ಪೇಸಿಎಂ ಪ್ರಕರಣ: ಇಬ್ಬರು ಕಾಂಗ್ರೆಸ್ ಮುಖಂಡರ ವಿರುದ್ಧದ ಎಫ್‌ಐಆರ್ ವಜಾಗೊಳಿಸಿದ ಹೈಕೋರ್ಟ್
ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಕಾಂಗ್ರೆಸ್ ಪಕ್ಷದ ಪೇಸಿಎಂ ಅಭಿಯಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಇಬ್ಬರು ನಾಯಕ ವಿರುದ್ಧ ದಾಖಲಾಗಿದ್ದ ಎಫ್ ಐಆರ್ ಗಳನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದ್ದು, ಮಾತ್ರವಲ್ಲದೇ ತನಿಖಾ ಪ್ರಕ್ರಿಯೆಗೂ ತಡೆ ನೀಡಿದೆ.
Published: 21st October 2022 02:01 PM | Last Updated: 21st October 2022 02:32 PM | A+A A-

ಕಾಂಗ್ರೆಸ್ ಪೇಸಿಎಂ ಅಭಿಯಾನ
ಬೆಂಗಳೂರು: ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಕಾಂಗ್ರೆಸ್ ಪಕ್ಷದ ಪೇಸಿಎಂ ಅಭಿಯಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಇಬ್ಬರು ನಾಯಕ ವಿರುದ್ಧ ದಾಖಲಾಗಿದ್ದ ಎಫ್ ಐಆರ್ ಗಳನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದ್ದು, ಮಾತ್ರವಲ್ಲದೇ ತನಿಖಾ ಪ್ರಕ್ರಿಯೆಗೂ ತಡೆ ನೀಡಿದೆ.
ಪೇಸಿಎಂ ಅಭಿಯಾನಕ್ಕೆ ಕರೆಕೊಟ್ಟಿದ ಆರೋಪದ ಮೇಲೆ ಬೆಂಗಳೂರಿನ ನೆಲಮಂಗಲ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ವಕೀಲರಿಬ್ಬರ ಮೇಲೆ ದಾಖಲಾಗಿದ್ದ ಎಫ್‌ಐಆರ್ ಗಳನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಸಾರ್ವಜನಿಕ ಸ್ವತ್ತಿನ ಹಾನಿ ನಿವಾರಣೆ ಕಾಯಿದೆ - 1984 ಮತ್ತು ಕರ್ನಾಟಕ ಬಹಿರಂಗ ಸ್ಥಳಗಳ (ವಿರೂಪಗೊಳಿಸುವುದನ್ನು ಪ್ರತಿಬಂಧಿಸುವ) ಕಾಯಿದೆ - 1981 ಮತ್ತು ಐಪಿಸಿ ಸೆಕ್ಷನ್ 290ರ ಅಡಿ ದಾಖಲಿಸಿದ್ದ ಪ್ರಕರಣವನ್ನು ಪ್ರಶ್ನಿಸಿ ನೆಲಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಕೀಲ ನಾರಾಯಣ ಗೌಡ ಜೆ ಎಸ್ ಮತ್ತು ಕಾನೂನು ಘಟಕದ ಮುಖ್ಯಸ್ಥ ವಕೀಲ ವಿ ರಾಮಕೃಷ್ಣ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಈ ಆದೇಶ ಮಾಡಿದೆ.
ಇದನ್ನೂ ಓದಿ: ಪೇ ಸಿಎಂ ಆಯ್ತು, ಈಗ SayCM ಅಭಿಯಾನ ನಡೆಸಲು ಕಾಂಗ್ರೆಸ್ ಸಜ್ಜು!
