ಬೆಂಗಳೂರು: ವೈಟ್‌ಫೀಲ್ಡ್ ಗೂಡ್ಸ್ ಟರ್ಮಿನಲ್ ಟ್ರ್ಯಾಕ್‌ನಲ್ಲಿ ವಿದ್ಯುತ್ ಶಾಕ್ ಹೊಡೆದು ಇಬ್ಬರು ಮಕ್ಕಳಿಗೆ ಗಂಭೀರ ಗಾಯ

ವೈಟ್‌ಫೀಲ್ಡ್ ಸ್ಯಾಟಲೈಟ್ ಗೂಡ್ಸ್ ಟರ್ಮಿನಲ್ (ಎಸ್‌ಜಿಡಬ್ಲ್ಯುಎಫ್) ಟ್ರ್ಯಾಕ್‌ನಲ್ಲಿ ಶುಕ್ರವಾರ ರಾತ್ರಿ ವಿದ್ಯುತ್ ಶಾಕ್ ಹೊಡೆದು ಇಬ್ಬರು ಮಕ್ಕಳಿಗೆ ಗಾಯಗಳಾಗಿರುವ ಘಟನೆ ನಡೆದಿದೆ.
ವೈಟ್‌ಫೀಲ್ಡ್ ರೈಲ್ವೇ ನಿಲ್ದಾಣ.
ವೈಟ್‌ಫೀಲ್ಡ್ ರೈಲ್ವೇ ನಿಲ್ದಾಣ.

ಬೆಂಗಳೂರು: ವೈಟ್‌ಫೀಲ್ಡ್ ಸ್ಯಾಟಲೈಟ್ ಗೂಡ್ಸ್ ಟರ್ಮಿನಲ್ (ಎಸ್‌ಜಿಡಬ್ಲ್ಯುಎಫ್) ಟ್ರ್ಯಾಕ್‌ನಲ್ಲಿ ಶುಕ್ರವಾರ ರಾತ್ರಿ ವಿದ್ಯುತ್ ಶಾಕ್ ಹೊಡೆದು ಇಬ್ಬರು ಮಕ್ಕಳಿಗೆ ಗಾಯಗಳಾಗಿರುವ ಘಟನೆ ನಡೆದಿದೆ.

ಇಬ್ಬರು ಮಕ್ಕಳಿಗೂ ರೈಲಿಗೆ ವಿದ್ಯುತ್ ನೀಡುವ ಓವರ್‌ಹೆಡ್ ಹೈಟೆನ್ಶನ್ ವಿದ್ಯುತ್ ತಂತಿ ತಗುಲಿದೆ ಎಂದು ಬಹು ರೈಲ್ವೆ ಮೂಲಗಳು ಮಾಹಿತಿ ನೀಡಿದೆ.

ಘಟನೆಯಲ್ಲಿ 14 ವರ್ಷದ ಬಾಲಕಿಗೆ ಶೇ.60 ರಷ್ಟು ಸುಟ್ಟ ಗಾಯಗಳಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.

15 ವರ್ಷದ ಬಾಲಕನಿಗೆ ಶೇ.10 ರಷ್ಟು ಸುಟ್ಟ ಗಾಯಗಳಾಗಿವೆ ಎಂದು ಹಿರಿಯ ಸರ್ಕಾರಿ ರೈಲ್ವೆ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇಬ್ಬರೂ ಮಕ್ಕಳು ಹೂಡಿಯಲ್ಲಿರುವ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಗಿದ್ದು, ಓಡಾಡಿಕೊಂಡು ಬರಲು ಮಕ್ಕಳು ಗೂಡ್ಸ್ ಸ್ಟೇಷನ್‌ಗೆ ತೆರಳಿದ್ದರು ಎಂದು ತಿಳಿದುಬಂದಿದೆ.

ಘಟನೆ ಸಂಭವಿಸಿದ ರಾತ್ರಿ ಎನ್‌ಸಿಆರ್ (ನಾನ್-ಕಾಗ್ನೈಸಬಲ್ ವರದಿ) ಸಲ್ಲಿಸಿದ್ದೇವೆ. ಗಾಯಾಳುಗಳು ಮಾತನಾಡುವ ಸ್ಥಿತಿಯಲ್ಲಿಲ್ಲ ಮತ್ತು ಅವರ ಪೋಷಕರೂ ಕೂಡ ಯಾವುದೇ ಮಾಹಿತಿ ನೀಡುತ್ತಿಲ್ಲ. ಅವರು ಆಘಾತಕ್ಕೊಳಗಾಗಿದ್ದಾರೆಂದು ಜಿಆರ್‌ಪಿ ಅಧಿಕಾರಿಗಳು ಹೇಳಿದ್ದಾರೆ.

