
ಸಂಗ್ರಹ ಚಿತ್ರ
ಚಿಕ್ಕಮಗಳೂರು: ಕಾಫಿ ಎಸ್ಟೇಟ್ ಮಾಲೀಕ ನನ್ನ ಮೇಲೆ ಹಲ್ಲೆ ನಡೆಸಿ, ಅಕ್ರಮ ಬಂಧನದಲ್ಲಿಟ್ಟಿದ್ದ ಕಾರಣ ಗರ್ಭಪಾತವಾಗಿದೆ ಎಂದು ಮಹಿಳೆಯೊಬ್ಬರು ಆರೋಪ ಮಾಡಿದ್ದಾರೆ.
ಗರ್ಭಪಾತದ ಬಳಿಕ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವ ಅರ್ಪಿತಾ ಅವರು ಮಾಲೀಕನ ವಿರುದ್ಧ ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಕಾಫಿ ಎಸ್ಟೇಟ್ ಮಾಲೀಕ ಜಗದೀಶ್ ಗೌಡ ಮತ್ತು ಅವರ ಮಗ ತಿಲಕ್ ಗೌಡ ನನ್ನ ಮೇಲೆ ಹಾಗೂ ಇತರೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದು, ಜಾತಿ ನಿಂದನೆ ಮಾಡಿದ್ದಾರೆ. ಅಲ್ಲದೆ, ಅಕ್ರಮ ಬಂಧನದಲ್ಲಿರಿಸಿದ್ದ ಕಾರಣ ನನಗೆ ಗರ್ಭಪಾತವಾಗಿದೆ ಎಂದು ಆರೋಪ ಮಾಡಿದ್ದಾರೆ.
ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಹುಣಿಸೆಹಳ್ಳಿ ಪುರದಲ್ಲಿ ಎಸ್ಟೇಟ್ ಮಾಲೀಕರು ಕಾರ್ಮಿಕರನ್ನು ಕೊಠಡಿಯೊಂದರಲ್ಲಿ ಬಂಧಿಸಿ ಹಲ್ಲೆ ನಡೆಸಿದ್ದು, ಆರೋಪಿಗಳ ವಿರುದ್ಧ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ.
ಇದನ್ನೂ ಓದಿ: ಚಿಕ್ಕಮಗಳೂರು: ದಲಿತ ಕಾರ್ಮಿಕರಿಗೆ ಗೃಹ ಬಂಧನ, ಗರ್ಭಿಣಿ ಮೇಲೆ ಹಲ್ಲೆ; ಬಿಜೆಪಿ ಮುಖಂಡನ ವಿರುದ್ಧ ಕೇಸ್ ದಾಖಲು
ಮೂಡಿಗೆರೆ ಆಸ್ಪತ್ರೆಯಲ್ಲಿ ನಾನು ಚಿಕಿತ್ಸೆ ಪಡೆದುಕೊಂಡೆ. ನಂತರ ಚಿಕ್ಕಮಗಳೂರು ಜನರಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಪೊಲೀಸರ ಮುಂದೆಯೇ 3 ಖಾಲಿ ಹಾಳೆಗಳ ಮೇಲೆ ಸಹಿ ಪಡೆದುಕೊಂಡಿದ್ದಾರೆ. ನನ್ನ ಹೇಳಿಕೆಯಲ್ಲಿ ಅವರ ಹಲ್ಲೆಯಿಂದ ಗರ್ಭಪಾತವಾಗಿದೆ ಎಂದು ಹೇಳಿದ್ದೆ. ಆದರೆ, ಪೊಲೀಸರು ಅದನ್ನು ತಿರುಚುವ ಕೆಲಸ ಮಾಡಿದ್ದಾರೆ.
ಬಾಳೆಹೊನ್ನೂರು ಠಾಣೆಯ ಪಿಎಸ್‌ಐ ಜಯರಾಮ್ ಅವರನ್ನು ಕೂಡಲೇ ಅಮಾನತುಗೊಳಿಸಬೇಕು. ಕೂಡಲೇ ಜಗದೀಶ ಮತ್ತು ತಿಲಕ್ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಎರಡು ವಾರಗಳ ಹಿಂದೆ ಅಂಗನವಾಡಿ ಕಾರ್ಯಕರ್ತೆಯರು ಕಾರ್ಮಿಕ ಕಾಲೋನಿಗೆ ಭೇಟಿ ನೀಡಿ ನನ್ನ ಆರೋಗ್ಯ ವಿಚಾರಿಸಿದ್ದರು. ಈ ವೇಳೆ ಎಸ್ಟೇಟ್ ಮಾಲೀಕರು ಸುಳ್ಳು ಹೇಳಿಕೆ ನೀಡಿದ್ದಾರೆಂದು ತಿಳಿಸಿದ್ದಾರೆ.