ಇಂದು ಸಂವಿಧಾನ ದಿನಾಚರಣೆ: ನಾಡಿನ ಜನತೆಗೆ ಸಿಎಂ ಬೊಮ್ಮಾಯಿ, ಗಣ್ಯರಿಂದ ಶುಭಾಶಯ

ಇಂದು ಸಂವಿಧಾನ ದಿನ ಆಚರಣೆ ಹಿನ್ನೆಲೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ​ಸೇರಿದಂತೆ ಗಣ್ಯರು ನಾಡಿನ ಸಮಸ್ತ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಬೆಂಗಳೂರು: ಇಂದು ಸಂವಿಧಾನ ದಿನ ಆಚರಣೆ ಹಿನ್ನೆಲೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ​ಸೇರಿದಂತೆ ಗಣ್ಯರು ನಾಡಿನ ಸಮಸ್ತ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಬೊಮ್ಮಾಯಿಯವರು, 1949ರ ನವೆಂಬರ್ 26ರಂದು ಭಾರತದ ಸಂವಿಧಾನವನ್ನು ಅಂದಿನ ಸಂವಿಧಾನ ಸಭೆ ಅಂಗೀಕರಿಸಿತು. ನಮ್ಮ ಸಂವಿಧಾನದ ಸದಾಶಯಗಳನ್ನು ಸಂರಕ್ಷಿಸುವ ಹಾಗೂ ಪಾಲಿಸುವ ದೃಢನಿಶ್ಚಯದೊಂದಿಗೆ , ಸಂವಿಧಾನದ ಕರ್ತೃಗಳನ್ನು ಸ್ಮರಿಸಿ, ಸಂವಿಧಾನಕ್ಕೆ ಸದಾ ಬದ್ಧವಾಗಿರುವ ಸಂಕಲ್ಪವನ್ನು ಮಾಡೋಣ ಎಂದು ಹೇಳಿದ್ದಾರೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಟ್ವೀಟ್ ಮಾಡಿ, ಸಮಸ್ತ ನಾಗರಿಕರಿಗೆ ಭಾರತದ ಸಂವಿಧಾನ ದಿನದ ಹಾರ್ದಿಕ ಶುಭಾಶಯಗಳು. ನಾವೆಲ್ಲರೂ ಸ್ವಾತಂತ್ರ್ಯ ಹಾಗೂ ಸ್ವಾಭಿಮಾನದಿಂದ ಬದುಕುವಂತೆ ಮಾಡಿರುವ ಸಂವಿಧಾನ ಇದೇ ದಿನ ಅಂಗೀಕಾರವಾಯಿತು. ನಮ್ಮ ಸಂವಿಧಾನದ ಶ್ರೇಷ್ಠತೆ, ಮಹತ್ವ, ಹಕ್ಕು ಹಾಗೂ ಕರ್ತವ್ಯಗಳ ಬಗ್ಗೆ ಹೆಚ್ಚು ಅರಿತುಕೊಳ್ಳೋಣ ಎಂದು ತಿಳಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಟ್ವೀಟ್ ಮಾಡಿ, ಇಂದು ಭಾರತ ಸಂವಿಧಾನ ದಿನ. ಸ್ವತಂತ್ರ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವರಿಗೂ ಸಮಾನತೆ ನೀಡಿದ ಪುಣ್ಯದಿನ. ನಮ್ಮ ಸಂವಿಧಾನದ ಆಶಯಗಳನ್ನು ಸದಾ ಸಂರಕ್ಷಿಸುವ ಹಾಗೂ  ಪಾಲಿಸುವ ಕಂಕಣ ತೊಟ್ಟು ನಮ್ಮ ಎಲ್ಲ ಸಂವಿಧಾನ ಕರ್ತೃಗಳನ್ನು ಸ್ಮರಿಸೋಣ, ಸಂವಿಧಾನಕ್ಕೆ ಸದಾ ಬದ್ಧರಾಗಿರುವ ಸಂಕಲ್ಪವನ್ನು ಮಾಡೋಣ ಎಂದು ಹೇಳಿದ್ದಾರೆ.

ಬಿಸಿ ಪಾಟೀಲ್ ಅವರು ಟ್ವೀಟ್ ಮಾಡಿ, ಸರ್ವರಿಗೂ ರಾಷ್ಟ್ರೀಯ ಸಂವಿಧಾನ ದಿನದ ಶುಭಾಶಯಗಳು. ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರು ರಚಿಸಿದ ಈ ಸಂವಿಧಾನವನ್ನು ಗೌರವಿಸೋಣ ಎಂದು ಹೇಳಿದ್ದಾರೆ.

ಸಚಿವ ಎಸ್.ಟಿ.ಸೋಮಶೇಖರ್ ಅವರು ಟ್ವೀಟ್ ಮಾಡಿ, ಸ್ವಾತಂತ್ರ್ಯ, ಸಮಾನತೆ, ಬ್ರಾತೃತ್ವದ ಸಂಕೇತವಾದ ಭಾರತೀಯ ಸಂವಿಧಾನ ದಿನದ ಹಾರ್ದಿಕ ಶುಭಾಶಯಗಳು. ಸಂವಿಧಾನ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯೋಣ ಎಂದು ಹೇಳಿದ್ದಾರೆ.

ಸಚಿವ ಶ್ರೀರಾಮುಲು ಅವರು ಟ್ವೀಟ್ ಮಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಸಂವಿಧಾನ ರಚನಾ ಸಮಿತಿಯ ಸದಸ್ಯರನ್ನು ನಾವೆಲ್ಲರೂ ಸ್ಮರಿಸೋಣ ಎಂದು ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಟ್ವೀಟ್ ಮಾಡಿ, ನಮ್ಮ ಶ್ರೇಷ್ಠ ಸಂವಿಧಾನವೇ ನಮ್ಮ ಧರ್ಮ, ನಮ್ಮ ಹೆಮ್ಮೆ. ಪ್ರತಿಯೊಬ್ಬ ಭಾರತೀಯನ ಸ್ವಾತಂತ್ರ್ಯ, ಹಕ್ಕುಗಳನ್ನು ಸಂರಕ್ಷಿಸುವ ನಮ್ಮ  ಸಂವಿಧಾನದ ಸದಾಶಯಗಳನ್ನು ಸದಾ ಎತ್ತಿ ಹಿಡಿಯೋಣ, ಸಂವಿಧಾನದತ್ತ ಕರ್ತವ್ಯಗಳನ್ನು ತಪ್ಪದೇ ಪಾಲಿಸೋಣ. ಸರ್ವರಿಗೂ ಸಂವಿಧಾನ ದಿವಸದ ಶುಭಕಾಮನೆಗಳು ಎಂದು ತಿಳಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿ, ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರಕ್ಕಾಗಿ, ಸಧೃಡ ಭಾರತ ನಿರ್ಮಾಣಕ್ಕಾಗಿ ಭದ್ರ ಅಡಿಪಾಯ ಹಾಕಲು ಸಂವಿಧಾನವನ್ನು ರಚಿಸಿ ಅಂಗೀಕರಿಸಿದ ದಿನವನ್ನು ಇಂದು 'ಸಂವಿಧಾನ ದಿನ'ವಾಗಿ ಆಚರಿಸಲಾಗುತ್ತಿದೆ.‌ ಈ ಸಂದರ್ಭದಲ್ಲಿ ಸಂವಿಧಾನದ ರಕ್ಷಣೆಗೆ ನಾವೆಲ್ಲರೂ ಪಣ ತೊಡುವ ಮೂಲಕ ಈ ಸಂಭ್ರಮವನ್ನು ಆಚರಿಸೋಣ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com