ಬೆಂಗಳೂರು: ವಿದೇಶದಲ್ಲಿ ನೌಕರಿ ಆಸೆಗೆ ಬಿದ್ದು 6.6 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ!

ಗಲ್ಫ್ ರಾಷ್ಟ್ರಗಳಲ್ಲಿ ಕೆಲಸ ಹುಡುಕುತ್ತಿದ್ದ 49 ವರ್ಷದ ವ್ಯಕ್ತಿಯೊಬ್ಬರು ಆನ್‌ಲೈನ್ ವಂಚಕರ ಬಲೆಗೆ ಬಿದ್ದು 6.67 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಗಲ್ಫ್ ರಾಷ್ಟ್ರಗಳಲ್ಲಿ ಕೆಲಸ ಹುಡುಕುತ್ತಿದ್ದ 49 ವರ್ಷದ ವ್ಯಕ್ತಿಯೊಬ್ಬರು ಆನ್‌ಲೈನ್ ವಂಚಕರ ಬಲೆಗೆ ಬಿದ್ದು 6.67 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಗಲ್ಫ್ ಸಹಕಾರ ಮಂಡಳಿ ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯೊಂದರ ಮಾನವ ಸಂಪನ್ಮೂಲ ಪ್ರತಿನಿಧಿ ಎಂದು ಹೇಳಿಕೊಂಡ ಆರೋಪಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಉದ್ಯೋಗ ಜಾಹೀರಾತುಗಳನ್ನು ಪೋಸ್ಟ್ ಮಾಡಿದ್ದ.

ಉದ್ಯೋಗ ಆಕಾಂಕ್ಷಿಗಳನ್ನು ವಂಚಿಸುವ ಸಲುವಾಗಿ ಆರೋಪಿಗಳು, ಇ ಮೇಲ್ ಐ ಡಿಗೆ ಗಲ್ಫ್ ನೌಕ್ರಿ ಎಂಬ ಮೇಲ್ ಕಳುಹಿಸಿದ್ದರು. ಇದು ನಿಜವಾದ ಕೆಲಸದ ಜಾಹೀರಾತು ಎಂದು ನಂಬಿದ, ಸರ್ಜಾಪುರ ನಿವಾಸಿಯೊಬ್ಬರು ಅವರನ್ನು ಸಂಪರ್ಕಿಸಿ ಹಣ ಕಳೆದುಕೊಂಡಿದ್ದು, ಈ ಸಂಬಂಧ  ಸೈಬರ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಸರ್ಜಾಪುರ ನಿವಾಸಿ, ಕ್ಲೆಮೆಂಟ್ ಆರ್ ಜಾನ್ ಎಂಬುವರು ಅಮಿತ್ ಸಿಂಗ್ ಮತ್ತು ಕುಲದೀಪ್ ಸಿನ್ಹಾ ವಿರುದ್ಧ ದೂರು ದಾಖಲಿಸಿದ್ದಾರೆ. ಆರೋಪಿಗಳು ವಸತಿ ಸೌಕರ್ಯಗಳೊಂದಿಗೆ ಉತ್ತಮ ಸಂಬಳದ ಭರವಸೆ ನೀಡಿದರು. ವೀಸಾ ವೆಚ್ಚವನ್ನು ಕಂಪನಿಯು ನೋಡಿಕೊಳ್ಳುತ್ತದೆ ಎಂದು ಅವರು ಭರವಸೆ ನೀಡಿದರು.

ಅದಾದ ನಂತರ ನೋಂದಣಿ ವೆಚ್ಚ ಮತ್ತು ಇತರ ಶುಲ್ಕವನ್ನು ಪಾವತಿಸಲು ಹೇಳಿದರು. ಹಂತ ಹಂತವಾಗಿ, ಜಾನ್ 6.67 ಲಕ್ಷ ರೂ.  ನೀಡಿದ್ದರು. ಆದರೆ ನೌಕರಿ  ವಿಳಂಬವಾದ ಹಿನ್ನೆಲೆಯಲ್ಲಿ ಅನುಮಾನಗೊಂಡ ಜಾನ್ ಪ್ರಶ್ನಿಸಿದ್ದಾರೆ,  ಪ್ರಾಜೆಕ್ಟ್  ಮುಂದೂಡಲಾಗಿದೆ ಎಂದು ಆರೋಪಿಗಳು ಹೇಳಿದ್ದಾರೆ. ನಂತರ ಹಣ ಮರುಪಾವತಿಗೆ ಒತ್ತಾಯಿಸಿದಾಗ, ನಾಪತ್ತೆಯಾದರು ಎಂದು ವಿವರಿಸಿದ್ದಾರೆ.

ಆರೋಪಿಗಳು  ವಂಚಿಸಲು ಎರಡು ಮೊಬೈಲ್ ಫೋನ್ ಸಂಖ್ಯೆಗಳನ್ನು ಬಳಸಿದ್ದರು. ಆದರೆ ಸದ್ಯ ಎರಡೂ ಫೋನ್ ಸಂಖ್ಯೆಗಳು ಈಗ ಸ್ವಿಚ್ ಆಫ್ ಆಗಿವೆ. ಆರೋಪಿಗಳು ದೊಡ್ಡ ದಂಧೆಯ ಭಾಗವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಶಂಕಿಸಲಾಗಿದೆ.

ಉದ್ಯೋಗ ಪೋರ್ಟಲ್‌ಗಳ ಬಗ್ಗೆ ಜಾಗರೂಕರಾಗಿರಬೇಕು. ಯಾವುದೇ ಉದ್ಯೋಗದಾತರು, ಯಾವುದೇ ರೀತಿಯ ಶುಲ್ಕದ ರೂಪದಲ್ಲಿ ಮುಂಚಿತವಾಗಿ ಹಣವನ್ನು ಕೇಳುವುದಿಲ್ಲ. ಸಂಶಯಾಸ್ಪದ ವ್ಯಕ್ತಿಗಳು ತಮ್ಮ ವೈಯಕ್ತಿಕ ಖಾತೆಗೆ ಹಣ ವರ್ಗಾವಣೆ ಮಾಡುವಂತೆ ಕೇಳಿದರೆ, ಜನರು ಎಚ್ಚರದಿಂದಿರಬೇಕು ಎಂದು  ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com