ವಾಣಿ ವಿಲಾಸ ಸಾಗರ ಸುರಕ್ಷಿತವಾಗಿದೆ, ಆತಂಕ ಬೇಡ: ಸಚಿವ ಗೋವಿಂದ ಕಾರಜೋಳ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯ ಸುರಕ್ಷಿತವಾಗಿದೆ. ಸುರಕ್ಷತೆ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯ ಇಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ...
Published: 09th September 2022 01:12 AM | Last Updated: 09th September 2022 01:12 AM | A+A A-

ವಾಣಿ ವಿಲಾಸ ಸಾಗರ ಜಲಾಶಯ
ಬೆಂಗಳೂರು: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯ ಸುರಕ್ಷಿತವಾಗಿದೆ. ಸುರಕ್ಷತೆ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯ ಇಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಗುರುವಾರ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿದ ಸಚಿವರು, ಇಂದು ದಿನಾಂಕ 8 -9- 2022 ರಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತಜ್ಞರು ಸಮಿತಿಯು ವಾಣಿವಿಲಾಸ ಸಾಗರ ಜಲಾಶಯದ ಅಣೆಕಟ್ಟೆಗೆ ಭೇಟಿ ಕೊಟ್ಟಿದ್ದು, ಅಣೆಕಟ್ಟೆಯನ್ನು ಸಮಗ್ರವಾಗಿ ಪರಿಶೀಲಿಸಿ, ಪರಿವೀಕ್ಷಿಸಿದ್ದಾರೆ. ಅಣೆಕಟ್ಟೆಯ ಯಾವುದೇ ಭಾಗದಲ್ಲಿ ನೀರು ಸೋರುವಿಕೆ ಇಲ್ಲವೆಂದು ಹಾಗೂ ಅಣೆಕಟ್ಟೆಯ ಸುರಕ್ಷತೆಗೆ ಯಾವುದೇ ತೊಂದರೆ ಇಲ್ಲವೆಂದು ವರದಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ: ಚಿತ್ರದುರ್ಗ: 65 ವರ್ಷಗಳ ನಂತರ 126 ಅಡಿ ದಾಟಿದ ವಾಣಿ ವಿಲಾಸ ಸಾಗರ ಜಲಾಶಯದ ನೀರಿನ ಮಟ್ಟ!
ಪ್ರಸ್ತುತ ಅಣೆಕಟ್ಟೆಗೆ 15 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ಜಲಾಶಯದಿಂದ ಹೊರ ಬಿಡಲಾಗುತ್ತಿದೆ.
ಅಣೆಕಟ್ಟೆಯ ಗರಿಷ್ಠ ಮಟ್ಟ 142 ಅಡಿ ಇದ್ದು, ಪ್ರಸ್ತುತ ನೀರಿನ ಸಂಗ್ರಹಣೆ 135 ಅಡಿ ಇದೆ ಎಂದು ಅಣೆಕಟ್ಟೆಗೆ ಭೇಟಿ ನೀಡಿದ ತಜ್ಞರು ತಿಳಿಸಿದ್ದಾರೆಂದು ಭದ್ರಾ ಮೇಲ್ದಂಡೆ ಯೋಜನಾ ವಲಯದ ಮುಖ್ಯ ಇಂಜಿನಿಯರ್ ವರದಿ ಸಲ್ಲಿಸಿದ್ದಾರೆ. ಹೀಗಾಗಿ ಯಾರೂ ಆತಂಕಪಡುವ ಅಗತ್ಯ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.