ಗಡಿ ವಿವಾದ: ಮಹಾರಾಷ್ಟ್ರ ಬಸ್ ಸಿಬ್ಬಂದಿ ಗೌರವಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರಿಂದ ವಿನೂತನ ಪ್ರತಿಭಟನೆ!
ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣಕುಮಾರ ಶೆಟ್ಟಿ ಬಣದ ಕಾರ್ಯಕರ್ತರು ಮಹಾರಾಷ್ಟ್ರ ರಾಜ್ಯ ಸಾರಿಗೆ ಸಂಸ್ಥೆಯ ಚಾಲಕರು ಮತ್ತು ನಿರ್ವಾಹಕರನ್ನು ಸನ್ಮಾನಿಸುವ ಮೂಲಕ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ವಿನೂತನವಾಗಿ ಪ್ರತಿಭಟನೆ ನಡೆಸಿದರು.
Published: 30th November 2022 12:12 PM | Last Updated: 30th November 2022 02:36 PM | A+A A-

ಮಹಾರಾಷ್ಟ್ರ ಸಾರಿಗೆ ಸಂಸ್ಥೆ ಸಿಬ್ಬಂದಿಗಳ ಸನ್ಮಾನಿಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು.
ಅಥಣಿ: ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣಕುಮಾರ ಶೆಟ್ಟಿ ಬಣದ ಕಾರ್ಯಕರ್ತರು ಮಹಾರಾಷ್ಟ್ರ ರಾಜ್ಯ ಸಾರಿಗೆ ಸಂಸ್ಥೆಯ ಚಾಲಕರು ಮತ್ತು ನಿರ್ವಾಹಕರನ್ನು ಸನ್ಮಾನಿಸುವ ಮೂಲಕ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲಕರು ಹಾಗೂ ನಿರ್ವಾಹಕರಿಗೆ ರಕ್ಷಣಾ ವೇದಿಕೆಯ ಕಾರ್ಯಕರ್ತರು ಕರ್ನಾಟಕ ಲಾಂಛನದೊಂದಿಗೆ ಹಾರ, ಶಾಲು ಹೊದಿಸಿ ಸನ್ಮಾನಿಸಿದರು. ಈ ಮೂಲಕ “ಗಡಿ ವಿವಾದದಿಂದಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಜನರಿಗೆ ಸೇವೆಯನ್ನು ಒದಗಿಸುವ ಬಸ್‌ಗಳಂತಹ ಸರ್ಕಾರಿ ಆಸ್ತಿಯನ್ನು ಹಾನಿ ಮಾಡಬೇಡಿ ಎಂಬ ಸಂದೇಶವನ್ನು ರವಾನಿಸಿದರು.
ಪ್ರತಿಭಟನೆಯ ನಂತರ ಕಾರ್ಯಕರ್ತರು ಅಥಣಿ ತಹಶೀಲ್ದಾರ್ ಸುರೇಶ ಮುಂಗೆ ಅವರಿಗೆ ಮನವಿ ಪತ್ರ ಸಲ್ಲಿಸಿದ್ದು, ಗಡಿ ವಿವಾದ ಕುರಿತು ಚರ್ಚಿಸಲು ಸರ್ಕಾರ ಸರ್ವಪಕ್ಷ ಸಭೆ ನಡೆಸಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಇದೇ ವೇಳೆ ಸಭೆಗೆ ಕಾನೂನು ತಜ್ಞರು ಮತ್ತು ಕನ್ನಡಪರ ಸಂಘಟನೆಗಳನ್ನು ಆಹ್ವಾನಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಗಡಿ ವಿವಾದ: ಸುಪ್ರೀಂ ನಲ್ಲಿ ನಾಳೆ ವಿಚಾರಣೆ, ರಾಜ್ಯದ ಪರ ಸಮರ್ಥ ವಾದ ನಡೆಸುವ ಭರವಸೆಯಿದೆ- ಸಿಎಂ ಬೊಮ್ಮಾಯಿ
ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಕನ್ನಡಿಗರನ್ನು ರಕ್ಷಿಸುವ ಜೊತೆಗೆ ಕರ್ನಾಟಕದಲ್ಲಿ ಶಿವಸೇನೆ ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿಯಂತಹ ರಾಜಕೀಯ ಪಕ್ಷಗಳನ್ನು ನಿಷೇಧಿಸುವಂತೆ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಕ.ರ.ವೇ ತಾಲೂಕು ಅಧ್ಯಕ್ಷ ಅಣ್ಣಾಸಾಬ್ ತೆಲಸಂಗ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಜಿಲ್ಲಾ ಸಂಯೋಜಕ ಜಗನ್ನಾಥ ಬಾಮನೆ, ದೀಪಕ ಶಿಂಧೆ ಮತ್ತಿತರರು ಉಪಸ್ಥಿತರಿದ್ದರು.