ಹಂಪಿ ಮೃಗಾಲಯಕ್ಕೆ ಶೀಘ್ರ ಹೊಸ ಅತಿಥಿಗಳ ಆಗಮನ; ಬಬೂನ್‌, ಜಿರಾಫೆ ಸ್ವಾಗತಕ್ಕೆ ಸಿಬ್ಬಂದಿ ಸಿದ್ಧತೆ!

ಹಂಪಿ ಸಮೀಪದ ಕಮಲಾಪುರದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನವನಕ್ಕೆ ಶೀಘ್ರದಲ್ಲೇ ಹೊಸ ಅತಿಥಿಗಳ ಆಗಮನವಾಗಲಿದ್ದು, ಈ ಹಿಂದೆ ಹಿಪ್ಪೋಗಳನ್ನು ಸ್ವಾಗತಿಸಿದ್ದ ಮೃಗಾಲಯದ ಸಿಬ್ಬಂದಿ ಇದೀಗ ಬಬೂನ್‌, ಜಿರಾಫೆ ಸ್ವಾಗತಕ್ಕೆ ಸಿದ್ಧತೆ ನಡೆಸಿದ್ದಾರೆ.
ಹಂಪಿ ಮೃಗಾಲಯ
ಹಂಪಿ ಮೃಗಾಲಯ

ಹೊಸಪೇಟೆ: ಹಂಪಿ ಸಮೀಪದ ಕಮಲಾಪುರದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನವನಕ್ಕೆ ಶೀಘ್ರದಲ್ಲೇ ಹೊಸ ಅತಿಥಿಗಳ ಆಗಮನವಾಗಲಿದ್ದು, ಈ ಹಿಂದೆ ಹಿಪ್ಪೋಗಳನ್ನು ಸ್ವಾಗತಿಸಿದ್ದ ಮೃಗಾಲಯದ ಸಿಬ್ಬಂದಿ ಇದೀಗ ಬಬೂನ್‌, ಜಿರಾಫೆ ಸ್ವಾಗತಕ್ಕೆ ಸಿದ್ಧತೆ ನಡೆಸಿದ್ದಾರೆ.

ಹೌದು.. ಶೀಘ್ರದಲ್ಲೇ ಮೃಗಾಲಯಕ್ಕೆ ನಾಲ್ಕು ಆಫ್ರಿಕನ್ ಬಬೂನ್‌ಗಳು ಆಗಮಿಸಲಿದ್ದು, ಬಬೂನ್‌ಗಳು ಕೂಡ ಮೃಗಾಲಯದ ಆಕರ್ಷಣೆಗಳಲ್ಲಿ ಒಂದಾಗಲಿದೆ. ಅಂತೆಯೇ ಜಿರಾಫೆಗಳನ್ನು ಕರೆತರುವ ಚರ್ಚೆಗಳೂ ಕೂಡ ಗಂಭೀರವಾಗಿದ್ದು, ಭೂಮಿಯ ಮೇಲಿನ ಅತಿ ಎತ್ತರದ ಸಸ್ತನಿ ಜಿರಾಫೆಗೆ ಸ್ಥಳಾವಕಾಶ ಕಲ್ಪಿಸುವ ಮಾತುಕತೆ ನಡೆಯುತ್ತಿದ್ದು, ಮೃಗಾಲಯದ ಆವರಣದಲ್ಲಿ ಪ್ರಾಣಿಗಳಿಗೆ ಆವರಣವನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಲಾಗಿದೆ. ಈಗಾಗಲೇ ಮೃಗಾಲಯದಲ್ಲಿ ಹುಲಿಗಳು, ಸಿಂಹಗಳು, ಚಿರತೆಗಳು, ತೋಳಗಳು ಮತ್ತು ಕತ್ತೆ-ಕಿರುಬಗಳು ಮೃಗಾಲಯದ ಪ್ರಮುಖ ಆಕರ್ಷಣೆಗಳಾಗಿವೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಹಂಪಿ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಎಂ ಎನ್ ಕಿರಣ್ ಅವರು, ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಜಿರಾಫೆಗಳನ್ನು ತರಲು ಯೋಜಿಸಲಾಗಿತ್ತು. ಆದರೆ ಅವು ಕಾರ್ಯರೂಪಕ್ಕೆ ಬರಲಿಲ್ಲ. ರಾಜ್ಯ ಮೃಗಾಲಯ ಪ್ರಾಧಿಕಾರ ಮತ್ತು ಹಂಪಿ ಮೃಗಾಲಯವು ಜಿರಾಫೆಗಳು ಸೇರಿದಂತೆ ಹೊಸ ಪ್ರಾಣಿಗಳನ್ನು ಹುಡುಕುವ ಭಾರತದ ವಿವಿಧ ಜೈವಿಕ ಉದ್ಯಾನವನಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಹೇಳಿದರು.

