ಐಎಎಸ್ ಅಧಿಕಾರಿ ಪಂಕಜ್ ಕುಮಾರ್ ಪಾಂಡೆ 2 ವರ್ಷದಿಂದ ಲೀಸ್ ಫೈಲ್ ಕ್ಲಿಯರ್ ಮಾಡಿಲ್ಲ: ನಿರಾಣಿ ಅಸಮಾಧಾನ; ಪರಿಷತ್ ನಲ್ಲಿ ಕೋಲಾಹಲ!

ಐಎಎಸ್ ಅಧಿಕಾರಿ ಪಂಕಜ್ ಕುಮಾರ್ ಪಾಂಡೆ 2 ವರ್ಷದಿಂದ ಮೈಸೂರು ಹಾಗೂ ಮಂಡ್ಯ ಸಕ್ಕರೆ ಕಾರ್ಖಾನೆ ಲೀಸ್​ ಫೈಲ್ ಕ್ಲಿಯರ್ ಮಾಡಿಲ್ಲ ಎಂದು  ಬೃಹತ್ ಕಾಮಗಾರಿ ಸಚಿವ ಮುರುಗೇಶ್ ನಿರಾಣಿ ನೇರ ಆರೋಪ ಮಾಡಿದ್ದಾರೆ
ಮುರುಗೇಶ್ ನಿರಾಣಿ
ಮುರುಗೇಶ್ ನಿರಾಣಿ

ಬೆಂಗಳೂರು: ಐಎಎಸ್ ಅಧಿಕಾರಿ ಪಂಕಜ್ ಕುಮಾರ್ ಪಾಂಡೆ 2 ವರ್ಷದಿಂದ ಮೈಸೂರು ಹಾಗೂ ಮಂಡ್ಯ ಸಕ್ಕರೆ ಕಾರ್ಖಾನೆ ಲೀಸ್​ ಫೈಲ್ ಕ್ಲಿಯರ್ ಮಾಡಿಲ್ಲ ಎಂದು  ಬೃಹತ್ ಕಾಮಗಾರಿ ಸಚಿವ ಮುರುಗೇಶ್ ನಿರಾಣಿ ನೇರ ಆರೋಪ ಮಾಡಿದ್ದಾರೆ

ಕಡತ ವಿಲೇವಾರಿಗೆ ಸಂಬಂಧಿಸಿದಂತೆ ಸರ್ಕಾರದಲ್ಲಿ ಆಗುತ್ತಿರುವ ವಿಳಂಬ ಧೋರಣೆ ಬಗ್ಗೆ ಸ್ವತಃ ಬೃಹತ್‌ ಕೈಗಾರಿಕೆಗಳ ಸಚಿವ ಮುರುಗೇಶ್‌ ನಿರಾಣಿ, ಮೇಲ್ಮನೆಯಲ್ಲಿ ಬಹಿರಂಗವಾಗಿ ಅಸಹಾಯಕತೆ ವ್ಯಕ್ತಪಡಿಸಿದ ಪ್ರಸಂಗ ಮಂಗಳವಾರ ನಡೆಯಿತು. ಸಚಿವರ ಈ “ಅಸಮಾಧಾನ’ ಕೋಲಾಹಲ ಸೃಷ್ಟಿಸಿತು.

“ನನ್ನದೇ ಕಾರ್ಖಾನೆಯೊಂದರ ಲೀಸ್‌ಗೆ ಸಂಬಂಧಿಸಿದ ಫೈಲ್‌ (ಕಡತ) ಎರಡು ವರ್ಷಗಳಾದರೂ ವಿಲೇವಾರಿ ಮಾಡಿಲ್ಲ. ಆ ಇಲಾಖೆ ಅಧಿಕಾರಿ ಪಂಕಜ್‌ ಕುಮಾರ್‌ ಪಾಂಡೆ ಕೂಡ ಇದೇ ಅಧಿಕಾರಿಗಳ ಗ್ಯಾಲರಿಯಲ್ಲಿ ಕುಳಿತಿದ್ದಾರೆ’ ಎಂದು ಅಸಹಾಯಕತೆ ತೋಡಿಕೊಂಡರು.

