ಲಾಲ್‌ಬಾಗ್‌ನ ಉನ್ನತ ಅಧಿಕಾರಿಗಳು ನಮ್ಮನ್ನು ಒಳಗೆ ಬಿಡುತ್ತಿಲ್ಲ: ನರ್ಸರಿಮೆನ್ ಕೋಆಪರೇಟಿವ್ ಸೊಸೈಟಿ ಸದಸ್ಯರ ಆರೋಪ

ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರೂ ಲಾಲ್‌ಬಾಗ್ ನಿರ್ದೇಶಕ ನಾಗೇಂದ್ರ ಪ್ರಸಾದ್ ಮತ್ತು ಜಂಟಿ ನಿರ್ದೇಶಕ ಎಚ್‌ಎಂ ಜಗದೀಶ್ ಸೇರಿದಂತೆ ಉನ್ನತ ಅಧಿಕಾರಿಗಳು ನಮಗೆ ಲಾಲ್ ಬಾಗ್ ಒಳ ಪ್ರವೇಶಿಸಲು ಅನುಮತಿ ನೀಡುತ್ತಿಲ್ಲ ಎಂದು ನರ್ಸರಿಮೆನ್ ಕೋಆಪರೇಟಿವ್ ಸೊಸೈಟಿಯ ಆಡಳಿತ ಮಂಡಳಿ ಸದಸ್ಯರು ಆರೋಪಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರೂ ಲಾಲ್‌ಬಾಗ್ ನಿರ್ದೇಶಕ ನಾಗೇಂದ್ರ ಪ್ರಸಾದ್ ಮತ್ತು ಜಂಟಿ ನಿರ್ದೇಶಕ ಎಚ್‌ಎಂ ಜಗದೀಶ್ ಸೇರಿದಂತೆ ಉನ್ನತ ಅಧಿಕಾರಿಗಳು ನಮಗೆ ಲಾಲ್ ಬಾಗ್ ಒಳ ಪ್ರವೇಶಿಸಲು ಅನುಮತಿ ನೀಡುತ್ತಿಲ್ಲ ಎಂದು ನರ್ಸರಿಮೆನ್ ಕೋಆಪರೇಟಿವ್ ಸೊಸೈಟಿಯ ಆಡಳಿತ ಮಂಡಳಿ ಸದಸ್ಯರು ಆರೋಪಿಸಿದ್ದಾರೆ. 

ಲಾಲ್‌ಬಾಗ್ ಆವರಣದಲ್ಲಿರುವ ನರ್ಸರಿಮೆನ್ ಕೋಆಪರೇಟಿವ್ ಸೊಸೈಟಿ ಲಿಮಿಟೆಡ್‌ಗೆ ನೀಡಲಾಗಿದ್ದ 1 ಎಕರೆ 29 ಗುಂಟೆ ಜಮೀನಿನ ಗುತ್ತಿಗೆಯನ್ನು ರದ್ದು ಮಾಡುವಂತೆ ತೋಟಗಾರಿಕೆ ಇಲಾಖೆ ಆದೇಶ ಹೊರಡಿಸಿತ್ತು. 

ನರ್ಸರಿಗೆ ಏಕಾಏಕಿ ಬೀಗ ಹಾಕಿರುವುದರಿಂದ ಅಕ್ಟೋಬರ್ 21ರಿಂದ ರೂ.1 ಕೋಟಿಯಿಂದ 1.5 ಕೋಟಿಯಷ್ಟು ಗಿಡಗಳಿಗೆ ನೀರುಣಿಸಲಾಗದೇ ಸೊಸೈಟಿಯ ಆದಾಯಕ್ಕೆ ನಷ್ಟ ಉಂಟಾಗಿದೆ. ಹೀಗಾಗಿ ತಕ್ಷಣವೇ ನ್ಯಾಯಾಲಯ ಮಧ್ಯಪ್ರವೇಶ ಮಾಡಬೇಕು ಎಂದು ನರ್ಸರಿಮೆನ್ ಕೋ ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ಗೋವಿಂದ್ ಮತ್ತು ಸದಸ್ಯ ನಿರ್ದೇಶಕ ಆರ್ ರವಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು, ಆದೇಶಕ್ಕೆ ತಡೆಯಾಜ್ಞೆ ನೀಡಿ, ಪ್ರಕರಣವು ಇತ್ಯರ್ಥಗೊಳ್ಳುವವರೆಗೂ ಲಾಲ್‌ಬಾಗ್‌ನಲ್ಲಿ ಕಾರ್ಯಚಟುವಟಿಕೆ ಮುಂದುವರೆಸಲು ಸೊಸೈಟಿಗೆ ಅನುಮತಿ ನೀಡಿತ್ತು. 

ಮಂಡಳಿಯ ಸದಸ್ಯರಲ್ಲಿ ಒಬ್ಬರಾದ ರವಿ ಅವರು ಮಾತನಾಡಿ, “ನಿನ್ನೆಯಿಂದ (ಶುಕ್ರವಾರ) ನಮಗೆ ಪ್ರವೇಶವನ್ನು ನಿರಾಕರಿಸಲಾಗಿದೆ. ಇದರಿಂದಾಗಿ ಸುಮಾರು 350 ಸದಸ್ಯರ ಜೀವನ ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಗಿಡಗಳ ಆರೈಕೆಗೆ ಅವಕಾಶ ನೀಡುತ್ತಿಲ್ಲ. ಗಿಡಗಳು ಸತ್ತು ಹೋದರೆ ಸುಮಾರು 2 ಕೋಟಿ ರೂಪಾಯಿ ನಷ್ಟವಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಆರೋಪವನ್ನು ಲಾಲ್'ಬಾಗ್'ನ ಅಧಇಕಾರಿಗಳು ನಿರಾಕರಿಸಿದ್ದು, ವಿಚಾರ ನ್ಯಾಯಾಲಯದ ಅಂಗಳದಲ್ಲಿದೆ. ಈ ಸಮಯದಲ್ಲಿ ಸೊಸೈಟಿ ಸದಸ್ಯರು ಲಾಲ್‌ಬಾಗ್‌ಗೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆಂದಿದ್ದಾರೆ. 

ಗಿಡಗಳಿಗೆ ನೀರು ಹಾಕಲು ಅವಕಾಶ ನೀಡಲಾಗುತ್ತಿಲ್ಲ ಎಂಬ ಸೊಸೈಟಿ ಸದಸ್ಯರ ಆರೋಪ ಸುಳ್ಳು. ನರ್ಸರಿ ನೋಡಿಕೊಳ್ಳಲು ಅವರನ್ನು ಒಳಗೆ ಬಿಡಲಾಗಿದೆ’ ಎಂದು ನಾಗೇಂದ್ರ ಪ್ರಸಾದ್ ತಿಳಿಸಿದ್ದಾರೆ.

ಮುಖ್ಯ ದ್ವಾರವನ್ನು ಮಾತ್ರ ಮುಚ್ಚಲಾಗಿದೆ. ಚಿಕ್ಕ ಗೇಟ್ ತೆರೆದು ಏಳೆಂಟು ಸದಸ್ಯರು ಬೆಳಗ್ಗೆಯಿಂದ ಸಂಜೆವರೆಗೆ ಯಾವಾಗ ಬೇಕಾದರೂ ಗಿಡಗಳಿಗೆ ನೀರು ಹಾಕಲು ಅವಕಾಶ ಕಲ್ಪಿಸಲಾಗಿದೆ' ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com