ಮಳಲಿ ಮಸೀದಿ ವಿವಾದ: ನವೆಂಬರ್ 9ಕ್ಕೆ ಆದೇಶ ಕಾಯ್ದಿರಿಸಿದ ನ್ಯಾಯಾಲಯ!

ಮಂಗಳೂರಿನ ಮಳಲಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ನ್ಯಾಯಾಲಯ ನವೆಂಬರ್ 9ಕ್ಕೆ ಮುಂದೂಡಿದೆ.
ಮಳಲಿ ಮಸೀದಿ
ಮಳಲಿ ಮಸೀದಿ

ಮಂಗಳೂರು: ಮಂಗಳೂರಿನ ಮಳಲಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ನ್ಯಾಯಾಲಯ ನವೆಂಬರ್ 9ಕ್ಕೆ ಮುಂದೂಡಿದೆ.

ಮಳಲಿ ಮಸೀದಿಯಲ್ಲಿ ಹಿಂದೂ ದೇಗುಲ ಆಕೃತಿಯ ಕಟ್ಟಡ ಇದೆ. ಮಸೀದಿ ಸಮುಚ್ಚಯದ ಸರ್ವೇಕ್ಷಣೆಗೆ ಆದೇಶ ಮಾಡಬೇಕು ಎಂದು ಹಿಂದುತ್ವ ಪರ ಸಂಘಟನೆಗಳು ಮನವಿ ಮಾಡಿದ್ದವು. ಇನ್ನು ವಿರೋಧಿಸಿದ್ದ ಮಸೀದಿ ಆಡಳಿತ ಮಂಡಳಿ ಮತ್ತು ಮುಸ್ಲಿಂ ಸಂಘಟನೆಗಳು ಈ ದಾವೆಯ ವಿಚಾರಣೆ ನಡೆಸುವ ಅಧಿಕಾರವು ನ್ಯಾಯಾಯಕ್ಕೆ ಇಲ್ಲ ಎಂದು ಹೇಳಿದ್ದವು. 

ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾಯಾಲಯ ವಿಚಾರಣೆ ಅಧಿಕಾರ ವ್ಯಾಪ್ತಿಯ ಕುರಿತು ನ್ಯಾಯಾಲಯವು ಇಂದು ತೀರ್ಪು ನೀಡಬೇಕಿತ್ತು. ಆದರೆ ಇಂದು ತೀರ್ಪನ್ನು ನವೆಂಬರ್ 9 ಮುಂದೂಡಿದೆ. ಅಲ್ಲದೆ ಸದ್ಯದ ಮಟ್ಟಿಗೆ ಮಳಲಿ ಮಸೀದಿ ಕಟ್ಟಡವನ್ನು ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಮಂಗಳೂರಿನ 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ಹೇಳಿದೆ.

ಮಳಲಿ ಮಸೀದಿ ಜಾಗದಲ್ಲಿ ಕೋರ್ಟ್​ ಕಮಿಷನರ್ ಮೂಲಕ ಸರ್ವೆ ನಡೆಸಲು ಆದೇಶ ನೀಡಬೇಕೆಂದು ವಿಶ್ವ ಹಿಂದೂ ಪರಿಷತ್ ಮನವಿ ಸಲ್ಲಿಸಿತ್ತು. ಈ ಮನವಿಯನ್ನು ಆಕ್ಷೇಪಿಸಿದ್ದ ಮಸೀದಿ ಮಂಡಳಿ, ಇಂಥ ಆದೇಶ ಮಾಡಲು ವಿಚಾರಣಾ ನ್ಯಾಯಾಲಯಕ್ಕೆ ಅಧಿಕಾರವಿಲ್ಲ. ವಿಶ್ವ ಹಿಂದೂ ಪರಿಷತ್ ಸಲ್ಲಿಸಿರುವ ಅರ್ಜಿಯನ್ನು ವಜಾ ಮಾಡಬೇಕು ಎಂದು ಕೋರಿತ್ತು. ವಾದ-ಪ್ರತಿವಾದ ಆಲಿಸಿರುವ ನ್ಯಾಯಾಲಯವು ಆಗಸ್ಟ್ 27 ರಂದೇ ತೀರ್ಪು ಪ್ರಕಟಿಸಲಿದೆ ಎಂದು ಹೇಳಲಾಗಿತ್ತು. ಆದರೆ ಅ 17ಕ್ಕೆ ತೀರ್ಪನ್ನು ನ್ಯಾಯಾಲಯವು ಕಾಯ್ದಿರಿಸಿತ್ತು. ಇಂದು ಮತ್ತೊಮ್ಮೆ ತೀರ್ಪು ಕಾಯ್ದಿರಿಸಿದ್ದು, ನ 9ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.

