕರಣದ ತನಿಖೆಯ ಆಧಾರದ ಮೇಲೆ (119/2022) ವಶಪಡಿಸಿಕೊಂಡ ವಸ್ತುಗಳ ಪರೀಕ್ಷೆ ಮತ್ತು ಪೊಲೀಸರು ಇದುವರೆಗೆ ಸಂಗ್ರಹಿಸಿರುವ ಸಾಕ್ಷ್ಯಗಳ ಆಧಾರದ ಮೇಲೆ ರಾಜ್ಯ ಸರ್ಕಾರವು ಗುರುವಾರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದೆ.

ಸೆಕ್ಷನ್ 16, 38 ಮತ್ತು 39 ರ ಭಯೋತ್ಪಾದಕ ಕೃತ್ಯ ಎಸಗಿರುವುದು, ಭಯೋತ್ಪಾದಕ ಸಂಘಟನೆಯ ಸದಸ್ಯರಾಗಿದ್ದಕ್ಕಾಗಿ ಮತ್ತು ಭಯೋತ್ಪಾದಕ ಸಂಘಟನೆಯ ಚಟುವಟಿಕೆಯನ್ನು ಪಾಲ್ಗೊಂಡಿರುವರಿಗೆ ಶಿಕ್ಷೆ ನೀಡುವ ಸಲುವಾಗಿ ಯುಎಪಿಎ ಜಾರಿಗೊಳಿಸಲಾಗಿದೆ. ಈ ಪ್ರಕರಣವು ಯುಎಪಿಎ ಅಡಿಯಲ್ಲಿ ಬರುವ ಅಪರಾಧವಾಗಿದ್ದು, ಎನ್ಐ ಕಾಯಿದೆಯ ಸೆಕ್ಷನ್ 6 ರ ಅಡಿಯಲ್ಲಿ ಬರುತ್ತದೆ, ಅಗತ್ಯ ಮತ್ತು ಮುಂದಿನ ಕ್ರಮಕ್ಕಾಗಿ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಿದೆ ಎಂದು ತಿಳಿದುಬಂದಿದೆ.

ಮಂಗಳೂರು ಸ್ಫೋಟ ಪ್ರಕರಣವನ್ನು ಸ್ಫೋಟಕ ವಸ್ತುಗಳ ಕಾಯಿದೆ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 419, 465, 471, 120 (ಬಿ) ಮತ್ತು 307 ರ ಅಡಿಯಲ್ಲಿ ದಾಖಲಿಸಲಾಗಿದೆ. ಕಂಕನಾಡಿ ಟೌನ್ ಪೊಲೀಸ್ ಠಾಣೆಯು ಪ್ರಕರಣವನ್ನು ಯುಎ(ಪಿ)ಎ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಿಸಿಕೊಂಡಿದೆ.

ಸ್ಫೋಟದ ಸ್ವರೂಪವನ್ನಾಧರಿಸಿ ಪ್ರಕರಣ ಬೆಳಕಿಗೆ ಬಂದ ಆರಂಭದಿಂದಲೂ ಸರ್ಕಾರ ಎನ್ಐಎ ತನಿಖೆಗೆ ನೀಡುವ ಕುರಿತು ಚಿಂತನೆ ನಡಸಿತ್ತು.

ಈ ನಡುವೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಶಾರೀಕ್'ಗೆ ಐಸಿಯುವಿನಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಹೇಳಿಕೆ ನೀಡುವ ಸ್ಥಿತಿಯಲ್ಲಿ ಆತನಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಿನ್ನೆಯಷ್ಟೇ ಪ್ರಮುಖ ಶಂಕಿತ ಮೊಹಮ್ಮದ್ ಶಾರಿಕ್ ಸೇರಿದಂತೆ ಇಬ್ಬರನ್ನು ಗಾಯಗೊಳಿಸಿದ ಮಂಗಳೂರು ಸ್ಫೋಟದ ಹೊಣೆಗಾರಿಕೆಯನ್ನು ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಎಂಬ ಉಗ್ರ ಸಂಘಟನೆ ಹೊತ್ತುಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com