“ಅರ್ಜಿದಾರರು ಇತರರಿಗೆ ಮೊಬೈಲ್ ಮೂಲಕ ಪೋಸ್ಟರ್ ಅಥವಾ ಭಿತ್ತಿಪತ್ರಗಳನ್ನು ಅಂಟಿಸುವಂತೆ ಸೂಚಿಸಿದ್ದಾರೆ ಎಂದ ಮಾತ್ರಕ್ಕೆ ಅವರು ಸಾರ್ವಜನಿಕ ಸ್ವತ್ತಿನ ಹಾನಿ ನಿವಾರಣೆ ಕಾಯಿದೆ ಮತ್ತು ಕಕರ್ನಾಟಕ ಬಹಿರಂಗ ಸ್ಥಳಗಳ (ವಿರೂಪಗೊಳಿಸುವುದನ್ನು ಪ್ರತಿಬಂಧಿಸುವ) ಕಾಯಿದೆ ನಿಬಂಧನೆಗಳ ಅಡಿ ಅಪರಾಧಿಗಳಾಗುವುದಿಲ್ಲ. ಕಾಯಿದೆ ಅಡಿ ಅಪರಾಧವಾಗುವಂಥ ಯಾವುದೇ ಕೆಲಸವನ್ನು ಅರ್ಜಿದಾರರು ಮಾಡಿಲ್ಲ. ಹೀಗಾಗಿ, ಅರ್ಜಿದಾರರ ವಿರುದ್ದದ ಎಫ್‌ಐಆರ್ ಮತ್ತು ನೆಲಮಂಗಲದಲ್ಲಿನ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿಯಲ್ಲಿನ ಪ್ರಕ್ರಿಯೆಯನ್ನು ವಜಾಗೊಳಿಸಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.
ಇದನ್ನೂ ಓದಿ: ಪೇಸಿಎಂ ಟೀ ಶರ್ಟ್ ಧರಿಸಿದ್ದ ವ್ಯಕ್ತಿ ಮೇಲೆ ಹಲ್ಲೆ: ಪೊಲೀಸ್ ಅಧಿಕಾರಿ ಅಮಾನತಿಗೆ ಸಿದ್ದರಾಮಯ್ಯ ಆಗ್ರಹ
ಅಂತೆಯೇ, “ಆದೇಶದಲ್ಲಿ ವ್ಯಕ್ತಪಡಿಸಲಾಗಿರುವ ಅಭಿಪ್ರಾಯವು ಹಾಲಿ ಅರ್ಜಿದಾರರ ವಿರುದ್ದದ ಪ್ರಕರಣವನ್ನು ಪರಿಗಣಿಸುವುದಕ್ಕೆ ಸೀಮಿತವಾಗಿದ್ದು, ಇತರೆ ಆರೋಪಿಗಳ ವಿರುದ್ಧದ ತನಿಖೆಯ ಮೇಲೆ ಪರಿಣಾಮ ಬೀರುವುದಿಲ್ಲ” ಎಂದು ಪೀಠವು ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಏನಿದು ಪ್ರಕರಣ?
ಬಿಜೆಪಿ ಸರ್ಕಾರ ಕಮಿಷನ್ ಹರಣದಲ್ಲಿ ಭಾಗಿಯಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ಪೇಸಿಎಂ ಅಭಿಯಾನ ಆರಂಭಿಸಿದ್ದರು. ಪೇಟಿಎಂ ಕ್ಯುಆರ್ ಕೋಡ್ ಮಾದರಿಯಲ್ಲೇ ಕ್ಯುಆರ್ ಕೋಡ್ ರಚಿಸಿ ಅದರಲ್ಲಿ ಸಿಎಂಬೊಮ್ಮಾಯಿ ಭಾವಚಿತ್ರ ಕಾಣುವಂತೆ ಮಾಡಿ ಪೋಸ್ಟರ್ ಗಳನ್ನು ಅಂಟಿಸಿದ್ದರು. ಅಲ್ಲದೆ ಈ ಪೋಸ್ಟರ್ ಅನ್ನು ಸ್ಕ್ಯಾನ್ ಮಾಡಿದರೆ ಬಿಜೆಪಿ ಸರ್ಕಾರದ ಭ್ರಷ್ಟ್ರಾಚಾರ ಹಗರಣಗಳ ವೆಬ್ ಸೈಟ್ ತೆರೆಯುವಂತೆ ಈ ಪೇಸಿಎಂ ಕ್ಯೂಆರ್ ಕೋಡ್ ರಚಿಸಿ ಪೋಸ್ಟರ್ ಮಾಡಲಾಗಿತ್ತು. ಈ ಪೋಸ್ಟರ್ ಗಳು ರಾಜ್ಯ ಮಾತ್ರವಲ್ಲದೇ ರಾಷ್ಟ್ರವ್ಯಾಪಿ ಭಾರಿ ಸದ್ದು ಮಾಡಿತ್ತು. ಅಲ್ಲದೆ ಉಭಯ ಪಕ್ಷಗಳ ನಾಯಕರ ನಡುವೆ ತೀವ್ರ ವಾಕ್ಸಮರ ಮತ್ತು ಕಾನೂನು ಸಮರಕ್ಕೂ ಕಾರಣವಾಗಿದೆ. ಈ ಸಂಬಂಧ ಇಬ್ಬರು ಕಾಂಗ್ರೆಸ್ ನಾಯಕ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿತ್ತು.
