ಬಿಟ್ ಕಾಯಿನ್ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವುದಿಲ್ಲ; ಸಾಕ್ಷಿ ಕೊಟ್ಟರೆ ಈಗಲೂ ತನಿಖೆ ನಡೆಸುತ್ತೇವೆ: ಆರಗ ಜ್ಞಾನೇಂದ್ರ
ರಾಜ್ಯದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಬಿಟ್ ಕಾಯಿನ್ ಹಗರಣದ ತನಿಖೆಗೆ ಸರಕಾರ ಮುಕ್ತ ಮನಸ್ಸು ಹೊಂದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
Published: 16th September 2022 10:59 AM | Last Updated: 16th September 2022 03:24 PM | A+A A-

ಆರಗ ಜ್ಞಾನೇಂದ್ರ
ಬೆಂಗಳೂರು: ರಾಜ್ಯದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಬಿಟ್ ಕಾಯಿನ್ ಹಗರಣದ ತನಿಖೆಗೆ ಸರಕಾರ ಮುಕ್ತ ಮನಸ್ಸು ಹೊಂದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಗುರುವಾರ ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ಟಿ.ಎ.ಶರವಣ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಾಧಾರ ನೀಡಿದರೆ ಪ್ರಾಮಾಣಿಕವಾಗಿ ತನಿಖೆ ನಡೆಸಲು ಸರಕಾರ ಸಿದ್ಧವಿದೆ ಎಂದು ಹೇಳಿದರು. ಅಂತರ್‍ರಾಷ್ಟ್ರೀಯ ಹ್ಯಾಕರ್ ಶ್ರೀಕಿಯನ್ನು ಬಂಧಿಸಿ ಈಗಾಗಲೇ ವಿಚಾರಣೆ ನಡೆಸಲಾಗಿದೆ. ಈ ತಂತ್ರಜ್ಞಾನ ನಮ್ಮ ಪೋಲೀಸರಿಗೂ ಹೊಸದು, ತಜ್ಞರನ್ನು ಕರೆಸಿ ವಿಚಾರಣೆ ನಡೆಸಲಾಗಿದೆ ಎಂದರು.
ಅಮೇರಿಕಾದಿಂದ ದೇಶದಲ್ಲಿ ಬಿಟ್ ಕಾಯಿನ್ ನಡೆಯುತ್ತಿದೆ ಎನ್ನುವ ಯಾವುದೇ ಸೂಚನೆ ಅಥವಾ ಸಲಹೆ ಬಂದಿಲ್ಲ. ಆದರೆ ಅಮೇರಿಕಾದಲ್ಲಿ ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಕೆಲವರನ್ನು ಬಂಧಿಸಿ ವಿಚಾರಣೆ ಮಾಡಲಾಗಿದೆ.
ಇದನ್ನೂ ಓದಿ: ಬಿಟ್‌ಕಾಯಿನ್ ಹಗರಣದ ತನಿಖೆಗೆ ಎಫ್‌ಬಿಐನ ಯಾವುದೇ ತಂಡ ಭಾರತಕ್ಕೆ ಬಂದಿಲ್ಲ: ಸಿಬಿಐ
ಕೆಲವರು ಸಾವಿರ ಕೋಟಿ ಕಳೆದುಕೊಂಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಬಂತು. ಆದರೆ ಕಳೆದುಕೊಂಡವರು ಯಾರು? ಅವರು ದೂರು ಕೊಡಬೇಕಲ್ಲವೇ? ನಮ್ಮ ಪೊಲೀಸರಿಗೆ ಮೊದಲು ವಾಲೆಟ್ ನಲ್ಲಿ ಕಾಯಿನ್ ಕಂಡಿತು ನಂತರ ಇರಲಿಲ್ಲ. ಬೇರೆ ಯಾವುದನ್ನೋ ಶ್ರೀಕಿ ತೋರಿಸಿದ್ದಾನೆ. ಈಗಲೂ ಸಾಕ್ಷಿ ಕೊಟ್ಟರೆ ತನಿಖೆ ನಡೆಸಲಾಗುತ್ತದೆ ಎಂದರು.