ಪತ್ರಕರ್ತರಿಗೆ ದೀಪಾವಳಿ ಗಿಫ್ಟ್ ಕೊಡಬೇಕೆಂದು ನಾನು ಸೂಚನೆ ನೀಡಿರಲಿಲ್ಲ, ಕಾಂಗ್ರೆಸ್ ನವರಿಗೆ ಮಾತನಾಡಲು ನೈತಿಕ ಹಕ್ಕು ಏನಿದೆ?: ಸಿಎಂ ಬೊಮ್ಮಾಯಿ

ಮುಖ್ಯಮಂತ್ರಿಗಳ ಗೃಹ ಕಚೇರಿಯಿಂದ ಕೆಲವು ಪತ್ರಕರ್ತರಿಗೆ ದೀಪಾವಳಿ ಉಡುಗೊರೆ ಎಂದು ಸಿಹಿ ತಿನಿಸು ಮತ್ತು ಡ್ರೈ ಫ್ರೂಟ್ಸ್ ಗಳ ಜೊತೆಗೆ ನಗದು ಹಣ ವಿತರಣೆಯಾಗಿರುವ ಬಗ್ಗೆ ಆಡಳಿತ ಪಕ್ಷ ಬಿಜೆಪಿ ತೀವ್ರ ಮುಜುಗರಕ್ಕೀಡಾಗಿದೆ.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಬೆಂಗಳೂರು: ಮುಖ್ಯಮಂತ್ರಿಗಳ ಗೃಹ ಕಚೇರಿಯಿಂದ ಕೆಲವು ಪತ್ರಕರ್ತರಿಗೆ ದೀಪಾವಳಿ ಉಡುಗೊರೆ ಎಂದು ಸಿಹಿ ತಿನಿಸು ಮತ್ತು ಡ್ರೈ ಫ್ರೂಟ್ಸ್ ಗಳ ಜೊತೆಗೆ ನಗದು ಹಣ ವಿತರಣೆಯಾಗಿರುವ ಬಗ್ಗೆ ಆಡಳಿತ ಪಕ್ಷ ಬಿಜೆಪಿ ತೀವ್ರ ಮುಜುಗರಕ್ಕೀಡಾಗಿದೆ.

ಪ್ರತಿಪಕ್ಷ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಸೇರಿದಂತೆ ಬಿಜೆಪಿ ಸಚಿವರುಗಳು, ನಾಯಕರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಓರ್ವ ಸಚಿವರು ಉಡುಗೊರೆಯಲ್ಲಿ ಮದ್ಯದ ಬಾಟಲಿಯನ್ನು ಸಹ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇದಕ್ಕೆ ಇಂದು ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಬೊಮ್ಮಾಯಿ, ಇದು ಕಾಂಗ್ರೆಸ್ ಟೂಲ್ ಕಿಟ್ ನ ಪರಿಣಾಮ, ಸುಳ್ಳನ್ನು ಸೃಷ್ಟಿ ಮಾಡುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಪತ್ರಕರ್ತರಿಗೆ ಗಿಫ್ಟ್, ಹಣ ನೀಡಲು ನಾನಂತೂ ಸೂಚನೆ ನೀಡಿಲ್ಲ. ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಹತ್ತು ಹಲವರು ಪತ್ರಕರ್ತರಿಗೆ ಏನೇನು ಗಿಫ್ಟ್ ಕೊಟ್ಟಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ, ಮಾಧ್ಯಮಗಳಲ್ಲಿ ಕೂಡ ಅದು ಸುದ್ದಿಯಾಗಿತ್ತು. ಅದು ಐಫೋನ್, ಲ್ಯಾಪ್ ಟಾಪ್, ಬಂಗಾರದ ನಾಣ್ಯ ಇತ್ಯಾದಿಗಳನ್ನೇ ಕೊಟ್ಟಿದ್ದರು.ಇವರಿಗೆ ಯಾವ ನೈತಿಕ ಹಕ್ಕು ಮಾತನಾಡಲು ಇದೆ ಎಂದು ವಾಗ್ದಾಳಿ ನಡೆಸಿದರು.

ಈಗ ದೀಪಾವಳಿ ಗಿಫ್ಟ್ ಕೊಟ್ಟ ವಿಚಾರದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿಗಳಿಗೆ ದೂರು ನೀಡಿದ್ದಾರೆ. ತನಿಖೆ ಮಾಡಲಿ, ಪತ್ರಕರ್ತರಿಗೆ ಉಡುಗೊರೆ ಕೊಟ್ಟಿದ್ದಾರೆ, ತೆಗೆದುಕೊಂಡಿದ್ದಾರೆ ಎಂದು ವ್ಯಾಖ್ಯಾನ ಮಾಡುವುದು ಸರಿಯಲ್ಲ, ನಿನ್ನೆ ಕಾಂಗ್ರೆಸ್ ನ ವಕ್ತಾರರು ಅದನ್ನು ಬಹಳ ಕೆಟ್ಟದಾಗಿ ವ್ಯಾಖ್ಯಾನಿಸಿದ್ದು ಅದನ್ನು ಖಂಡಿಸುತ್ತೇವೆ ಎಂದರು.

ಪತ್ರಕರ್ತರಿಗೆ ಗಿಫ್ಟ್ ಕೊಡಬೇಕೆಂದು ನಾನು ಯಾರಿಗೂ ಸೂಚನೆ ನೀಡಿರಲಿಲ್ಲ. ಲೋಕಾಯುಕ್ತಕ್ಕೆ ದೂರು ನೀಡಲಾಗಿದ್ದು ಅವರು ತನಿಖೆ ನಡೆಸುತ್ತಾರೆ. ಕಾನೂನು ಪ್ರಕಾರ ತನಿಖೆ ನಡೆಯಲಿ, ಸತ್ಯ ಹೊರಗೆ ಬರುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com