ಇದನ್ನೂ ಓದಿ: ಪೇಸಿಎಂ ಪೋಸ್ಟರ್ ಹಾಕಿದ್ದ ಕಾಂಗ್ರೆಸ್ ನಾಯಕರಿಗೆ ಸಿಸಿಬಿ ಶಾಕ್, ವಿಚಾರಣೆಗೆ ಹಾಜರಾಗಲು ನೋಟಿಸ್!
ಎಫ್ಐಆರ್ ನಲ್ಲೇನಿತ್ತು?
ಅರ್ಜಿದಾರರ ಸೂಚನೆಯಂತೆ ವರುಣ್ ಕುಮಾರ್ ಎಲ್ ಎನ್, ಕೃಷ್ಣ ಪವಾರ್ ಮತ್ತು ಸಿ ಅಶೋಕ್ ಕುಮಾರ್ ಎಂಬವರು ನೆಲಮಂಗಲದ ವಿವಿಧೆಡೆ ಮುಖ್ಯಮಂತ್ರಿ ಭಾವಚಿತ್ರ ಇರುವ ಕ್ಯೂಆರ್ ಕೋಡ್‌ನ ಭಿತ್ತಿಪತ್ರ ಅಂಟಿಸಿದ್ದು, ಅದರಲ್ಲಿ ಪೇಸಿಎಂ ಶೇ.40ರಷ್ಟು (ಲಂಚ) ಇಲ್ಲಿ ಸ್ವೀಕರಿಸಲಾಗಿದೆ. ಶೇ. 40 ಸರ್ಕಾರದ ಭ್ರಷ್ಟಾಚಾರ ಬಯಲು ಮಾಡಲು ಈ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಎಂದು ಉಲ್ಲೇಖಿಸಿರುವ ಭಿತ್ತಿಪತ್ರಗಳನ್ನು ಅಂಟಿಸಿ ಸಾರ್ವಜನಿಕ ಸ್ಥಳವನ್ನು ಅಂದಗೆಡಿಸಿ, ಹಾಳು ಮಾಡುತ್ತಿದ್ದರು ಎಂದು ಎಎಸ್‌ಐ ಕೆ ಆರ್ ನಾರಾಯಣ್ ರಾವ್ ನೀಡಿದ್ದ ದೂರಿನ ಮೇರೆಗೆ ಅವರ ಸಾರ್ವಜನಿಕ ಸ್ವತ್ತಿನ ಹಾನಿ ನಿವಾರಣೆ ಕಾಯಿದೆ ಸೆಕ್ಷನ್ 3(1) ಮತ್ತು ಕರ್ನಾಟಕ ಬಹಿರಂಗ ಸ್ಥಳಗಳ (ವಿರೂಪಗೊಳಿಸುವುದನ್ನು ಪ್ರತಿಬಂಧಿಸುವ) ಕಾಯಿದೆ ಸೆಕ್ಷನ್ 3 ಮತ್ತು ಐಪಿಸಿ ಸೆಕ್ಷನ್ 290ರ ಅಡಿ ಅರ್ಜಿದಾರರು ಸೇರಿದಂತೆ ಐವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.
ಇದನ್ನೂ ಓದಿ: ಪೇಸಿಎಂ ಅಲ್ಲ.. ಮೊದಲು 'ಪೇ ಫಾರ್ಮರ್'; ರೈತರ ಸಂಕಷ್ಟ ಆಲಿಸಿ: ರಾಜಕೀಯ ನಾಯಕರಿಗೆ ರೈತ ಸಂಘ ಚಾಟಿ!
ಮೂವರಿಗೆ ನಿರೀಕ್ಷಣಾ ಜಾಮೀನು
ಮೂರನೇ ಆರೋಪಿ ವರುಣ್ ಕುಮಾರ್ ಎಲ್ ಎನ್, ನಾಲ್ಕನೇ ಆರೋಪಿ ಕೃಷ್ಣ ಪವಾರ್ ಮತ್ತು ಐದನೇ ಆರೋಪಿ ಸಿ ಅಶೋಕ್ ಕುಮಾರ್ ಅವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 9ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್ ಶ್ರೀಧರ ಅವರು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ.