ಯಕ್ಷಗಾನ ವೇಷಭೂಷಣ ಧರಿಸಿ, ಹೆಜ್ಜೆ ಹಾಕಿದ ಸಚಿವ ಸುಧಾಕರ್

ಕರ್ನಾಟಕ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಯಕ್ಷಗಾನ ವೇಷಭೂಷಣ ಧರಿಸಿ ಪೋಸ್ ನೀಡಿದ್ದು, ಅವರ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.
ಯಕ್ಷಗಾನ ವೇಷಭೂಷಣದಲ್ಲಿ ಸಚಿವ ಸುಧಾಕರ್
ಯಕ್ಷಗಾನ ವೇಷಭೂಷಣದಲ್ಲಿ ಸಚಿವ ಸುಧಾಕರ್

ಭಟ್ಕಳ: ಕರ್ನಾಟಕ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಯಕ್ಷಗಾನ ವೇಷಭೂಷಣ ಧರಿಸಿ ಪೋಸ್ ನೀಡಿದ್ದು, ಅವರ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.

ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ಮಂಗಳವಾರ ರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ರಾಜ್ಯ ಆರೋಗ್ಯ ಸಚಿವ ಡಾ.ಕೆ ಸುಧಾಕರ್, ನಂತರ ಭಟ್ಕಳ ಶಾಸಕ ಸುನೀಲ ನಾಯ್ಕ ಅವರ ಅತಿಥಿ ಗೃಹಕ್ಕೆ ಭೇಟಿ ನೀಡಿ ಅಲ್ಲಿ ಯಕ್ಷಗಾನ ವೀಕ್ಷಿಸಿದರು. ಯಕ್ಷಗಾನ ಅಭಿರುಚಿ ಇರುವ ಸಚಿವರ ಬಗ್ಗೆ ಅರಿತಿದ್ದ ಶಾಸಕ ಸುನೀಲ ನಾಯ್ಕ, ಅವರಿಗಾಗಿಯೇ ಯಕ್ಷಗಾನ ಪ್ರಸಂಗ ಏರ್ಪಡಿಸಿದ್ದರು. ಹೊನ್ನಾವರ, ಗುಣವಂತೆ ಭಾಗದ ಆಯ್ದ ಕಲಾವಿದರು 'ಭೀಷ್ಮ ವಿಜಯ' ಎಂಬ ಯಕ್ಷಗಾನ ಪ್ರಸಂಗವನ್ನು ಆಡಿ ತೋಡಿಸಿದರು. 

ಬೆಳಿಗ್ಗೆಯಿಂದ ಜಿಲ್ಲೆಯಲ್ಲಿ ಪ್ರವಾಸದಲ್ಲಿದ್ದ ಸಚಿವರು ಪ್ರಯಾಣದಿಂದ ಆಯಾಸಗೊಂಡರೂ ಆಸಕ್ತಿಯಿಂದ ಯಕ್ಷಗಾನ ವೀಕ್ಷಿಸಿದರು. ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೂಡ ಜೊತೆಗಿದ್ದರು. ಈ ವೇಳೆ ಒಂದೇ ಸಮನೆ ಮಳೆಯಾಗುತ್ತಿದ್ದರೂ, ಅದನ್ನು ಲೆಕ್ಕಿಸದೆ ಪ್ರಸಂಗ ಮುಗಿಯುವವರೆಗೂ ಕುಳಿತು ಪ್ರದರ್ಶನ ವೀಕ್ಷಿಸಿ ಸಚಿವರು ಗಮನ ಸೆಳೆದಿದ್ದಾರೆ.

