ಮೈಸೂರು ದಸರಾ ಮಹೋತ್ಸವ: ರಾಷ್ಟ್ರಪತಿ, ರಾಜ್ಯಪಾಲರು, ಸಿಎಂ ಬೊಮ್ಮಾಯಿ ಸೇರಿ ಹಲವರಿಗೆ ಆಹ್ವಾನ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2022ರ ಕಾರ್ಯಕ್ರಮಕ್ಕೆ ರಾಜ್ಯಪಾಲರು, ಮುಖ್ಯಮಂತ್ರಿಗಳು ಸೇರಿದಂತೆ ಗಣ್ಯಾತಿಗಣ್ಯರಿಗೆ ಸಹಕಾರ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್...
Published: 21st September 2022 06:56 PM | Last Updated: 21st September 2022 06:56 PM | A+A A-

ಸಿಎಂ ಬೊಮ್ಮಾಯಿಗೆ ಆಹ್ವಾನ
ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2022ರ ಕಾರ್ಯಕ್ರಮಕ್ಕೆ ರಾಜ್ಯಪಾಲರು, ಮುಖ್ಯಮಂತ್ರಿಗಳು ಸೇರಿದಂತೆ ಗಣ್ಯಾತಿಗಣ್ಯರಿಗೆ ಸಹಕಾರ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಬುಧವಾರ ಆಹ್ವಾನ ನೀಡಿದರು.
ಸೆಪ್ಟೆಂಬರ್ 26ರಿಂದ ಆರಂಭವಾಗಲಿರುವ ನಾಡಹಬ್ಬ ದಸರಾ ಮಹೋತ್ಸವಕ್ಕೆ ಆಗಮಿಸುವಂತೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿ, ಸನ್ಮಾನಿಸಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.
ಇದನ್ನು ಓದಿ: ಮೈಸೂರು ದಸರಾ ಮಹೋತ್ಸವ 2022: ಯುವ ಸಂಭ್ರಮಕ್ಕೆ ಚಾಲನೆ
ಬಳಿಕ ವಿಧಾನಸೌಧದ ಮುಖ್ಯಮಂತ್ರಿ ಕಚೇರಿಯಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ, ಫಲಪುಷ್ಪಗಳನ್ನು ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಇದೇ ವೇಳೆ ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಅವರನ್ನು ಭೇಟಿ ಮಾಡಿ ಆಹ್ವಾನ ನೀಡಿದರು.
ನಂತರ ರಾಜ್ಯ ಹೈಕೋರ್ಟ್ ನ ಹಂಗಾಮಿ ಮುಖ್ಯನ್ಯಾಯಮೂರ್ತಿ ಅಲೋಕ್ ಆರಾಧೆ ಅವರನ್ನು ಭೇಟಿ ಮಾಡಿ, ದಸರಾ ಮಹೋತ್ಸವ -2022ರ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.
ಮೈಸೂರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ದಸರಾ ಸ್ವಾಗತ ಉಪಸಮಿತಿ ಕಾರ್ಯಾಧ್ಯಕ್ಷರಾದ ರೂಪ ಎಂ. ಜೆ., ಕಾರ್ಯದರ್ಶಿ ಕೆ. ಕುಬೇರಪ್ಪ, ಸಚಿವರ ಆಪ್ತ ಕಾರ್ಯದರ್ಶಿ ಶ್ರೀನಿವಾಸ್ ಗೌಡ, ವಿಶೇಷ ಕರ್ತವ್ಯಾಧಿಕಾರಿ ದೊಡ್ಡನಾಗಯ್ಯ ಮತ್ತಿತರರು ಉಪಸ್ಥಿತರಿದ್ದರು.
ಸೆ.22ರಂದು ರಾಷ್ಟ್ರಪತಿಗಳಿಗೆ ಆಹ್ವಾನ
ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಸೆ.22ರಂದು ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, ದಸರಾ ಮಹೋತ್ಸವ 2022ರ ಉದ್ಘಾಟನೆಗೆ ಆಹ್ವಾನಿಸಲಿದ್ದಾರೆ.
ಕೇಂದ್ರ ಸಚಿವರುಗಳಾದ ನಿರ್ಮಲಾ ಸೀತಾರಾಮನ್, ಪ್ರಲ್ಹಾದ ಜೋಶಿ, ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ, ಭಗವಂತ ಖೂಬಾ ಅವರನ್ನೂ ದಸರಾ ಮಹೋತ್ಸವಕ್ಕೆ ಆಹ್ವಾನಿಸಲಿದ್ದಾರೆ.
ಸೆ.26ರಂದು ನಾಡದೇವತೆ ಚಾಮುಂಡೇಶ್ವರಿ ದೇವಿಯ ಅಗ್ರಪೂಜೆಯೊಂದಿಗೆ ನಾಡಹಬ್ಬ ಮೈಸೂರು ದಸರಾ ಆರಂಭವಾಗಲಿದೆ. ಅಂದು ಬೆಳಗ್ಗೆ 9.45ರಿಂದ 10.05ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ದಸರಾ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ.