'ಲಯನ್' ಖ್ಯಾತಿಯ ಹಿರಿಯ ವಕೀಲ ಶೇಷಾದ್ರಿ ನಿಧನ

ಹಿರಿಯ ವಕೀಲ ಹಾಗೂ ತುಮಕೂರಿನ ವಿದ್ಯೋದಯ ಕಾನೂನು ಶಿಕ್ಷಣ ಸಂಸ್ಥೆಯ ಟ್ರಸ್ಟಿ ಪ್ರೊ ಎಚ್.ಎಸ್.ಶೇಷಾದ್ರಿ (98 ವರ್ಷ) (HS Sheshadri) ನಿಧನರಾಗಿದ್ದಾರೆ.
ಖ್ಯಾತ ಹಿರಿಯ ವಕೀಲ ಶೇಷಾದ್ರಿ ನಿಧನ
ಖ್ಯಾತ ಹಿರಿಯ ವಕೀಲ ಶೇಷಾದ್ರಿ ನಿಧನ

ತುಮಕೂರು: ಹಿರಿಯ ವಕೀಲ ಹಾಗೂ ತುಮಕೂರಿನ ವಿದ್ಯೋದಯ ಕಾನೂನು ಶಿಕ್ಷಣ ಸಂಸ್ಥೆಯ ಟ್ರಸ್ಟಿ ಪ್ರೊ ಎಚ್.ಎಸ್.ಶೇಷಾದ್ರಿ (98) (HS Sheshadri) ನಿಧನರಾಗಿದ್ದಾರೆ.

ವಯೋಸಹಜ ಆರೋಗ್ಯ ಸಮಸ್ಯೆಗಳಿಂದಾಗಿ ಹಿರಿಯ ವಕೀಲ ಎಚ್‌ಎಸ್ ಶೇಷಾದ್ರಿ ಅವರು ಬುಧವಾರ ತುಮಕೂರಿನ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 98 ವರ್ಷ ವಯಸ್ಸಾಗಿತ್ತು. ಮೃತರು ಇಬ್ಬರು ಪುತ್ರರು ಮತ್ತು ಮತ್ತು ಐವರು ಪುತ್ರಿಯರನ್ನು ಅಗಲಿದ್ದಾರೆ. ಅವರ ಹಿರಿಯ ಪುತ್ರರಾದ ಎಚ್‌ಎಸ್‌ ಕೆಂಪಣ್ಣ ಅವರು ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾಗಿದ್ದು, ಹಿರಿಯ ಪುತ್ರ ಎಚ್‌ಎಸ್‌ ರಾಜು ಅವರೂ ಕೂಡ  ವಕೀಲರಾಗಿದ್ದಾರೆ. 