ಏನಿದು ಪ್ರಕರಣ?
ಮಂಗಳೂರು ಹೊರವಲಯದ ಗಂಜಿಮಠ ಬಳಿಯ ಮಳಲಿ ಬಳಿ ಅಸಯ್ಯಿದ್ ಅಬ್ದುಲ್ಲಾ ಹಿಲ್ ಮದನಿ ದರ್ಗಾವನ್ನು ನವೀಕರಣಕ್ಕಾಗಿ ಕೆಡವಿದಾಗ ಹಿಂದೂ ದೇಗುಲ ಹೋಲುವ ಆಕೃತಿಯ ವಾಸ್ತುಶಿಲ್ಪದ ಕಟ್ಟಡ ಪತ್ತೆಯಾಗಿತ್ತು. ನಂತರದ ದಿನಗಳಲ್ಲಿ ಅಷ್ಟಮಂಗಲ ಪ್ರಶ್ನೆಗೆ ವಿಶ್ವ ಹಿಂದೂ ಪರಿಷತ್ ಮುಂದಾಗಿತ್ತು. ಆದರೆ ಇದು ಸಾಧ್ಯವಾಗದ ಹಿನ್ನೆಲೆಯಲ್ಲಿ ತಾಂಬೂಲ ಪ್ರಶ್ನೆ ವಿಧಾನದಿಂದ ಪರಿಶೀಲಿಸಿದಾಗ ದೈವ ಸಾನ್ನಿಧ್ಯ ಇರುವುದು ಗೋಚರಿಸಿತು ಎಂದು ಜ್ಯೋತಿಷಿ ಗೋಪಾಲಕೃಷ್ಣ ಫಣಿಕ್ಕರ್ ಪ್ರತಿಕ್ರಿಯಿಸಿದ್ದರು. ಇದು ರಾಜ್ಯಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಈ ಸಂಬಂಧ ಹಿಂದೂಪರ ಸಂಘಟನೆಗಳು ಮತ್ತು ಮುಸ್ಲಿಂ ಸಂಘಟನೆಗಳ ಕಾನೂನು ತಿಕ್ಕಾಟಕ್ಕೆ ಕಾರಣವಾಗಿತ್ತು. 

ಮಸೀದಿಯೆಂದು ಮತ್ತೆ ಸಾಬೀತುಪಡಿಸುವುದು ಅನಗತ್ಯ
ಮಳಲಿಯಲ್ಲಿರುವುದು ಮಸೀದಿ ಎಂದು ಮತ್ತೊಮ್ಮೆ ಸಾಬೀತುಪಡಿಸುವ ಅಗತ್ಯವಿಲ್ಲ. ಸರ್ಕಾರಿ ವಕ್ಫ್ ದಾಖಲೆ ಪ್ರಕಾರವೇ ಅಲ್ಲಿ ಮಸೀದಿ ಇರುವುದು ದಾಖಲಾಗಿದೆ. ಮಸೀದಿ ಎಂದರೆ ವಕ್ಫ್ ಕಾನೂನಿನ ಪ್ರಕಾರ ಪ್ರಾರ್ಥನಾ ಸ್ಥಳ ಎಂದು ಅರ್ಥ. ಅಂಥ ಸ್ಥಳವನ್ನು ನಿಯಮಗಳ ಪ್ರಕಾರ ವಕ್ಫ್ ಆಸ್ತಿಯೆಂದು ಕರೆಯುತ್ತಾರೆ ಎಂದು ಮಸೀದಿ ಪರ ವಕೀಲ ಎಂ.ಪಿ.ಶೆಣೈ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಒಂದು ಜಾಗವನ್ನು ಪುರಾತನ ಸ್ಮಾರಕ ಎಂದು ಹೇಳಲು ಕೇಂದ್ರ ಸರ್ಕಾರದ ಅಧಿಸೂಚನೆ ಇರಬೇಕು. ಆದರೆ ಮಳಲಿ ಮಸೀದಿಯ ಮೇಲೆ ಯಾವುದೇ ಗೆಜೆಟ್ ನೋಟಿಫಿಕೇಶನ್ ಇರಲಿಲ್ಲ. ಹೀಗಿರುವಾಗ ಇದನ್ನು ಪುರಾತನ ಸ್ಮಾರಕವೆಂದು ಹೇಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಅಲ್ಲದೇ ಇದನ್ನ ಸ್ಮಾರಕವೋ ಅಲ್ಲವೋ ಎಂದು ಹೇಳಲು ಸಿವಿಲ್ ಕೋರ್ಟ್​ಗೆ ಅಧಿಕಾರ ಇಲ್ಲ. ಹೀಗಾಗಿ ವಿಎಚ್​ಪಿ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಅವರು ಕೋರಿದ್ದರು.

