ವಿದ್ಯುತ್ ಖರೀದಿಗೆ ಪ್ರತಿ ವರ್ಷ 33 ಸಾವಿರ ಕೋಟಿ ರೂ. ವ್ಯಯ; ಹೆಸ್ಕಾಂಗಳ ಮೇಲಿದೆ 38,973 ಕೋಟಿ ರೂ. ಸಾಲ!

ಕೆಪಿಟಿಸಿಎಲ್ ಸೇರಿದಂತೆ ವಿವಿಧ ವಿದ್ಯುತ್ ಪ್ರಸರಣ ನಿಗಮಗಳು 2002ರಿಂದ ಈವರೆಗೂ 38,973 ಕೋಟಿ ರೂ. ಸಾಲ ಮಾಡಿದ್ದು, ಅದು 2040ರ ವೇಳೆಗೆ ಎಂದು ಇಂಧನ ಸಚಿವ ವಿ.ಸುನೀಲ್‍ಕುಮಾರ್ ತಿಳಿಸಿದರು.
ಸುನೀಲ್ ಕುಮಾರ್
ಸುನೀಲ್ ಕುಮಾರ್

ಬೆಂಗಳೂರು: ಕೆಪಿಟಿಸಿಎಲ್ ಸೇರಿದಂತೆ ವಿವಿಧ ವಿದ್ಯುತ್ ಪ್ರಸರಣ ನಿಗಮಗಳು 2002ರಿಂದ ಈವರೆಗೂ 38,973 ಕೋಟಿ ರೂ. ಸಾಲ ಮಾಡಿದ್ದು, ಅದು 2040ರ ವೇಳೆಗೆ ಎಂದು ಇಂಧನ ಸಚಿವ ವಿ.ಸುನೀಲ್‍ಕುಮಾರ್ ತಿಳಿಸಿದರು.

ವಿಧಾನಪರಿಷತ್‍ನ ಪ್ರಶ್ನೋತ್ತರ ಅವಧಿಯಲ್ಲಿ ಭಾರತಿ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೆಪಿಟಿಸಿಎಲ್ 9,590.99 ಕೋಟಿ, ಬೆಸ್ಕಾಂ- 13,613.23 ಕೋಟಿ, ಚೆಸ್ಕಾಂ 3536 ಕೋಟಿ, ಮೆಸ್ಕಾಂ- 1282 ಕೋಟಿ, ಹೆಸ್ಕಾಂ- 7480 ಕೋಟಿ, ಜೆಸ್ಕಾಂ 3472 ಕೋಟಿ ಸಾಲ ಪಡೆದಿವೆ. ಇವುಗಳಿಗೆ ಬಡ್ಡಿ ಮತ್ತು ಅಸಲು ಪಾವತಿ ಪ್ರಕ್ರಿಯೆ ನಿರಂತರವಾಗಿ ಮುಂದುವರೆದಿದೆ. ವಿದ್ಯುತ್ ವಿತರಣಾ ವ್ಯವಸ್ಥೆಗಾಗಿ ಹೆಸ್ಕಾಂಗಳು ರಚನೆಯಾದ ಬಳಿಕ ಸಾಲ ಮಾಡಿಯೇ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತಿದೆ ಎಂದರು.

ವಿದ್ಯುತ್ ಸರಬರಾಜಿಲ್ಲಿ ಶೇ.60ರಷ್ಟು ರೈತರ ಪಂಪ್‍ಸೆಟ್‍ಗೆ ಉಚಿತವಾಗಿ ನೀಡಲಾಗುತ್ತಿದೆ. 38 ಲಕ್ಷ ರೈತರಿಗೆ ವಿದ್ಯುತ್ ಪೂರೈಸಲು 13 ಸಾವಿರ ಕೋಟಿ ರೂ.ಗಳ ಸಬ್ಸಿಡಿ ನೀಡಲಾಗುತ್ತಿದೆ. ಭಾಗ್ಯಜ್ಯೋತಿ ಯೋಜನೆಯಡಿ ವಿದ್ಯುತ್ ವಿತರಣೆಗೆ 700 ಕೋಟಿ ರೂ. ಸಬ್ಸಿಡಿ ನೀಡಲಾಗುತ್ತಿದೆ. ಐಬಿ ಸೆಟ್‍ಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಹೊಸದಾಗಿ 6.3 ಲಕ್ಷ ರೈತರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದರು.