ಸಕ್ಕರೆ ಸಚಿವರು ಉತ್ತಮ ಕೆಲಸ ಮಾಡುತ್ತಿದ್ದು, ಸಕ್ಕರೆ ಕೈಗಾರಿಕೆಗಳಿಗೆ ಉತ್ತೇಜನ ನೀಡುತ್ತಿದ್ದಾರೆ, ಆದರೆ ಇಲ್ಲಿಗೆ ಬಂದಿರುವ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಅವರು ಮುಖ್ಯಮಂತ್ರಿ ಮತ್ತು ಸಕ್ಕರೆ ಸಚಿವರು ಹೇಳಿದರೂ ಕಳೆದ ಎರಡು ವರ್ಷಗಳಿಂದ ಲೀಸ್ ಪತ್ರ ನೀಡಿಲ್ಲ ಎಂದು ನಿರಾಣಿ ಹೇಳಿದರು.  

ಮಂಡ್ಯದ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ನಿರಾಣಿ ಅವರ ನಿರಾಣಿ ಶುಗರ್ಸ್ ಲಿಮಿಟೆಡ್‌ಗೆ 40 ವರ್ಷಗಳ ಗುತ್ತಿಗೆಗೆ ನೀಡಲಾಗಿತ್ತು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಕೈಗಾರಿಕೋದ್ಯಮಿಯೂ ಆಗಿರುವ ಸಚಿವರು, ಕಾರ್ಯಾಚರಣೆ ಆರಂಭಿಸಲು 50 ಕೋಟಿ ರೂ.  ಖರ್ಚು ಮಾಡಿರುವುದಾಗಿ ತಿಳಿಸಿದರು. ಆದರೆ ಐಎಎಸ್ ಅಧಿಕಾರಿ ಇದುವರೆಗೂ ಗುತ್ತಿಗೆ ಪತ್ರ ನೀಡಿಲ್ಲ. ಒಬ್ಬ ಸಚಿವನಾಗಿ ನಾನು ಅದರ ಬಗ್ಗೆ ಇಲ್ಲಿ ಮಾತನಾಡಬಹುದೇ ಎಂದು ನನಗೆ ಖಚಿತವಿಲ್ಲ. ಇದರಿಂದ ನನಗೆ ಬೇಸರವಾಗಿದೆ ಎಂದು ನಿರಾಣಿ ಹೇಳಿದರು.

ಮಂಗಳವಾರ ಪ್ರಶ್ನೋತ್ತರ ವೇಳೆ ಬಿಜೆಪಿಯ ಸುನೀಲ್‌ ವಲ್ಯಾಪುರ, ಸಕ್ಕರೆ ಕಾರ್ಖಾನೆಗಳು ಕಬ್ಬಿನ ಉಪ ಉತ್ಪನ್ನಗಳಿಂದ ತಯಾರಿಸುವ ವಿದ್ಯುತ್‌, ಎಥೆನಾಲ್‌ ಇತ್ಯಾದಿಗಳಿಂದ ಗಳಿಸುವ ಲಾಭಾಂಶವನ್ನು ರೈತರಿಗೆ ನೀಡುತ್ತಿಲ್ಲ ಎಂದು ಹೇಳಿದರು. ಇದಕ್ಕೆ ಪೂರಕವಾಗಿ ಮಾಜಿ ಸಚಿವ ಲಕ್ಷ್ಮಣ ಸವದಿ, “ಎಥೆನಾಲ್‌ ಉತ್ಪಾದಿಸಿ ಮೂರು ತಿಂಗಳಾದರೂ ಸರ್ಕಾರ ಮತ್ತು ಸರ್ಕಾರಿ ಸ್ವಾಮ್ಯದ ಕಂಟನಿಗಳು ಒಡಂಬಡಿಕೆ ಮಾಡಿಕೊಳ್ಳುತ್ತಿಲ್ಲ’ ಎಂದು ಗಮನ ಸೆಳೆದರು.

