ಅನಾರೋಗ್ಯ ಪೀಡಿತ ಮಗನ ಆರೈಕೆಗೆ ಹೆಚ್ಚುವರಿ ರಜೆ ಪಡೆದುಕೊಂಡಿದ್ದ ಮುಖ್ಯೋಪಾಧ್ಯಾಯಿನಿ: ವೇತನ ಮರುಪಾವತಿಗೆ ಸರ್ಕಾರ ಆದೇಶ

ಅನಾರೋಗ್ಯ ಪೀಡಿತ ಮಗನ ಆರೈಕೆ ಹಿನ್ನೆಲೆಯಲ್ಲಿ ಹೆಚ್ಚುವರಿ ರಜೆ ಪಡೆದುಕೊಂಡಿದ್ದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮುಖ್ಯೋಪಾಧ್ಯಾಯಿನಿಗೆ ರಜೆಯಲ್ಲಿದ್ದಾಗ ಪಡೆದ ಸಂಬಳವನ್ನು ಮರುಪಾವತಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.
ಕಿಶನ್ ಕುಲಕರ್ಣಿ
ಕಿಶನ್ ಕುಲಕರ್ಣಿ

ಹುಬ್ಬಳ್ಳಿ: ಅನಾರೋಗ್ಯ ಪೀಡಿತ ಮಗನ ಆರೈಕೆ ಹಿನ್ನೆಲೆಯಲ್ಲಿ ಹೆಚ್ಚುವರಿ ರಜೆ ಪಡೆದುಕೊಂಡಿದ್ದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮುಖ್ಯೋಪಾಧ್ಯಾಯಿನಿಗೆ ರಜೆಯಲ್ಲಿದ್ದಾಗ ಪಡೆದ ಸಂಬಳವನ್ನು ಮರುಪಾವತಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.

ಭಾರತಿ ಜೋಶಿ ಎಂಬ ಮುಖ್ಯೋಪಾಧ್ಯಾಯಿನಿಗೆ ವೇತನ ಮರುಪಾವತಿ ಮಾಡುವಂತೆ ಆದೇಶಿಸಿದೆ. ಭಾರತಿಯವರ ಪುತ್ರ ಕಿಶನ್ ಕುಲಕರ್ಣಿ ಅವರು ಜುಲೈ 2020 ರಲ್ಲಿ ಪುಣೆಯ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ (NDA) ತರಬೇತಿ ಪಡೆಯುತ್ತಿದ್ದರು. ತರಬೇತಿ ಸಂದರ್ಭದಲ್ಲಿ ಇದ್ದಕ್ಕದ್ದಂತೆ ಅನಾರೋಗ್ಯಕ್ಕೀಡಾಗಿದ್ದರು. ಈ ಸಂದರ್ಭದಲ್ಲಿ ಕೋವಿಡ್ ಸೋಂಕು ಹೆಚ್ಚಾಗಿದ್ದ ಕಾರಣ ಭಾರತಿ ಅವರು ಪುಣೆಗೆ ಪ್ರಯಾಣಿಸಲು ಸಾಧ್ಯವಾಗಿರಲಿಲ್ಲ. ಸರ್ಕಾರ ಕೂಡ ರಜೆಗೆ ಅನುಮತಿ ನೀಡಿರಲಿಲ್ಲ. ನಂತರ 2020ರ ಡಿಸೆಂಬರ್ ನಲ್ಲಿ ರಜೆಗೆ ಅನುಮತಿ ನೀಡಲಾಗಿತ್ತು. ಆದರೆ, ಭಾರತಿಯವರು 2022ರ ಏಪ್ರಿಲ್ ತಿಂಗಳಿನವರೆಗೂ ರಜೆ ಪಡೆದುಕೊಂಡಿದ್ದರು.

ಮುಖ್ಯೋಪಾಧ್ಯಾಯಿನಿಯು ನಿಯಮಗಳನ್ನು ಅನುಸರಿಸಿ ಅವರ ರಜೆಯನ್ನು ಅನುಮೋದಿಸಿದರೂ ಮತ್ತು ಶಿಕ್ಷಣ ಇಲಾಖೆಯಲ್ಲಿನ ಉನ್ನತಾಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಕೂಡ ಇದೀಗ ಮಂಜೂರಾದ ರಜೆ ಮತ್ತು ಆ ಅವಧಿಯಲ್ಲಿ ಅವರು ಪಡೆದ ವೇತನ ಕುರಿತು ಪ್ರಶ್ನೆಗಳು ಎದ್ದಿವೆ.