ಹೆಚ್ಚುವರಿ ವಿದ್ಯುತ್‌ ಉತ್ಪಾದಿಸುವ ರಾಜ್ಯ ಎಂಬ “ಹೆಗ್ಗಳಿಕೆ’ ನಡುವೆಯೂ ಸರ್ಕಾರ ವಿದ್ಯುತ್‌ ಖರೀದಿಗಾಗಿಯೇ ಪ್ರತಿ ವರ್ಷ 33 ಸಾವಿರ ಕೋಟಿ ರೂ. ವ್ಯಯ ಮಾಡುತ್ತಿದೆ! ”ವಿದ್ಯುತ್‌ ಖರೀದಿ ಒಪ್ಪಂದ’ (ಪಿಪಿಎ)ದಡಿ ಸೇರಿದಂತೆ ವಿವಿಧ ರೀತಿಯ ವಿದ್ಯುತ್‌ ಖರೀದಿಗಾಗಿಯೇ ವಾರ್ಷಿಕ 33 ಸಾವಿರ ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಈ ಮಧ್ಯೆ ವಾರ್ಷಿಕ 13 ಸಾವಿರ ಕೋಟಿ ರೂ. ರೈತರಿಗೆ ನೀಡಲಾಗುವ ಉಚಿತ ವಿದ್ಯುತ್‌ಗೆ ಸಂಬಂಧಿಸಿದ ಸಬ್ಸಿಡಿ ಮೊತ್ತ ಹಾಗೂ ಭಾಗ್ಯಜ್ಯೋತಿ ಮತ್ತು ಕುಟೀರ ಜ್ಯೋತಿ ಸಬ್ಸಿಡಿ ವರ್ಷಕ್ಕೆ 600-700 ಕೋಟಿ ರೂ. ಆಗುತ್ತಿದೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರದಿಂದ ಅಂದರೆ ಕಳೆದ ಮೂರು ವರ್ಷಗಳಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ನೀಡುವ ಉಚಿತ ವಿದ್ಯುತ್‌ ಪೂರೈಕೆ ಯೋಜನೆ ಅಡಿ 6.33 ಲಕ್ಷ ರೈತರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ ಎಂದು ಸಚಿವ ಸುನಿಲ್ ಕುಮಾರ್ ತಿಳಿಸಿದರು.

ಪ್ರಸ್ತುತ 38 ಲಕ್ಷ ರೈತರ ಐಪಿ ಸೆಟ್‌ಗಳಿಗೆ ನಿತ್ಯ 7 ಗಂಟೆ ತ್ರಿಫೇಸ್‌ ವಿದ್ಯುತ್‌ ಪೂರೈಕೆ ಮಾಡಲಾಗುತ್ತಿದೆ. ಇದರ ವಾರ್ಷಿಕ ಸಬ್ಸಿಡಿ ಮೊತ್ತ 13 ಸಾವಿರ ಕೋಟಿ ರೂ. ಆಗುತ್ತಿದೆ. ವರ್ಷದಿಂದ ವರ್ಷಕ್ಕೆ ಫ‌ಲಾನುಭವಿಗಳ ಸಂಖ್ಯೆ ಏರಿಕೆ ಆಗುತ್ತಲೇ ಇದೆ ಎಂದ ಅವರು, ಕೆಪಿಟಿಸಿಎಲ್‌ ಮತ್ತು ಎಸ್ಕಾಂಗಳು 2002ರಿಂದ ಸಾಲ ಪಡೆಯಲು ಆರಂಭಿಸಿದ್ದು, ಇದರ ಮರುಪಾವತಿ ಅವಧಿಯು 2047ರವರೆಗೂ ಇದೆ ಎಂದರು.

ಸರಬರಾಜು ಮತ್ತು ವಿತರಣೆಯಲ್ಲಿನ ನಷ್ಟ ತಪ್ಪಿಸಲು ಭೂಗರ್ಭದಲ್ಲಿ ಕೇಬಲ್ ಅಳವಡಿಕೆ ಮಾಡಲಾಗುತ್ತಿದೆ. ಆದಾಯ ಹೆಚ್ಚಿಸುವ ಸಲುವಾಗಿ ಭೂಗರ್ಭದಲ್ಲಿ ವಿದ್ಯುತ್ ಜೊತೆ ಮತ್ತೊಂದು ಕೇಬಲ್ ಅಳವಡಿಕೆಗೂ ಅವಕಾಶ ಮಾಡಿಕೊಡಲಾಗಿದೆ ಎಂದರು.

ಸದಸ್ಯ ಗೋವಿಂದರಾಜು ಅವರು ಕೆಲವು ಕಡೆ ಅಳವಡಿಸಲಾಗುತ್ತಿರುವ ಕೇಬಲ್‍ಗಳನ್ನು ಕೊಳವೆ ಮಾರ್ಗದಲ್ಲಿ ಮುಚ್ಚಿಡದೆ ಒಳಚರಂಡಿ ಹಾಗೂ ತೆರೆದ ಸ್ಥಳಗಳಲ್ಲಿ ಮುಕ್ತವಾಗಿ ಬಿಡಲಾಗಿದೆ. ಇದು ಅಪಾಯಕಾರಿಯಾಗಿದೆ ಎಂದು ಸಚಿವರ ಗಮನ ಸೆಳೆದಾಗ, ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com