ಗದಗ: ಹದಗೆಟ್ಟ ರಸ್ತೆಗಳ ವಿರುದ್ಧ ಗ್ರಾಮ ಪಂಚಾಯಿತಿ ಕಚೇರಿಗೆ ಘೇರಾವ್ ಹಾಕಿದ ವಿದ್ಯಾರ್ಥಿಗಳು
ಗದಗ ಜಿಲ್ಲೆಯ ಗೊಜನೂರು ಗ್ರಾಮದಲ್ಲಿ ಹಠಾತ್ ಪ್ರವಾಹಕ್ಕೆ ಬಸ್ ಜಲಾವೃತಗೊಂಡಿದ್ದು, ರಸ್ತೆ ಹದಗೆಟ್ಟಿರುವ ವಿರುದ್ಧ ಶಾಲಾ ಮಕ್ಕಳು ಶಾಲೆಗೆ ತೆರಳದೆ ಗ್ರಾಮ ಪಂಚಾಯಿತಿ ಕಚೇರಿಗೆ ಬಂದು ಪ್ರತಿಭಟನೆ ನಡೆಸಿದ್ದಾರೆ.
Published: 18th September 2022 08:40 AM | Last Updated: 18th September 2022 08:40 AM | A+A A-

ರಸ್ತೆಯಲ್ಲಿ ಸಿಲುಕಿಕೊಂಡ ಬಸ್ (ಎಡ), ಗ್ರಾಮ ಪಂಚಾಯಿತಿ ಕಚೇರಿ ಎದುರು ವಿದ್ಯಾರ್ಥಿಗಳ ಪ್ರತಿಭಟನೆ ಶ್(ಬಲ)
ಗದಗ: ಜಿಲ್ಲೆಯ ಗೊಜನೂರು ಗ್ರಾಮದಲ್ಲಿ ಹಠಾತ್ ಪ್ರವಾಹಕ್ಕೆ ಬಸ್ ಜಲಾವೃತಗೊಂಡಿದ್ದು, ರಸ್ತೆ ಹದಗೆಟ್ಟಿರುವ ವಿರುದ್ಧ ಶಾಲಾ ಮಕ್ಕಳು ಶಾಲೆಗೆ ತೆರಳದೆ ಗ್ರಾಮ ಪಂಚಾಯಿತಿ ಕಚೇರಿಗೆ ಬಂದು ಪ್ರತಿಭಟನೆ ನಡೆಸಿದ್ದಾರೆ. ಘಟನೆ ಗುರುವಾರ ನಡೆದಿದ್ದು, ಕೆಲವು ಗ್ರಾಮಸ್ಥರು ಪ್ರತಿಭಟನೆಯ ವಿಡಿಯೋಗಳು ಮತ್ತು ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಬಳಿಕ ಬೆಳಕಿಗೆ ಬಂದಿದೆ.
ಕಳೆದ ಎರಡು ವಾರಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮದ ರಸ್ತೆ ಹದಗೆಟ್ಟಿದೆ. ಹೀಗಾಗಿ ಗ್ರಾಮ ಪಂಚಾಯಿತಿ ಕಚೇರಿಯ ಅವ್ಯವಹಾರದ ವಿರುದ್ಧ ಮಕ್ಕಳು ಪ್ರತಿಭಟನೆ ನಡೆಸಿದರು. ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳ ಈ ನಡೆ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ.
ಗೊಜನೂರಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಶೆಟ್ಟಿಕೆರೆ, ಚೆನ್ನಪಟ್ಟಣ, ಅಕ್ಕಿಗುಂದ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರುತ್ತಾರೆ.
ಪ್ರವಾಹದ ನೀರಿನ ಮಟ್ಟ ತಗ್ಗಿದ ಹಿನ್ನೆಲೆಯಲ್ಲಿ ಗುರುವಾರ ಬಸ್ ಸಂಚಾರ ಆರಂಭಿಸಲಾಗಿದೆ. ಆದರೆ, ಬಸ್ ಸಿಕ್ಕಿಹಾಕಿಕೊಂಡಿದ್ದು, ಶಾಲೆಗೆ 2 ಕಿ.ಮೀ ನಡೆದುಕೊಂಡು ಹೋಗುವುದೊಂದೇ ದಾರಿ ಎಂಬುದನ್ನು ತಿಳಿದ ವಿದ್ಯಾರ್ಥಿಗಳು ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿ ಕೂಡಲೇ ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಬಳಿಕ ಗ್ರಾಮ ಪಂಚಾಯಿತಿಯ ಸಿಬ್ಬಂದಿ, ಮಳೆಯಿಂದಾಗಿ ರಸ್ತೆಗಳು ಹಾಳಾಗಿರುವುದನ್ನು ಮನವರಿಕೆ ಮಾಡಿಕೊಟ್ಟು ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸಿದರು. ಗೊಜನೂರಿನ ಗ್ರಾಮಸ್ಥರು ಹಾಗೂ ರೈತರು ಸಿಲುಕಿಕೊಂಡಿದ್ದ ಬಸ್ ಮುಂದೆ ಹೋಗಲು ಸಹಕರಿಸಿದರು.
'ನಾವು ಭಾರವಾದ ಬ್ಯಾಗುಗಲು, ಊಟದ ಚೀಲ ಮತ್ತು ನೀರಿನ ಬಾಟಲಿಗಳೊಂದಿಗೆ ಶಾಲೆಗೆ ಹೋಗುತ್ತಿದ್ದೆವು. ಹಿರಿಯರೊಬ್ಬರು, ನಮ್ಮನ್ನು ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿ ರಸ್ತೆ ದುರಸ್ತಿಗೆ ಒತ್ತಾಯಿಸಿ ಎಂದು ಹೇಳಿದರು. ನಾವೆಲ್ಲ ಅವರ ಜೊತೆ ಹೋಗಿ ಪ್ರತಿಭಟನೆ ಮಾಡಿದೆವು. ಹಲವು ದಿನಗಳಿಂದ ರಸ್ತೆ ಹದಗೆಟ್ಟಿದೆ' ಎಂದು ವಿದ್ಯಾರ್ಥಿಯೊಬ್ಬರು ತಿಳಿಸಿದ್ದಾರೆ.
ಗೊಜನೂರಿನ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಮಾತನಾಡಿ, ‘ಅತಿವೃಷ್ಟಿಯಿಂದ ರಸ್ತೆ ಹಾಳಾಗಿದ್ದು, ತಹಶೀಲ್ದಾರ್ ಅವರ ಗಮನಕ್ಕೂ ತಂದಿದ್ದೇವೆ. ಮಳೆ ನಿಂತ ಬಳಿಕ ದುರಸ್ತಿಪಡಿಸುತ್ತೇವೆ’ ಎಂದರು.