ಇಬ್ಬರು ಮಕ್ಕಳು ಕಿರುಚಾಟವನ್ನು ಕೇಳಿದ ನಂತರ ಎಸ್‌ಜಿಡಬ್ಲ್ಯುಎಫ್‌ನಲ್ಲಿ ಗಸ್ತು ಕರ್ತವ್ಯದಲ್ಲಿದ್ದ ಪೋಲೀಸರು ರಾತ್ರಿ 8.45 ರ ಸುಮಾರಿಗೆ ಹಳಿಗಳ ಬಳಿ ಧಾವಿಸಿದ್ದರು ಎಂದು ಉನ್ನತ ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹುಡುಗ ಮತ್ತು ಹುಡುಗಿ ತೀವ್ರ ಸುಟ್ಟಗಾಯಗಳೊಂದಿಗೆ ರೈಲ್ವೆ ಹಳಿಗಳ (ಲೂಪ್ ಲೈನ್) ಪಕ್ಕದಲ್ಲಿ ಬಿದ್ದಿದ್ದರು. ಅವರನ್ನು ಸಮೀಪದ ವೈದೇಹಿ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಬಾಲಕಿಯನ್ನು ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಸುಟ್ಟಗಾಯಗಳ ವಾರ್ಡ್‌ಗೆ ಸ್ಥಳಾಂತರಿಸಲಾಯಿತು, ಹುಡುಗನನ್ನು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಉನ್ನತ ಆರ್‌ಪಿಎಫ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಸಾರ್ವಜನಿಕರಿಗೆ ಎಸ್‌ಜಿಡಬ್ಲ್ಯೂಎಫ್‌ಗೆ ಪ್ರವೇಶಿಸಲು ಅವಕಾಶವಿಲ್ಲ ಮತ್ತು ಬಳಕೆಯಲ್ಲಿಲ್ಲದಿದ್ದಾಗ ಸರಕು ರೈಲುಗಳು ಇಲ್ಲಿ ನಿಲ್ಲುತ್ತವೆ. ಘಟನೆ ನಡೆದು ನಾಲ್ಕು ದಿನಗಳಾದರೂ ಘಟನೆ ಹೇಗೆ ಸಂಭವಿಸಿತು ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ ಎಂದು ರೈಲ್ವೆಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ರೈಲುಗಳಿಗೆ ಶಕ್ತಿ ತುಂಬುವ ಓವರ್‌ಹೆಡ್ ತಂತಿಗಳು 25 ಕಿಲೋವೋಲ್ಟ್‌ಗಳ ಸಾಮರ್ಥ್ಯವನ್ನು ಹೊಂದಿವೆ, ಇದಕ್ಕೆ ಯಾವುದೇ ಮಾನವ ಸಂಪರ್ಕಕ್ಕೆ ಬಂದರೆ ಆತ ಬೂದಿಯಾಗುತ್ತಾನೆಂದು ಹೇಳಿದ್ದಾರೆ.

ತಂತಿಗಳು ಶೇಕಡ 100ರಷ್ಟು ಸುರಕ್ಷಿತವಾಗಿರುತ್ತವೆ, ಪ್ರಮಾಣೀಕೃತವಾಗಿವೆ ಮತ್ತು ನೆಲದಿಂದ ಅತ್ಯಂತ ಮೇಲಕ್ಕೆ ಇರುತ್ತವೆ. ಯಾರಾದರೂ ಇದನ್ನು ಸ್ಪರ್ಶಿಸಿದೆ ಸಾವನ್ನು ಆಹ್ವಾನಿಸಿದಂತೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.

ಈ ಮಾರ್ಗಗಳ ಕೆಳಗೆ ರೈಲ್ವೆ ಸಿಬ್ಬಂದಿ ಕೆಲಸ ಮಾಡುತ್ತಾ ಗಸ್ತು ತಿರುಗುತ್ತಿರುತ್ತಾರೆ. ಕೆಳಗೆ ನಿಂತಿದ್ದಾಗ ಅವರಿಗೆ ವಿದ್ಯುತ್ ತಗುಲಿರುವ ಸಾಧ್ಯತೆ ಇಲ್ಲ ಎಂದು ವಿದ್ಯುತ್ ತಜ್ಞರು ತಿಳಿಸಿದ್ದಾರೆ.

ಗೂಡ್ಸ್ ರೈಲಿನ ಮೇಲೆ ಹತ್ತಿ ಸೆಲ್ಫಿ ತೆಗೆದುಕೊಳ್ಳಲು ಇಬ್ಬರು ಪ್ರಯತ್ನಿಸಿರಬಹುದು. ಈ ವೇಳೆ ವಿದ್ಯುತ್ ಮೊಬೈಲ್'ಗೆ ಬಡಿದು ಅಪಘಾತ ಸಂಭವಿಸಿರಬಹುದು. ಆದರೆ, ಮೆಟ್ಟಿಲು, ಬಾಗಿಲು ಇಲ್ಲದ ಕಾರಣ ಗೂಡ್ಸ್ ರೈಲು ಹತ್ತುವುದು ಕಷ್ಟಕರವಾಗಿರುತ್ತದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.

ಈ ನಡುವೆ ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಿಸಲು ಮಕ್ಕಳ ಹೇಳಿಕೆಗಾಗಿ ಜಿಆರ್‌ಪಿ ಕಾಯುತ್ತಿದೆ.

ಅಂತಹ ಯಾವುದೇ ಘಟನೆಯ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ಯಾಮ್ ಸಿಂಗ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com