'ತೀರ್ಥೋದ್ಭವ'ಕ್ಕೆ ತಲಕಾವೇರಿ ಸಕಲ ರೀತಿ ಸಜ್ಜು!

ಕೊಡಗಿನ ಭಾಗಮಂಡಲದ ತಲಕಾವೇರಿಯಲ್ಲಿ ‘ತೀರ್ಥೋದ್ಭವ’ಕ್ಕೆ ಸಕಲ ರೀತಿಯಲ್ಲೂ ಸಿದ್ಧತೆಗಳು ಪೂರ್ಣಗೊಂಡಿದ್ದು, ಇದೇ ಅಕ್ಟೋಬರ್ 17ರಂದು ಕಾರ್ಯಕ್ರಮ ನಡೆಯಲಿದೆ.
ತೀರ್ಥೋದ್ಭವಕ್ಕೆ ಸಿದ್ಧತೆ
ತೀರ್ಥೋದ್ಭವಕ್ಕೆ ಸಿದ್ಧತೆ

ಮಡಿಕೇರಿ: ಕೊಡಗಿನ ಭಾಗಮಂಡಲದ ತಲಕಾವೇರಿಯಲ್ಲಿ ‘ತೀರ್ಥೋದ್ಭವ’ಕ್ಕೆ ಸಕಲ ರೀತಿಯಲ್ಲೂ ಸಿದ್ಧತೆಗಳು ಪೂರ್ಣಗೊಂಡಿದ್ದು, ಇದೇ ಅಕ್ಟೋಬರ್ 17ರಂದು ಕಾರ್ಯಕ್ರಮ ನಡೆಯಲಿದೆ.

ಇದೇ ಅಕ್ಟೋಬರ್ 17ರಂದು ಕೊಡಗಿನ ಭಾಗಮಂಡಲ ಬಳಿಯ ತಲಕಾವೇರಿಯಲ್ಲಿ ‘ತೀರ್ಥೋದ್ಭವ’ ಕಾರ್ಯಕ್ರಮ ನಡೆಯಲಿದ್ದು, ಅಂದು ಸಂಜೆ 7.21ಕ್ಕೆ ತಲಕಾವೇರಿಯಲ್ಲಿ ‘ಬ್ರಹ್ಮ ಕುಂಡಿಕೆ’ಯಿಂದ ಕಾವೇರಿ ಜಲಧಾರೆ ತೀರ್ಥೋದ್ಭವ ನಡೆಯಲಿದೆ.

ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಎರಡು ವರ್ಷಗಳಿಂದ ಉತ್ಸವಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಇದೀಗ ಭಕ್ತರಿಗೆ ಅವಕಾಶ ನೀಡಲಾಗಿದ್ದು, ಈ ಬಾರಿ ಹೆಚ್ಚಿನ ಸಂಖ್ಯೆಯ ಭಕ್ತರು ತಲಕಾವೇರಿಗೆ ಭೇಟಿ ನೀಡುವ ನಿರೀಕ್ಷೆಯಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಕಾವೇರಿ ನದಿಯ ಹೂಳು ತೆಗೆಯುವ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿದೆ. ದೇವಾಲಯದ ಪಟ್ಟಣಗಳಾದ ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ತಾತ್ಕಾಲಿಕ ಶೌಚಾಲಯಗಳನ್ನು ಸ್ಥಾಪಿಸಲಾಗುತ್ತಿದೆ. ಎರಡು ಪಟ್ಟಣಗಳಲ್ಲಿ ಸ್ವಚ್ಛತಾ ಅಭಿಯಾನಕ್ಕೂ ಚಾಲನೆ ನೀಡಲಾಗಿದೆ.

ಸಿದ್ಧತಾ ಕಾರ್ಯದ ಭಾಗವಾಗಿ, ಎರಡು ಪಟ್ಟಣಗಳನ್ನು ದೀಪಾಲಂಕಾರ ಮಾಡಲಾಗುವುದು ಮತ್ತು ಪ್ರಮುಖ ಸ್ಥಳಗಳಲ್ಲಿ ಸ್ವಾಗತ ಕಮಾನುಗಳನ್ನು ಹಾಕಲಾಗುತ್ತದೆ. ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಭಕ್ತರಿಗೆ ಎಲ್ಲ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಕ್ತಾದಿಗಳ ಅನುಕೂಲಕ್ಕಾಗಿ ಮಡಿಕೇರಿಯಿಂದ ತಲಕಾವೇರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ವಿಶೇಷ ಬಸ್‌ಗಳನ್ನು ಓಡಿಸಲಿದೆ ಎಂದು ಕೆಎಸ್‌ಆರ್‌ಟಿಸಿ ಮಡಿಕೇರಿ ಡಿಪೋ ವ್ಯವಸ್ಥಾಪಕಿ ಗೀತಾ ತಿಳಿಸಿದ್ದಾರೆ. ಕೊಡಗು ಏಕೀಕರಣ ರಂಗವು ಎರಡು ದೇವಾಲಯಗಳ ಪಟ್ಟಣಗಳಲ್ಲಿ ಅಕ್ಟೋಬರ್ 17 ರಿಂದ ನವೆಂಬರ್ 17 ರವರೆಗೆ ಭಕ್ತರಿಗೆ ಉಚಿತ ಆಹಾರವನ್ನು ನೀಡಲಿದೆ.

ಭದ್ರತೆಗಾಗಿ ಎರಡೂ ಪಟ್ಟಣಗಳಲ್ಲಿ 25 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಗಜೇಂದ್ರ ಪ್ರಸಾದ್ ತಿಳಿಸಿದರು. ಅಲ್ಲದೆ, ಡಿಎಆರ್‌ನ ಐದು ತುಕಡಿಗಳು, ಕೆಎಸ್‌ಆರ್‌ಪಿಯ ಎರಡು ತುಕಡಿಗಳು ಮತ್ತು 400 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com