ಸ್ವತಃ ಯಕ್ಷಗಾನ ವೇಷಭೂಷಣ ಧರಿಸಿದರು. ನಂತರ ಕಲಾವಿದರ ಜೊತೆ ಹೆಜ್ಜೆ ಹಾಕಿ ಗಮನ ಸೆಳೆದರು. ಕಲಾವಿದರನ್ನು ಸನ್ಮಾನಿಸಲು ವೇದಿಕೆ ಏರಿದ್ದ ಡಾ.ಸುಧಾಕರ್ ಅವರಿಗೆ ಬಡಗುತಿಟ್ಟಿನ ಯಕ್ಷ ಪೋಷಾಕನ್ನು ಕಲಾವಿದರು ತೊಡಿಸಿದರು. ಮೂರ್ನಾಲ್ಕು ಕಲಾವಿದರು ಸಚಿವರಿಗೆ ಪೋಷಾಕು ಧರಿಸಲು ಸಹಕರಿಸಿದರು. ವೇದಿಕೆಯಲ್ಲಿ ಸಾರ್ವಜನಿಕವಾಗಿಯೇ ಡಾ.ಸುಧಾಕರ್, ಯಕ್ಷ ವೇಷಧಾರಿಯಾಗಿ ಕಿರೀಟ ಧರಿಸಿ ಮಿಂಚಿದರು. ಈ ವೇಳೆ ಡಾ.ಸುಧಾಕರ್ ಅವರು ಕಾರ್ಯಕರ್ತರು, ಸಾರ್ವಜನಿಕರಿಗೆ ಫೊಟೊ ತೆಗೆದುಕೊಳ್ಳಲು ಪೋಸ್ ನೀಡಿ ಸಂತಸಪಟ್ಟರು. ಯಕ್ಷಗಾನದ ವೇಷಭೂಷಣದ ಬಗ್ಗೆ ಗೌರವ ಹಾಗೂ ಯಕ್ಷಕಲಾವಿದರ ಬಗ್ಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿ, ಕಲಾವಿದರನ್ನು ಇದೇ ಸಂದರ್ಭದಲ್ಲಿ ಸಚಿವ ಸುಧಾಕರ್ ಸನ್ಮಾನಿಸಿದರು.

ಈ ಕುರಿತು ಟ್ವಿಟರ್ ನಲ್ಲಿ ಬರೆದುಕೊಂಡಿರುವ ಸುಧಾಕರ್, 'ಭಟ್ಕಳದಲ್ಲಿ ಶಾಸಕ ಸುನಿಲ್ ಅವರ ಮನೆಯಲ್ಲಿ ಯಕ್ಷಗಾನ ಬಯಲಾಟ ವೀಕ್ಷಣೆ ಮಾಡಲಾಯಿತು. ಕಲಾವಿದರು ನನಗೆ ಯಕ್ಷಗಾನ ವೇಷ ತೊಡಿಸಿದ್ದು ಒಂದು ಅಪೂರ್ವ ಅನುಭವ. ಕರ್ನಾಟಕದ ವಿಶಿಷ್ಟ ಕಲೆಯಾದ ಯಕ್ಷಗಾನವು ನಮ್ಮ ಭವ್ಯ ಪರಂಪರೆಯ ಗುರುತಾಗಿದೆ. ಕಾರ್ಯಕ್ರಮದಲ್ಲಿ ಸನ್ಮಾನ್ಯ ಸಚಿವ ಕೋಟಾ ಶ್ರೀನಿವಾಸ ಪೂಜಾರಿ  ಅವರು ಉಪಸ್ಥಿತರಿದ್ದರು ಎಂದು ಬರೆದುಕೊಂಡಿದ್ದಾರೆ.

ಅಂತೆಯೇ, 'ಯಕ್ಷಗಾನ ನಮ್ಮ ಕರಾವಳಿ ಕರ್ನಾಟಕದ ಸಾಂಸ್ಕೃತಿಕ ಹೆಗ್ಗುರುತು, ತುಳುನಾಡಿನ ಜನಜೀವನದ ಅವಿಭಾಜ್ಯ ಅಂಗ. ಕರಾವಳಿಗೆ ಭೇಟಿ ನೀಡಿದ ಮೇಲೆ ಯಕ್ಷಗಾನ ನೋಡದೆ ಹೋದರೆ ಆ ಪ್ರವಾಸ ಸಂಪೂರ್ಣವಾಗುವುದಿಲ್ಲ. ನೆನ್ನೆ ರಾತ್ರಿ ಭಟ್ಕಳ ಶಾಸಕ ಸುನಿಲ್ ನಾಯ್ಕ್ ಅವರ ಮನೆಯಲ್ಲಿ ಯಕ್ಷಗಾನ ವೀಕ್ಷಿಸಿ ದೈವಿಕಲೆಯ ವೇಷ ಹಾಕುವ ಅವಕಾಶ ದೊರೆತದ್ದು ನನ್ನ ಪುಣ್ಯ ಎಂದು ಬರೆದುಕೊಂಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com