'ರಾಜ್ಯದಲ್ಲಿ ಅತಿವೃಷ್ಟಿಯಿಂದ 12,319.30 ಕೋಟಿ ರು ನಷ್ಟ: ಬೆಂಗಳೂರು ಅಭಿವೃದ್ಧಿಗೆ ಬಜೆಟ್ ನಲ್ಲಿ ವಿಶೇಷ ಅನುದಾನ'
ರಾಜ್ಯದಲ್ಲಿ ಸುರಿದ ಅತಿವೃಷ್ಟಿ ಮತ್ತು ಪ್ರವಾಹದಿಂದ ಜುಲೈ 12ರಿಂದ ಈವರೆಗೆ 12,319.30 ಕೋಟಿ ರು ನಷ್ಟ ಸಂಭವಿಸಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.
Published: 23rd September 2022 08:47 AM | Last Updated: 23rd September 2022 01:54 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ಸುರಿದ ಅತಿವೃಷ್ಟಿ ಮತ್ತು ಪ್ರವಾಹದಿಂದ ಜುಲೈ 12ರಿಂದ ಈವರೆಗೆ 12,319.30 ಕೋಟಿ ರು ನಷ್ಟ ಸಂಭವಿಸಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.
ಅತಿವೃಷ್ಟಿ ಮತ್ತು ಪ್ರವಾಹದ ಕುರಿತು ಪರಿಷತ್ ನಲ್ಲಿ ನಡೆದ ಚರ್ಚೆಗೆ ಉತ್ತರಿಸಿದ ಅವರು, ಮಳೆಯಿಂದಾಗಿ ಅಂದಾಜು 12,319 ಕೋಟಿ ರೂ.ನಷ್ಟವಾಗಿದೆ, 45,465 ಮನೆಗಳಿಗೆ ಹಾನಿಯಾಗಿದ್ದು, ಅದರಲ್ಲಿ 2,438 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ.
8,91,187 ಹೆಕ್ಟೇರ್ ಕೃಷಿ ಭೂಮಿ ಸೇರಿದಂತೆ 10,06,441 ಹೆಕ್ಟೇರ್ ಪ್ರದೇಶದಲ್ಲಿ ರೈತರು ಬೆಳೆ ಕಳೆದುಕೊಂಡಿದ್ದಾರೆ. ಮಳೆಯಿಂದಾಗಿ ರಾಜ್ಯದಲ್ಲಿ 27,648 ಕಿಮೀ ರಸ್ತೆಗಳು ಹಾಳಾಗಿವೆ ಎಂದು ಅಶೋಕ್ ವಿವರಿಸಿದರು.
ಇದನ್ನೂ ಓದಿ: 14,762 ಕೋಟಿ ರೂ. ಪೂರಕ ಅಂದಾಜು ಮಂಡಿಸಿದ ಸಿಎಂ ಬೊಮ್ಮಾಯಿ, ಮಠಗಳಿಗೆ 400 ಕೋಟಿ ಹಂಚಿಕೆ
ಇದೇ ವೇಳೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಬೆಂಗಳೂರಿನ ಒಳಚರಂಡಿ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳ ನಿವಾರಣೆಗೆ ಸರ್ಕಾರ ಮಾಸ್ಟರ್‌ಪ್ಲಾನ್ ಸಿದ್ಧಪಡಿಸಿ ಕಾರ್ಯಪಡೆ ರಚಿಸುತ್ತಿದೆ ಎಂದರು.
ನಾವು ಮೂರು ವರದಿಗಳನ್ನು ಅಧ್ಯಯನ ಮಾಡಿದ್ದೇವೆ, ಅದರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಕೂಡ ವರದಿಯೊಂದನ್ನು ಸಿದ್ಧಪಡಿಸಿದೆ. ನಾವು ಬೆಂಗಳೂರಿನ ಪ್ರಸ್ತುತ ಜನಸಂಖ್ಯೆಯನ್ನು ನೆನಪಿನಲ್ಲಿಟ್ಟುಕೊಂಡಿದ್ದೇವೆ, ಮುಂದಿನ 3-4 ಬಜೆಟ್‌ನಲ್ಲಿ ವಿಶೇಷ ಅನುದಾನ ನೀಡಲಾಗುವುದು’ ಎಂದು ಬೊಮ್ಮಾಯಿ ಹೇಳಿದರು.