ಅಕೌಂಟೆಂಟ್ ಜನರಲ್ ಕಚೇರಿ ಈ ಸಂಬಂಧ ಪ್ರಶ್ನೆ ಮಾಡಿದೆ. ಭಾರತಿಯವರು ಡಿಸೆಂಬರ್ 12, 2020 ಮತ್ತು ಏಪ್ರಿಲ್ 13, 2021 ರ ನಡುವೆ 40 ದಿನಗಳ ಕಮ್ಯೂಟೆಡ್ ರಜೆ ಮತ್ತು 90 ದಿನಗಳ ಗಳಿಕೆ ರಜೆಯನ್ನು ತೆಗೆದುಕೊಂಡಿದ್ದಾರೆ. ಆದಾಗ್ಯೂ, ಅವರು ಏಪ್ರಿಲ್ 13, 2021 ರಿಂದ ಏಪ್ರಿಲ್ 7, 2022 ರವರೆಗೆ ಮಕ್ಕಳ ಆರೈಕೆಗಾಗಿ ಪಡೆದ ರಜೆ ಗೊಂದಲಗಳನ್ನು ಮೂಡಿಸಿದೆ. ಅಂತಹ ರಜೆಯನ್ನು ಯಾವ ಅಧಿಕಾರದ ಅಡಿಯಲ್ಲಿ ಮಂಜೂರು ಮಾಡಿದೆ? ಈ ಸಂದರ್ಭದಲ್ಲಿ ವೇತನವನ್ನು ಹೇಗೆ ಪಾವತಿಸಲಾಗಿದೆ. ಜನವರಿ 1, 2021 ಮತ್ತು ಏಪ್ರಿಲ್ 7, 2022 ರ ನಡುವೆ ಪಾವತಿಸಲಾಗಿರುವ ವೇತನವನ್ನು ಹೇಗೆ ವಸೂಲಿ ಮಾಡಲಾಗುತ್ತದೆ ಎಂಬಿತ್ಯಾದಿ ಮಾಹಿತಿಗಳನ್ನು ಕೇಳಿದೆ.

ಹೆಚ್ಚುವರಿ ವೇತನದ ಹಣವನ್ನು ಪಾವತಿ ಮಾಡುತ್ತೇನೆಂದ ಮುಖ್ಯೋಪಾಧ್ಯಾಯಿನಿ
ಏತನ್ಮಧ್ಯೆ, ಭಾರತಿ ಜೋಶಿ ಅವರು ಕೆಲಸ ಮತ್ತು ಅನಾರೋಗ್ಯ ಪೀಡಿತ ಮಗನ ನಡುವೆ ಸಿಲುಕಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಕಿಶನ್‌ನನ್ನು ನೋಡಿಕೊಳ್ಳಲು ಆರ್ಥಿಕ ಸಹಾಯದ ಅಗತ್ಯವಿರುವುದರಿಂದ ಕೆಲಸವನ್ನೂ ನಿರ್ಲಕ್ಷಿಸಲು ಸಾಧ್ಯವಾಗುತ್ತಿಲ್ಲ. ಕುಟುಂಬದಲ್ಲಿ ದುಡಿಯುವ ಏಕೈಕ ಆಧಾರ ಎಂದರೆ ಅದು ಭಾರತಿಯವರಾಗಿದ್ದಾರೆ.

“ಎಜಿ ಕಚೇರಿಯಿಂದ ಬಂದ ಪತ್ರಗಳು ನನ್ನನ್ನು ಚಿಂತೆಗೀಡುಮಾಡುತ್ತಿವೆ. ರಜೆಯ ಸಮಯದಲ್ಲಿ ಡ್ರಾ ಮಾಡಿದ ಹೆಚ್ಚುವರಿ ಹಣವನ್ನು ಪಾವತಿಸಲು ನಾನು ಸಿದ್ಧಳಿದ್ದೇನೆ, ಆದರೆ, ಈಗಾಗಲೇ ಕಿಶನ್‌ನ ಚಿಕಿತ್ಸೆಗಾಗಿ ಸುಮಾರು 12 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿರುವುದರಿಂದ ಮತ್ತು ಪುಣೆಯಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಇದ್ದುದರಿಂದ ಈ ಅವಧಿಯಲ್ಲಿ ಪಡೆದುಕೊಂಡ ಸಂಪೂರ್ಣ ವೇತನವನ್ನು ಪಾವತಿಸಲು ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ.

ಪುಣೆಯ ಕಮಾಂಡ್ ಆಸ್ಪತ್ರೆಯಲ್ಲಿ ಮೇ 2022 ರವರೆಗೆ ಚಿಕಿತ್ಸೆ ಕೊಡಿಸಲಾಗಿತ್ತು, ಅನಾರೋಗ್ಯದ ಸ್ಥಿತಿಯಲ್ಲಿ ಕಿಶಿನ್ ನನ್ನು ಮನೆಗೆ ಕಳುಹಿಸಲಾಯಿತು. ಪುತ್ರನನ್ನು ನೋಡಿಕೊಳ್ಳಲು ಹೆಚ್ಚಿನ ರಜೆಯ ಅಗತ್ಯವಿದೆ. ಆದ್ದರಿಂದ ಇನ್ನೂ 360 ದಿನಗಳ ಅರ್ಹ ರಜೆಯನ್ನು ಇಲಾಖೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಈ ನಡುವೆ ಘಟನೆ ಸಂಬಂಧ ಟ್ವೀಟ್ ಮಾಡಿರುವ ಮಾಜಿ ಸೇನಾ ಮುಖ್ಯಸ್ಥ ಜನರಲ್ ವಿ ಪಿ ಮಲಿಕ್ ಅವರು, ಇದು ನಿಜಕ್ಕೂ ಹೃದಯಹೀನ ಘಟನೆಯಾಗಿದೆ. ಕುಟುಂಬಕ್ಕಾಗಿ ನಾವು ಏನಾದರೂ ಮಾಡಬೇಕು. ತರಬೇತಿ ವೇಳೆ ತೀವ್ರ ಗಾಯಗೊಂಡ ನಂತರ ಅವರ ಮಗ ಎನ್‌ಡಿಎಯಿಂದ ವಾಪಸಾದರು ಎಂದು ಹೇಳಿದ್ದು, ಈ ಟ್ವೀಟ್ ನ್ನು ಪ್ರಧಾನಿ ಮೋದಿ, ರಕ್ಷಣಾ ಸಚಿವರು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಟ್ಯಾಗ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com