ಗುರುವಾರ ತುರುವೇಕೆರೆ ತಾಲೂಕಿನ ಟಿ ಹೊಸಹಳ್ಳಿ ಗ್ರಾಮದಲ್ಲಿರುವ ಅವರ ತೋಟದ ಮನೆಯಲ್ಲಿ ಅಂತಿಮ ವಿಧಿವಿಧಾನಗಳು ನಡೆದವು. ಈ ವೇಳೆ ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ, ಶ್ರೀ ನಂಜಾವದೂತ ಸ್ವಾಮೀಜಿ ಸೇರಿದಂತೆ ಹಲವರು ಅಂತಿಮ ನಮನ ಸಲ್ಲಿಸಿದರು. ಶೇಷಾದ್ರಿ ನಿಧನಕ್ಕೆ ಅಬಕಾರಿ ಸಚಿವ ಕೆ.ಗೋಪಾಲಯ್ಯ ಸಂತಾಪ ಸೂಚಿಸಿದ್ದಾರೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬಕ್ಕೆ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ದೇವರು ದಯಪಾಲಿಸಲಿ ಎಂದು ಪ್ರಾರ್ಥಿಸುವುದಾಗಿ ಅಬಕಾರಿ ಗೋಪಾಲಯ್ಯ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಶೇಷಾದ್ರಿ ಅವರು ಖ್ಯಾತ ಹಿಕಿಯ ವಕೀಲ ರಾಮ್ ಜೇಠ್ಮಲಾನಿ ಅವರ ಆಪ್ತರಾಗಿದ್ದು, ಈ ಹಿಂದೆ ವಿದ್ಯೋದಯ ಕಾನೂನು ಕಾಲೇಜಿನ ಬೆಳ್ಳಿಹಬ್ಬದ ಆಚರಣೆಯಲ್ಲೂ ಅವರು ಭಾಗವಹಿಸಿದ್ದರು. ರಾಮ್ ಜೇಠ್ಮಲಾನಿ ಮಾತ್ರವಲ್ಲದೇ ಶೇಷಾದ್ರಿ ಅವರು ದೇಶದ ಉನ್ನತ ವಕೀಲರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಇನ್ನು ಶೇಷಾದ್ರಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಸಂತಾಪ ಸೂಚಿಸಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಬೊಮ್ಮಾಯಿ ಅವರು, 'ಹಿರಿಯ ವಕೀಲರು, ತುಮಕೂರಿನ ವಿದ್ಯೋದಯ ಕಾನೂನು ಶಿಕ್ಷಣ ಸಂಸ್ಥೆಯ ಟ್ರಸ್ಟಿಗಳಾದ ಶ್ರೀ ಪ್ರೋ. ಹೆಚ್. ಎಸ್. ಶೇಷಾದ್ರಿ ಅವರು ಇಂದು ನಿಧನರಾದ ವಿಷಯ ತಿಳಿದು ದುಃಖಿತನಾಗಿದ್ದೇನೆ‌.  ತುಮಕೂರಿನ ಹಿರಿಯ ಚೇತನರಾದ ಶೇಷಾದ್ರಿ ಅವರು, ವಿದ್ಯೋದಯ ಕಾನೂನು ವಿದ್ಯಾಲಯ ಹಾಗೂ ಕೆಂಪೇಗೌಡ ಪಟ್ಟಣ ಸಹಕಾರ ಬ್ಯಾಂಕಿನ ಸಂಸ್ಥಾಪಕರಾಗಿದ್ದರು ಹಾಗೂ ಲಯನ್ ಶೇಷಾದ್ರಿ ಎಂದೇ ಕರೆಯಲ್ಪಡುತ್ತಿದ್ದರು.  ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಿ ಅವರ ಕುಟುಂಬಕ್ಕೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ಶೇಷಾದ್ರಿ ಅವರ ಹಿನ್ನಲೆ
ರಾಗಮ್ಮ ಮತ್ತು ಶಾಮೇಗೌಡ ದಂಪತಿಗೆ ಜನಿಸಿದ ಶೇಷಾದ್ರಿ ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪದವಿ ಪಡೆದರು ಮತ್ತು ಬೆಳಗಾವಿ ಮತ್ತು ಮುಂಬೈನಲ್ಲಿ ಉನ್ನತ ಶಿಕ್ಷಣ ಪಡೆದರು. ಅವರು ಕಾನೂನಿನಲ್ಲಿ ಆರು ದಶಕಗಳಿಗೂ ಹೆಚ್ಚು ಅಭ್ಯಾಸವನ್ನು ಹೊಂದಿದ್ದರು ಮತ್ತು ಅಪರಾಧ ಪ್ರಕರಣಗಳಲ್ಲಿ ತೀವ್ರ ಆಸಕ್ತಿಯನ್ನು ಹೊಂದಿದ್ದರು. ವಿದ್ಯೋದಯ ಸಂಸ್ಥೆಯ ಅಧ್ಯಕ್ಷರೂ ಆಗಿದ್ದ ಅವರ ಶಿಷ್ಯರು ದೇಶದ ವಿವಿಧೆಡೆ ವಕೀಲರು ಹಾಗೂ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದರು. ತುಮಕೂರು ನಗರದಲ್ಲಿ ಅವರ ಅಭಿಮಾನಿ ಬಳಗವೂ ದೊಡ್ಡದಾಗಿದೆ. ತುಮಕೂರಿನಲ್ಲಿ ಶಿಕ್ಷಣ ಹಾಗೂ ಕಾನೂನು ಸೇವೆಯ ವಲಯಕ್ಕೆ ಶೇಷಾದ್ರಿ ಅವರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ವಿದ್ಯೋದಯ ಕಾನೂನು ವಿದ್ಯಾಲಯ ಹಾಗೂ ಕೆಂಪೇಗೌಡ ಪಟ್ಟಣ ಸಹಕಾರ ಬ್ಯಾಂಕಿನ ಸಂಸ್ಥಾಪಕರಾಗಿ ಅವರು ಅಪೂರ್ವ ಸೇವೆ ಸಲ್ಲಿಸಿದ್ದರು. ಜಿಲ್ಲೆಯಲ್ಲಿ ಲಯನ್ ಶೇಷಾದ್ರಿ ಎಂದೇ ಅವರನ್ನು ಕರೆಯಲಾಗುತ್ತಿತ್ತು.

ತುಮಕೂರಿನ ಸಿದ್ದಗಂಗಾ ಮಠದ ಉಚ್ವಾಟಿತ ಗೌರಿಶಂಕರ್ ಸ್ವಾಮೀಜಿ ಪರವಾಗಿ ಸುಪ್ರೀಂಕೋರ್ಟ್​ನಲ್ಲಿ ಶೇಷಾದ್ರಿ ಅವರು ವಾದಿಸಿದ್ದರು. ಶೇಷಾದ್ರಿ ಅವರ ಪ್ರಬಲ ವಾದ ಮಂಡನೆಯ ನಂತರ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲು ಸುಪ್ರೀಂಕೋರ್ಟ್ ಆದೇಶಿಸಿತ್ತು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com