ನಾಗರಹೊಳೆಯಲ್ಲಿ ಮೂರು ಹುಲಿ ಮರಿಗಳ ಪೈಕಿ ಗಂಡು ಹುಲಿ ಸಾವು
ನಾಗರಹೊಳೆ ಹುಲಿ ಸಂರಕ್ಷಿತಾರಣ್ಯದ ಅಂತರಸಂತೆ ವನ್ಯಜೀವಿ ವಲಯ ವ್ಯಾಪ್ತಿಯ ಕಾಡಂಚಿನಲ್ಲಿ ಉರುಳಿಗೆ ಸಿಲುಕಿ ಇತ್ತೀಚಿಗೆ ಹತ್ಯೆಯಾದ ಹೆಣ್ಣು ಹುಲಿಯ ಮೂರು ಹುಲಿ ಮರಿಗಳ ಪೈಕಿ ಗಂಡು ಹುಲಿ ಮರಿಯೊಂದು ಮೃತಪಟ್ಟಿದೆ.
Published: 28th November 2022 02:10 PM | Last Updated: 28th November 2022 02:17 PM | A+A A-

ಟ್ರ್ಯಾಪಿಂಗ್ ಕ್ಯಾಮರಾದಲ್ಲಿ ಸೆರೆಯಾಗಿರುವ ಹುಲಿ ಮರಿಗಳ ದೃಶ್ಯ.
ಮೈಸೂರು: ನಾಗರಹೊಳೆ ಹುಲಿ ಸಂರಕ್ಷಿತಾರಣ್ಯದ ಅಂತರಸಂತೆ ವನ್ಯಜೀವಿ ವಲಯ ವ್ಯಾಪ್ತಿಯ ಕಾಡಂಚಿನಲ್ಲಿ ಉರುಳಿಗೆ ಸಿಲುಕಿ ಇತ್ತೀಚಿಗೆ ಹತ್ಯೆಯಾದ ಹೆಣ್ಣು ಹುಲಿಯ ಮೂರು ಹುಲಿ ಮರಿಗಳ ಪೈಕಿ ಗಂಡು ಹುಲಿ ಮರಿಯೊಂದು ಮೃತಪಟ್ಟಿದೆ. ನಾಪತ್ತೆಯಾಗಿದ್ದ ಹುಲಿ ಮರಿಗಳಿಗಾಗಿ ಅರಣ್ಯ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾಗ ತಾರಕ ಅರಣ್ಯದ ವಲಯದ ಅಂತರ ಸಂತೆ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಗಂಡು ಹುಲಿ ಮರಿಯ ಕಳೇಬರ ಪತ್ತೆಯಾಗಿದೆ.
ಈ ಮರಿಯ ಕುತ್ತಿಗೆ, ಭುಜದ ಭಾಗದಲ್ಲಿ ಗಾಯದ ಗುರುತುಗಳು ಕಂಡುಬಂದಿದ್ದು, ಮುಂಗಾಲು ಮುರಿದಿದೆ. ಈ ಅರಣ್ಯದಲ್ಲಿ ಪ್ರಬಲ ಗಂಡು ಹುಲಿಯೊಂದಿಗೆ ನಡೆದ ಹೋರಾಟದಲ್ಲಿ ಮರಿ ಹುಲಿ ಸಾವನ್ನಪ್ಪಿರುವ ಸಾಧ್ಯತೆಯಿರುವುದಾಗಿ ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ. ಅದರ ದೇಹದ ಮಾದರಿಗಳನ್ನು ಪರೀಕ್ಷೆಗಾಗಿ ತೆಗೆದುಕೊಂಡ ನಂತರ ಸಂಪ್ರದಾಯದಂತೆ ಕಳೇಬರವನ್ನು ಸುಡಲಾಯಿತು.
ಉಳಿದ ಮರಿಗಳಿ ಪತ್ತೆಗಾಗಿ ಹುಡುಕಾಟ ಮುಂದುವರೆಸಿದ್ದೇವೆ ಎಂದು ನಾಗರಹೊಳೆ ನಿರ್ದೇಶಕ ಹರ್ಷಕುಮಾರ್ ಹೇಳಿದ್ದಾರೆ. ನವೆಂಬರ್ 12 ರಂದು ಹೆಣ್ಣು ಹುಲಿ ಮೃತಪಟ್ಟ ನಂತರ ಮೂರು ಮರಿಗಳು ನಾಪತ್ತೆಯಾಗಿದ್ದವು. ಈ ಮರಿಗಳ ಚಲನ ವಲನ ಕಂಡುಹಿಡಿಯಲು ಅಂತರಸಂತೆ ಅರಣ್ಯ ವಲಯದಲ್ಲಿ ಅರಣ್ಯಾಧಿಕಾರಿಗಳು ಶೋಧ ಕಾರ್ಯಾಚರಣೆ ಕೈಗೊಂಡಿದ್ದರು.
ಇದನ್ನೂ ಓದಿ: ನಾಗರಹೊಳೆಯಲ್ಲಿ ಕಾಣೆಯಾಗಿದ್ದ 3 ಹುಲಿ ಮರಿಗಳು ಪತ್ತೆ: ಟ್ರ್ಯಾಪಿಂಗ್ ಕ್ಯಾಮರಾದಲ್ಲಿ ದೃಶ್ಯ ಸೆರೆ
ಅರಣ್ಯಾಧಿಕಾರಿಗಳು 30 ಕ್ಯಾಮೆರಾ ಟ್ರ್ಯಾಪ್‌ಗಳನ್ನು ಹಾಕಿದ್ದರು ಮತ್ತು ಮರಿಗಳನ್ನು ಪತ್ತೆಹಚ್ಚಲು ಎರಡು ಡ್ರೋನ್ ಕ್ಯಾಮೆರಾಗಳನ್ನೂ ಬಳಸಲಾಗಿತ್ತು. ನವೆಂಬರ್ 15 ರಂದು ಜಿಂಕೆಯ ಅರ್ಧ ತಿಂದ ಮೃತದೇಹ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಜಿಂಕೆಯ ಮೃತದೇಹದ ಸುತ್ತಲೂ ಕ್ಯಾಮೆರಾಗಳನ್ನು ಹಾಕಲಾಗಿತ್ತು.
ನವೆಂಬರ್ 16 ರಂದು ಅರಣ್ಯಾಧಿಕಾರಿಗಳು ಟ್ರ್ಯಾಪ್ ಕ್ಯಾಮೆರಾಗಳಲ್ಲಿ ಸೆರೆಹಿಡಿಯಲಾದ ಫೋಟೋಗಳು ಮತ್ತು ವೀಡಿಯೊಗಳನ್ನು ವೀಕ್ಷಿಸಲು ಮೆಮೊರಿ ಕಾರ್ಡ್ ತೆಗೆದು ನೋಡಿದಾಗ, ಮೂರು ಮರಿಗಳು ಜಿಂಕೆಯ ಮೃತದೇಹವನ್ನು ತಿನ್ನುತ್ತಿರುವುದು ಕಂಡುಬಂದಿದೆ ಎಂದು ಹೇಳಿದ್ದಾರೆ.