ಬೆಂಗಳೂರಿನ ರಸ್ತೆಗುಂಡಿಗೆ ಮತ್ತೊಂದು ಅವಘಡ: ಕೆಎಸ್ ಆರ್ ಟಿಸಿ ಬಸ್ಸು ಹರಿದು ಮಹಿಳೆ ಸ್ಥಿತಿ ಗಂಭೀರ
ನಗರದ ರಸ್ತೆಗುಂಡಿಯಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ಗುಂಡಿಯನ್ನು ತಪ್ಪಿಸಲು ಹೋದ ಮಹಿಳೆ ಮೇಲೆ ಕೆಎಸ್ ಆರ್ ಟಿಸಿ ಬಸ್ಸು ಹರಿದು ಗಂಭೀರವಾಗಿ ಗಾಯಗೊಂಡು ಆರೋಗ್ಯ ಸ್ಥಿತಿ ಚಿಂತಾಜನಕವಾಗಿರುವ ದಾರುಣ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.
Published: 17th October 2022 12:08 PM | Last Updated: 17th October 2022 01:10 PM | A+A A-

ಸುಜಾತ ಥಿಯೇಟರ್ ಬಳಿ ಅಪಘಾತ ನಡೆದ ಸ್ಥಳ
ಬೆಂಗಳೂರು: ನಗರದ ರಸ್ತೆಗುಂಡಿಯಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ಗುಂಡಿಯನ್ನು ತಪ್ಪಿಸಲು ಹೋದ ಮಹಿಳೆ ಮೇಲೆ ಕೆಎಸ್ ಆರ್ ಟಿಸಿ ಬಸ್ಸು ಹರಿದು ಗಂಭೀರವಾಗಿ ಗಾಯಗೊಂಡು ಆರೋಗ್ಯ ಸ್ಥಿತಿ ಚಿಂತಾಜನಕವಾಗಿರುವ ದಾರುಣ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.
ರಾಜಾಜಿನಗರದ ಸುಜಾತ ಥಿಯೇಟರ್ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಹೋಂಡಾ ಆಕ್ಟೀವಾದಲ್ಲಿ ಬರುತ್ತಿದ್ದ 47 ವರ್ಷದ ಉಮಾ ಎಂಬ ಮಹಿಳೆ ಮೇಲೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ ಹರಿದು ಗಾಯಗಳಾದ ಘಟನೆ ನಡೆದಿದೆ. ಸ್ಕೂಟರ್ ನ್ನು ಮಗಳು ವನಿತಾ ಚಲಾಯಿಸುತ್ತಿದ್ದರು. ರಸ್ತೆ ಗುಂಡಿ ತಪ್ಪಿಸಲು ಹೋದಾಗ ಉಮಾ ಕೆಳಗೆ ಬಿದ್ದಿದ್ದು ಈ ವೇಳೆ ಹಿಂದೆ ಬರುತ್ತಿದ್ದ ಬಸ್ ಮಹಿಳೆಯ ಮೇಲೆ ಹರಿದಿದೆ.
ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ರಾಜಾಜಿನಗರದ ಇಎಸ್ ಐ ಆಸ್ಪತ್ರೆಗೆ ದಾಖಲಿಸಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಮಗಳು ವನಿತಾಗೆ ಸಣ್ಣಪುಟ್ಟ ಗಾಯಗಳಾಗಿವೆ.
ಇಬ್ಬರು ಮಹಿಳೆಯರು ಗಾಡಿಯಲ್ಲಿ ಬರುತ್ತಿದ್ರು. ಮುಂದೆ ಗುಂಡಿ ಇರೋ ಕಾರಣ ಆ ಮಹಿಳೆ ಸಡನ್ ಬ್ರೇಕ್ ಹಾಕಿ ನಿಲ್ಲಿಸಿದ್ರು. ಸಡನ್ ಆಗಿ ಗಾಡಿ ನಿಲ್ಲಿಸಿರೋ ಕಾರಣ ಗಾಡಿ ಬಿತ್ತು. ಹಿಂದೆ ಇದ್ದ ಮಹಿಳೆಯ ಕಾಲ ಮೇಲೆ ಬಸ್ ಹತ್ತಿದೆ. ಈ ಘಟನೆಗೆ ರಸ್ತೆಗುಂಡಿನೇ ಕಾರಣ. ರಸ್ತೆಗುಂಡಿ ಇರಲಿಲ್ಲ ಅಂದರೆ ಆ ಮಹಿಳೆಗೆ ಏನೂ ಆಗುತ್ತಿರಲಿಲ್ಲ ಎಂದು ಪ್ರತ್ಯಕ್ಷದರ್ಶಿ ಜಮ್ಮೀರ್ ಘಟನೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ರಾಜಾಜಿನಗರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಕೂಡ ಈ ವರ್ಷ ಬಿಟ್ಟುಬಿಡದ ಮಳೆಯಿಂದಾಗಿ ಬಹುತೇಕ ರಸ್ತೆಗಳು ಹೊಂಡಗುಂಡಿಗಳಿಂದ ತುಂಬಿಕೊಂಡಿದ್ದು ವಾಹನ ಸವಾರರು ಸಂಚರಿಸುವುದು ದುಸ್ತರವಾಗಿದೆ.ರಸ್ತೆಗುಂಡಿಗೆ ಜೀವ ಹೋಗುತ್ತಿರುವುದು ಈ ಹಿಂದೆಯೂ ಅನೇಕ ಘಟನೆಗಳಾಗಿವೆ.