ಕೆಆರ್'ಇಡಿಎಲ್ ಅಧಿಕಾರಿ ಡಿ ಕೆ ದಿನೇಶ್ ಕುಮಾರ್ ನಿಗೂಢ ಸಾವು

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಲಿಮಿಟೆಡ್ (ಕೆಆರ್‌ಇಡಿಎಲ್) ಯೋಜನಾ ನಿರ್ದೇಶಕ ಡಿ ಕೆ ದಿನೇಶ್ ಕುಮಾರ್ ಅವರು ಸೋಮವಾರ ಮೈಸೂರಿನ ಬೋಗಾದಿ 2ನೇ ಹಂತದಲ್ಲಿರುವ ತಮ್ಮ ನಿವಾಸದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ದಿನೇಶ್ ಕುಮಾರ್
ದಿನೇಶ್ ಕುಮಾರ್

ಮೈಸೂರು: ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಲಿಮಿಟೆಡ್ (ಕೆಆರ್‌ಇಡಿಎಲ್) ಯೋಜನಾ ನಿರ್ದೇಶಕ ಡಿ ಕೆ ದಿನೇಶ್ ಕುಮಾರ್ ಅವರು ಸೋಮವಾರ ಮೈಸೂರಿನ ಬೋಗಾದಿ 2ನೇ ಹಂತದಲ್ಲಿರುವ ತಮ್ಮ ನಿವಾಸದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ದಿನೇಶ್ ಅವರ ಸಂಬಂಧಿಕರು ಇದೊಂದು ಕೊಲೆ ಎಂದು ಶಂಕಿಸಿದ್ದು, ಪ್ರಾಥಮಿಕ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ಹೇಳಲಾಗಿದೆ.

ಶ್ರೀರಂಗಪಟ್ಟಣ ತಾಲೂಕಿನ ದೊಡ್ಡಪಾಳ್ಯ ಗ್ರಾಮದವರಾದ ಕುಮಾರ್ (50) ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ದಿನೇಶ್ ಅವರ ಪತ್ನಿ ಆಶಾ ಅವರ ಹೇಳಿಕೆಯಂತೆ, ಅವರು ತಮ್ಮ ಪತಿ ಮತ್ತು 12 ವರ್ಷದ ಮಗನೊಂದಿಗೆ ಭಾನುವಾರ ರಾತ್ರಿ ಊಟ ಮಾಡಿ ಮಲಗಿದ್ದಾರೆ. ಸೋಮವಾರ ಬೆಳಗ್ಗೆ ಆಕೆ ಮತ್ತು ಆಕೆಯ ಮಗ ಎದ್ದು ನೋಡಿದಾಗ ದಿನೇಶ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದದ್ದು ಕಂಡುಬಂದಿದೆ. ಬಳಿಕ ಮನೆಯ ಸಹಾಯಕರೊಂದಿಗೆ ಸಮೀಪದ ಕಾಮಾಕ್ಷಿ ಆಸ್ಪತ್ರೆಗೆ ದಿನೇಶ್ ಅವರನ್ನು ಕರೆದುಕೊಂಡು ಹೋಗಿದ್ದಾರೆ. ತಪಾಸಣೆ ನಡೆಸಿದ ವೈದ್ಯರು ದಿನೇಶ್ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.

ದಿನೇಶ್ ಅವರ ದೇಹದ ಮೇಲೆ ಗಾಯದ ಗುರುತುಗಳು ಕಂಡುಬಂದಿವೆ, ಅಲ್ಲದೆ, ಬಾಯಿಯಿಂದ ರಕ್ತ ಸೋರುತ್ತಿರುವುದು ಬಂದಿದೆ ಎಂದು ಪೊಲೀಸರು ಹೇಳಿದ್ದು, ಸಾವಿನ ಸುತ್ತ ಹಲವು ಅನುಮಾನಗಳು ಮೂಡತೊಡಗಿವೆ.

ಮೃತದೇಹವನ್ನು ಪರಿಶೀಲಿಸಿದ ಪೊಲೀಸರು ದಿನೇಶ್ ಎರಡು ದಿನಗಳ ಹಿಂದೆ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

ಆದರೆ, ದಿನೇಶ್ ಅವರ ಚಿಕ್ಕಪ್ಪ, ಮಂಡ್ಯ ನಿವಾಸಿ ಎಚ್ ಎಂ ನಾರಾಯಣ ಅವರು ಸರಸ್ವತಿಪುರಂ ಠಾಣೆಗೆ ದೂರು ನೀಡಿದ್ದು, ದಿನೇಶ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ದಿನೇಶ್ ಅವರ ಪತ್ನಿ ಮತ್ತು ಸೇವಕರನ್ನು ವಿಚಾರಣೆಗೆ ಒಳಪಡಿಸುವಂತೆ ಒತ್ತಾಯಿಸಿದ್ದಾರೆ.

ದಿನೇಶ್ ಈ ಹಿಂದೆ ಮೈಸೂರಿನ ಕೆಆರ್‌ಇಡಿಎಲ್‌ನಲ್ಲಿ ಸೇವೆ ಸಲ್ಲಿಸಿದ್ದರು. ಅವರು ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ (ಭಾರತ) ಮೈಸೂರಿನ ಗೌರವ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಮೈಸೂರು ಪೊಲೀಸ್ ಆಯುಕ್ತ ಬಿ ರಮೇಶ್ ಅವರು ಮಾತನಾಡಿ, ಎಂಎಂಸಿಆರ್'ಐ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಶವ ಪರೀಕ್ಷೆ ವೇಳೆ ದಿನೇಶ್ ಅವರ ಅಪದಮನಿಗಳಲ್ಲಿ ಶೇ.80ರಷ್ಟು ಬ್ಲಾಕೇಜ್ ಕಂಡು ಬಂದಿದ್ದು, ಇದರಿಂದ ಹೃದಯಾಘಾತವಾಗಿದೆ ಎಂದು ಹೇಳಿದ್ದಾರೆ.

ಸಾವಿನ ಕಾರಣವನ್ನು ಕಂಡುಹಿಡಿಯಲು ಒಳಾಂಗಗಳನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು ವರದಿಯು ಕೆಲವೇ ದಿನಗಳಲ್ಲಿ ಕೈಸೇರಲಿದೆ ಎಂದು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com