ಸರ್ವೆಗೆ ಆಗ್ರಹಿಸಿರುವ ವಿಎಚ್ ಪಿ
ವಿಶ್ವ ಹಿಂದೂ ಪರಿಷತ್ ಪರವಾಗಿ ವಾದ ಮಂಡಿಸಿದ್ದ ವಕೀಲ ಚಿದಾನಂದ ಕೆದಿಲಾಯ, ‘ನಮ್ಮ ಅರ್ಜಿದಾರರು ಸಲ್ಲಿಸಿರುವ ಅರ್ಜಿಯು ವಕ್ಫ್ ಟ್ರಿಬ್ಯುನಲ್​ಗೆ ಬರುವುದಿಲ್ಲ. ನಾವು ಎಲ್ಲಿಯೂ ಇದನ್ನು ವಕ್ಫ್​ ಆಸ್ತಿಯೋ ಅಲ್ಲವೋ ಎಂದು ಪ್ರಶ್ನೆ ಮಾಡಿಲ್ಲ. ಅದೊಂದು ಐತಿಹಾಸಿಕ ಸ್ಮಾರಕ ಅಥವಾ ದೇಗುಲ ಎಂದೇ ಹೇಳಿದ್ದೇವೆ. ಹೀಗಾಗಿ ಅದರ ಸಂರಕ್ಷಣೆ ಮಾಡುವಂತೆ ಅರ್ಜಿಯಲ್ಲಿ ಕೇಳಿದ್ದೇವೆ. ಇದು ಸ್ಮಾರಕವೋ ಮಸೀದಿಯೋ ಎನ್ನುವುದನ್ನು ವಕ್ಫ್ ಟ್ರಿಬ್ಯುನಲ್​ ನಿರ್ಧರಿಸಲು ಆಗುವುದಿಲ್ಲ. ಮಳಲಿ ಮಸೀದಿ ಸ್ಥಳದ ವಿವಾದಕ್ಕೆ ಸಂಬಂಧಿಸಿದಂತೆ ಸರ್ವೆಗೆ ಆದೇಶಿಸಿದರೆ ಅಲ್ಲಿನ ಸ್ಮಾರಕದ ಯಾವುದೆಂದು ತಿಳಿಯುತ್ತದೆ’ ಎಂದು ಕೋರಿದ್ದರು.

ನ್ಯಾಯಾಲಯವು ಒಂದು ವೇಳೆ ಮಸೀದಿ ಮಂಡಳಿಯ ಅರ್ಜಿಯನ್ನು ಪುರಸ್ಕರಿಸಿದರೆ, ವಿಶ್ವ ಹಿಂದೂ ಪರಿಷತ್​ನ ಕೋರಿಕೆಯಾಗಿರುವ ಸರ್ವೇಕ್ಷಣೆಯ ಮನವಿಯನ್ನು ತಳ್ಳಿ ಹಾಕಿದಂತೆ ಆಗುತ್ತದೆ. ವಿಶ್ವ ಹಿಂದೂ ಪರಿಷತ್ ಅರ್ಜಿಯನ್ನು ಪುರಸ್ಕರಿಸಿದರೆ ಮಳಲಿ ಮಸೀದಿ ಕಟ್ಟಡ ಸಮುಚ್ಚಯದ ವಿಡಿಯೊ ಸರ್ವೇಕ್ಷಣೆಗೆ ಆದೇಶ ನೀಡಬೇಕಾಗುತ್ತದೆ. ನ್ಯಾಯಾಲಯದ ತೀರ್ಪನ್ನು ಮಸೀದಿ ಮಂಡಳಿ ಮತ್ತು ವಿಶ್ವ ಹಿಂದೂ ಪರಿಷತ್ ಕಾತರದಿಂದ ಎದುರು ನೋಡುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com