ಹಂಪಿ ಮೃಗಾಲಯವು ಕಾಡು ಮತ್ತು ಮಾನವ-ವನ್ಯಜೀವಿ ಸಂಘರ್ಷ ವಲಯಗಳಿಂದ ರಕ್ಷಿಸಲ್ಪಟ್ಟ ಹಲವಾರು ಪ್ರಾಣಿಗಳನ್ನು ಹೊಂದಿದೆ. ಪುನರ್ವಸತಿ ಯೋಜನೆ ಅಡಿಯಲ್ಲಿ ಕೆಲವು ಪ್ರಾಣಿಗಳ ಸಾರ್ವಜನಿಕ ವೀಕ್ಷಣೆಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. ಮೃಗಾಲಯಕ್ಕೆ ಈಗ ಬೆಂಗಳೂರಿನ ಮೃಗಾಲಯದಿಂದ ಎರಡು ಹಿಪಪಾಟಮಸ್‌ಗಳನ್ನು ಕರೆತರಲಾಗಿದೆ. ಹಿಪಪಾಟಮಸ್ ಜೋಡಿ ತೇಜು ಮತ್ತು ಸೀತಾ ಈಗ ಮೃಗಾಲಯದಲ್ಲಿ ಹೆಚ್ಚುವರಿ ಆಕರ್ಷಣೆಯಾಗಿವೆ. ಆ ಮೂಲಕ ಮೃಗಾಲಯದಲ್ಲಿರುವ ಒಟ್ಟು ಪ್ರಾಣಿಗಳ ಸಂಖ್ಯೆ ಈಗ 350ಕ್ಕೆ ತಲುಪಿದೆ.

“ಮೃಗಾಲಯಕ್ಕೆ ಪ್ರವಾಸಿಗರ ಸಂಖ್ಯೆ ಸ್ಥಿರವಾಗಿ ಹೆಚ್ಚುತ್ತಿದ್ದು, ಚಳಿಗಾಲದಲ್ಲಿ, ನಾವು ಮೃಗಾಲಯದಲ್ಲಿ ಹೆಚ್ಚಿನ ಪ್ರಾಣಿಗಳ ಹೆಜ್ಜೆಗಳನ್ನು ನಿರೀಕ್ಷಿಸುತ್ತಿದ್ದೇವೆ. ಮೃಗಾಲಯದ ವಾಕ್‌ವೇಗಳಲ್ಲಿ ಪ್ರವಾಸಿಗರಿಗೆ ನೀರು ಸಿಂಪಡಿಸುವ ಯಂತ್ರಗಳನ್ನು ಅಳವಡಿಸಲಾಗಿದೆ. ಪ್ರವೇಶ ಕಮಾನು, ಟಿಕೆಟ್ ಕೌಂಟರ್ ಮತ್ತು ಆಹಾರ ಕೌಂಟರ್‌ಗಳ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಮುಂದಿನ ಕೆಲವು ತಿಂಗಳುಗಳಲ್ಲಿ ಈ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಮೃಗಾಲಯದ ಆವರಣದಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ’ ಎಂದು ಹಂಪಿ ಮೃಗಾಲಯದ ಅಧಿಕಾರಿಯೊಬ್ಬರು ವಿವರಿಸಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com