ಚಾಮರಾಜನಗರ: ಹಳ್ಳಕ್ಕೆ ನುಗ್ಗಿದ ಕೆಎಸ್‌ಆರ್‌ಟಿಸಿ ಬಸ್, 25 ಮಂದಿಗೆ ಗಾಯ

ಕೆಎಸ್‌ಆರ್‌ಟಿಸಿ ಬಸ್ ವೊಂದು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ ಪರಿಣಾಮ ಬಸ್ ನಲ್ಲಿದ್ದ ಪ್ರಯಾಣಿಕರ ಪೈಕಿ 25 ಮಂದಿ ಗಾಯಗೊಂಡ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಹಳ್ಳಕ್ಕೆ ಉರುಳಿದ ಬಸ್
ಹಳ್ಳಕ್ಕೆ ಉರುಳಿದ ಬಸ್

ಚಾಮರಾಜನಗರ: ಕೆಎಸ್‌ಆರ್‌ಟಿಸಿ ಬಸ್ ವೊಂದು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ ಪರಿಣಾಮ ಬಸ್ ನಲ್ಲಿದ್ದ ಪ್ರಯಾಣಿಕರ ಪೈಕಿ 25 ಮಂದಿ ಗಾಯಗೊಂಡ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆ ಮುಗಿಸಿಕೊಂಡು ಪ್ರಯಾಣಿಕರನ್ನು ಕರೆದುಕೊಂಡು ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್, ತಾಳಬೆಟ್ಟದ ಬಳಿ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ನುಗ್ಗಿದ್ದು, ಈ ವೇಳೆ 25 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬುಧವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ದುರ್ಘಟನೆ ವೇಳೆ ಬಸ್ಸಿನಲ್ಲಿ 51 ಪ್ರಯಾಣಿಕರಿದ್ದರು. ಈ ಪೈಕಿ 22 ಜನರು ಗಾಯಗೊಂಡಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೀಪಾವಳಿ ನಿಮಿತ್ತ ಶ್ರೀ ಕ್ಷೇತ್ರ ಮಲೆ ಮಹದೇಶ್ವರದಿಂದ ಯಾತ್ರಾರ್ಥಿಗಳು ಬಸ್ ನಲ್ಲಿ ವಾಪಸ್ಸಾಗುತ್ತಿದ್ದರು. ಬಸ್ ತಾಳಬೆಟ್ಟಕ್ಕೆ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದೆ. ಬಸ್ಸು ರಸ್ತೆಯಿಂದ ಆಚೆ ಬಂದು ಕಂದಕಕ್ಕೆ ಉರುಳಿದೆ ಎಂದು ಮೂಲಗಳು ತಿಳಿಸಿವೆ.

ಚಾಲಕ ಚಂದ್ರಶೇಖರ್, ಕಂಡಕ್ಟರ್ ಪ್ರಕಾಶ್, ಪ್ರಯಾಣಿಕರಾದ ಕಾವೇರಿಪುರದ ನಂಜಮ್ಮ ಮತ್ತು ರಾಮಚಂದ್ರ ಸೇರಿದಂತೆ ಗಾಯಾಳುಗಳಲ್ಲಿ ಕೆಲವರಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಮಾಹಿತಿ ನೀಡಿರುವ ಕೊಳ್ಳೇಗಾಲ ಕೆಎಸ್ಆರ್ ಟಿಸಿ ಡಿಪೊ ಮ್ಯಾನೇಜರ್ ಸುಬ್ರಹ್ಮಣ್ಯ ಅವರು, 'ತೀವ್ರ ತಿರುವಿನಿಂದಾಗಿ  ಚಾಲಕನ ನಿಯಂತ್ರಣಕ್ಕೆ ಬರದೆ ಹಳ್ಳಕ್ಕೆ ನುಗ್ಗಿದೆ. ಕೆಲವು ಜನರಿಗೆ ಮಾತ್ರ ಸಣ್ಣಪುಟ್ಟ ಗಾಯಗಳಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಕೊಳ್ಳೇಗಾಲ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ' ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com