ಎಸ್ ಸಿ/ಎಸ್ ಟಿ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳ: ಸುಗ್ರೀವಾಜ್ಞೆ ಹೊರಡಿಸಲು ರಾಜ್ಯ ಸರ್ಕಾರ ಚಿಂತನೆ

ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸುವ ಕುರಿತು ಸುಗ್ರೀವಾಜ್ಞೆ ಹೊರಡಿಸಲು ಮತ್ತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. 
ಎಸ್ ಸಿ/ಎಸ್ ಟಿ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳ: ಸುಗ್ರೀವಾಜ್ಞೆ ಹೊರಡಿಸಲು ರಾಜ್ಯ ಸರ್ಕಾರ ಚಿಂತನೆ

ಬೆಂಗಳೂರು: ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸುವ ಕುರಿತು ಸುಗ್ರೀವಾಜ್ಞೆ ಹೊರಡಿಸಲು ಮತ್ತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. 

ಬರುವ ಡಿಸೆಂಬರ್‌ನಲ್ಲಿ ನಡೆಯಲಿರುವ ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಮತ್ತು ಮಸೂದೆಯನ್ನು ಮಂಡಿಸುವ ಕುರಿತು ಸರ್ಕಾರ ಕಾನೂನು ತಜ್ಞರ ಅಭಿಪ್ರಾಯ ಕೇಳುತ್ತಿದೆ ಎಂದು ಮೂಲಗಳು ತಿಳಿಸಿವೆ. ನಾಡಿದ್ದು ಗುರುವಾರ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು 15 ಶೇಕಡಾದಿಂದ 17 ಶೇಕಡಾಕ್ಕೆ ಹೆಚ್ಚಿಸಲು ಮತ್ತು ಪರಿಶಿಷ್ಟ ಪಂಗಡಗಳಿಗೆ ಶೇಕಡಾ 3ರಿಂದ ಶೇಕಡಾ 7ಕ್ಕೆ ಹೆಚ್ಚಿಸುವ ಕುರಿತು ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯ ವರದಿಯ  ಶಿಫಾರಸುಗಳನ್ನು ಅಂಗೀಕರಿಸಲು ಸರ್ಕಾರ ಇತ್ತೀಚೆಗೆ ನಿರ್ಧರಿಸಿದೆ. 

ಕಾರ್ಕಳ ವಿಧಾನಸಭಾ ಕ್ಷೇತ್ರದ ಎಸ್‌ಸಿ/ಎಸ್‌ಟಿ ಸಮುದಾಯದ ಮುಖಂಡರ ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಎಸ್‌ಸಿ/ಎಸ್‌ಟಿಗಳಿಗೆ ಮೀಸಲಾತಿ ಹೆಚ್ಚಳದ ನಿರ್ಧಾರ ಐತಿಹಾಸಿಕ ಮತ್ತು ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿದಂತಾಗಿದೆ. ಮೀಸಲಾತಿ ಹೆಚ್ಚಿಸಬೇಕೆಂಬ ಬೇಡಿಕೆ ಕಳೆದ 50 ವರ್ಷಗಳಿಂದ ಬಾಕಿ ಇದೆ ಎಂದರು.

ಹಲವಾರು ಸರಕಾರಗಳು ಬಂದು ಹೋದರೂ ಯಾವುದೂ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ನಮ್ಮ ಸರ್ಕಾರ ಬದ್ಧತೆಯನ್ನು ತೋರಿಸಿದೆ. ನಮ್ಮ ಸಂಪುಟ ಸಹೋದ್ಯೋಗಿಗಳು, ಬಿಜೆಪಿ ಕೋರ್ ಕಮಿಟಿ ಮತ್ತು ಕಾರ್ಯಕಾರಿ ಸಮಿತಿಯ ಸಹಕಾರದೊಂದಿಗೆ ಈ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗಿದೆ. ಮುಂಬರುವ ದಿನಗಳಲ್ಲಿ ಈ ಸಮುದಾಯಗಳಿಗಾಗಿ ಇನ್ನೂ ಅನೇಕ ಕೆಲಸಗಳನ್ನು ಮಾಡಲು ಬಯಸುತ್ತೇನೆ. ಹಿಂದುಳಿದ ವರ್ಗಗಳು ಸೇರಿದಂತೆ ಹಲವಾರು ಸಮುದಾಯಗಳಿಗೆ ನ್ಯಾಯ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com