ಈ ವೇಳೆ ದನಿಗೂಡಿಸಿದ ಸಚಿವ ಮುರುಗೇಶ್‌ ನಿರಾಣಿ, “ನನ್ನದೇ ಕಾರ್ಖಾನೆಯ ಲೀಸ್‌ಗೆ ಸಂಬಂಧಿಸಿದ ಫೈಲ್‌ ಎರಡು ವರ್ಷಗಳಾದರೂ ವಿಲೇವಾರಿ ಆಗಿಲ್ಲ. ಆ ಅಧಿಕಾರಿಯೂ ಇಲ್ಲಿಯೇ ಇದ್ದಾರೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಆಗ ಪ್ರತಿಪಕ್ಷಗಳ ಸದಸ್ಯರು ಸರ್ಕಾರದ ಮೇಲೆ ಮುಗಿಬಿದ್ದರು.

ಮುಖ್ಯ ಸಚೇತಕ ಪ್ರಕಾಶ್‌ ರಾಠೊಡ್‌ ಮಾತನಾಡಿ, “ಸರ್ಕಾರದಲ್ಲಿ ಸಚಿವರ ಸ್ಥಿತಿಯೇ ಹೀಗಿರುವಾಗ, ಸಾಮಾನ್ಯರ ಗತಿ ಏನು? ಸರ್ಕಾರ ನಡೆಯುತ್ತಲೇ ಇಲ್ಲ ಎನ್ನುವುದಕ್ಕೆ ಇದೇ ಉದಾಹರಣೆಯಾಗಿದೆ. ಕೂಡಲೇ ಅಧಿಕಾರಿಯನ್ನು ಅಮಾನತುಗೊಳಿಸಬೇಕು ಅಥವಾ ಸಂಬಂಧಪಟ್ಟ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, “ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಸಚಿವ ಮುರುಗೇಶ್‌ ನಿರಾಣಿ ಅವರ ಮಾಲೀಕತ್ವದ ನಿರಾಣಿ ಉದ್ಯಮ ಸಮೂಹ ಗುತ್ತಿಗೆ ಪಡೆದಿದೆ. ಲೀಸ್‌ ಒಡಂಬಡಿಕೆಗೆ ಸಚಿವರು ಮುದ್ರಾಂಕ ಶುಲ್ಕ ವಿನಾಯ್ತಿ ಕೇಳಿದ್ದಾರೆ. ಆದರೆ, ಈ ಬಗ್ಗೆ ಆರ್ಥಿಕ ಇಲಾಖೆ ಹಲವು ಮಾಹಿತಿಗಳನ್ನು ಕೇಳಿದೆ.

ಜತೆಗೆ ಮುಖ್ಯಮಂತ್ರಿಗಳ ಜತೆಗೂ ಚರ್ಚೆ ನಡೆದಿದೆ. ಸಚಿವ ಸಂಪುಟದಲ್ಲಿ ತೆಗೆದುಕೊಂಡು ಹೋಗಬೇಕಿದೆ. ಈ ಎಲ್ಲ ಕಾರಣಗಳಿಂದ ತುಸು ವಿಳಂಬವಾಗಿದೆ. ಆದರೆ, ಅಧಿಕಾರಿಗಳು ನೀತಿ-ನಿಯಮ ಪಾಲನೆ ಮಾಡಬೇಕಾಗುತ್ತದೆ’ ಎಂದು ಸೂಚ್ಯವಾಗಿ ಹೇಳಿದರು. ಲೀಸ್‌ನಲ್ಲಿ ವಿಳಂಬವಾಗಿದ್ದರೂ ಕ್ರಷಿಂಗ್‌ಗೆ ಅವಕಾಶ ಮಾಡಿಕೊಡಲಾಗಿದೆ. ಬಿಲ್‌ ಕೂಡ ಪಾವತಿಸಲಾಗುತ್ತಿದೆ. ಇದು ಸೇರಿದಂತೆ ಯಾವುದಕ್ಕೂ ಅಡತಡೆ ಉಂಟುಮಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com