ರಾಜ್ಯದಲ್ಲಿ 5 ಹೊಸ ವಿಮಾನ ನಿಲ್ದಾಣಗಳ ನಿರ್ಮಾಣ: ಸಚಿವ ಮುರುಗೇಶ್ ನಿರಾಣಿ

ರಾಜ್ಯದಲ್ಲಿ ಶೀಘ್ರದಲ್ಲೇ ಐದು ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಮುರುಗೇಶ್ ನಿರಾಣಿ
ಮುರುಗೇಶ್ ನಿರಾಣಿ

ಹುಬ್ಬಳ್ಳಿ: ರಾಜ್ಯದಲ್ಲಿ ಶೀಘ್ರದಲ್ಲೇ ಐದು ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಮುಂದಿನ 18 ತಿಂಗಳಲ್ಲಿ ರಾಜ್ಯದಲ್ಲಿ ಐದು ಏರ್‌ಪೋರ್ಟ್‌ ನಿರ್ಮಾಣ ಮಾಡಲು ನಮ್ಮ ಸರ್ಕಾರ ಮುಂದಾಗಿದ್ದು, ದಾವಣಗೆರೆ, ಬಾಗಲಕೋಟೆ, ಬಾದಾಮಿ, ಕೊಪ್ಪಳ, ರಾಯಚೂರು, ಚಿಕ್ಕಮಗಳೂರಿನಲ್ಲಿ ಏರ್‌ಪೋರ್ಟ್‌ ನಿರ್ಮಾಣ ಆರಂಭಗೊಳ್ಳಲಿದೆ ಎಂದರು.

ಅಂತೆಯೇ ಜಾಗತಿಕ ಸಮಾವೇಶ ಸಿದ್ಧತೆ ಕುರಿತು ಮಾಹಿತಿ ನೀಡಿದ ಸಚಿವರು, 'ಬೆಂಗಳೂರಿನಲ್ಲಿ ಜಾಗತಿಕ ಸಮಾವೇಶ ಪ್ರಾರಂಭವಾಗಲಿದ್ದು, ಕಳೆದ ಒಂದು ವರ್ಷದಿಂದ ತಯಾರಿ ಆರಂಭವಾಗಿದೆ. ನವೆಂಬರ್‌ನಲ್ಲಿ ಜಾಗತಿಕ ಸಮಾವೇಶ ನಡೆಯಲಿದೆ. ಕರ್ನಾಟಕಕ್ಕೆ ಅತೀ ಹೆಚ್ಚು ಬಂಡವಾಳ ಬಂದಿದೆ. ಇದು ಹೆಮ್ಮೆಯ ವಿಷಯ. ನಾವು ಅನೇಕ ಕಡೆ ಕರ್ನಾಟಕದ ಕೈಗಾರಿಕಾ ನೀತಿ ತಿಳಿಸಿದ್ದೇವೆ. 5 ಲಕ್ಷ ಜನರಿಗೆ ಉದ್ಯೋಗ ಸಿಗುವ ಪ್ರಯತ್ನ ನಾವು ಮಾಡಿದ್ದೇವೆ.

ಕರ್ನಾಟಕಕ್ಕೆ ಐದು ಲಕ್ಷ ಕೋಟಿ ರೂ. ಹೂಡಿಕೆ ಹರಿದು ಬರಲಿದೆ. ಕೈಗಾರಿಕೆಗಾಗಿ 50 ಸಾವಿರ ಎಕರೆ ಭೂಮಿ ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರು ಸುತ್ತ ಮುತ್ತ 20 ಸಾವಿರ ಎಕರೆ, ಉಳಿದ ಭಾಗದಲ್ಲಿ ಕೈಗಾರಿಕೆಗಾಗಿ ಭೂಮಿ ವಶಪಡಿಸಿಕೊಳ್ಳಲಾಗಿದೆ. ಸ್ಥಗಿತಗೊಂಡಿರುವ ಕಾರ್ಖಾನೆಗಳನ್ನು ಮತ್ತೆ ಪ್ರಾರಂಭ ಮಾಡಲು ಮುಂದಾಗಿದ್ದೇವೆ. ಆದರೆ ಬೆಂಗಳೂರಲ್ಲಿ ಹೊಸ ಕಾರ್ಖಾನೆ ನಿರ್ಮಾಣಕ್ಕೆ ನಾವು ಸಬ್ಸಿಡಿ ಕೊಡುತ್ತಿಲ್ಲ. ಬಿಯಾಂಡ್ ಬೆಂಗಳೂರು (ಬೆಂಗಳೂರು ಹೊರತಾಗಿ) ಬರುವ ಕಾರ್ಖಾನೆಗಳಿಗೆ ನಾವು ಸೌಲಭ್ಯ ಕೊಡುತ್ತಿದ್ದೇವೆ ಎಂದು ನಿರಾಣಿ ಹೇಳಿದರು.

ಹುಬ್ಬಳ್ಳಿಯಲ್ಲಿ ಫಾಸ್ಟ್‌ ಮೂವಿಂಗ್‌ ಕನ್ಸ್ಯೂಮರ್‌ ಗೂಡ್ಸ್‌ (FMCG) ಕಾರ್ಖಾನೆಗೆ ವಿಶೇಷ ರಿಯಾಯಿತಿ ಕೊಟ್ಟಿದ್ದೇವೆ. ಇದರ ಕ್ರೆಡಿಟ್‌ ಹೋಗಬೇಕಿರೋದು ಜಗದೀಶ್ ಶೆಟ್ಟರ್ ಹಾಗೂ ಬಸವರಾಜ ಬೊಮ್ಮಾಯಿ ಅವರಿಗೆ. ಧಾರವಾಡದ ಮುಮ್ಮಿಗಟ್ಟಿ ಬಳಿ FMCG ನಿರ್ಮಾಣ. ಇದು ದೇಶದಲ್ಲಿ ಮೊದಲ FMCG. ದಿನನಿತ್ಯದ ಬಳಕೆ ವಸ್ತುಗಳ ನಿರ್ಮಾಣ ಮಾಡುವ ಕಾರ್ಖಾನೆ. ಸರ್ಕಾರದಿಂದ ಶೇಕಡಾ 20 ರಷ್ಟು ರಿಯಾಯಿತಿ ಕೊಡಲಾಗಿದೆ. ಕೋವಿಡ್ ಆದ ಮೇಲೆ ಜಾಗತಿಕ ಸಮಾವೇಶ ನಡಿತಿರೋದು ಕರ್ನಾಟಕದಲ್ಲಿ ಮಾತ್ರ. ಜಾಗತಿಕ ಸಮಾವೇಶದಿಂದ ನಮ್ಮ ರಾಜ್ಯಕ್ಕೆ ಒಳ್ಳೆಯದಾಗಲಿದೆ ಎಂದು ನಿರಾಣಿ ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com