ವಿಟಿಯು ಕುಲಪತಿ ಸ್ಥಾನಕ್ಕೆ ಮೂವರ ಹೆಸರು ಅಂತಿಮ; ಉನ್ನತ ಹುದ್ದೆ ಪಡೆಯಲು ಭಾರಿ ಲಾಬಿ!
ಮೂಲಗಳ ಪ್ರಕಾರ, ಉನ್ನತ ಹುದ್ದೆಯನ್ನು ಹಿಡಿಯಲು ಅಭ್ಯರ್ಥಿಗಳು ರಾಜ್ಯದ ಪ್ರಮುಖ ರಾಜಕಾರಣಿಗಳಲ್ಲದೆ ಕೆಲವು ಆರ್‌ಎಸ್‌ಎಸ್ ನಾಯಕರ ಬೆನ್ನು ಬಿದ್ದಿದ್ದು, ಒತ್ತಡ ಹೇರುತ್ತಿದ್ದಾರೆ.
Published: 27th September 2022 02:46 PM | Last Updated: 27th September 2022 03:19 PM | A+A A-

ಸಾಂದರ್ಭಿಕ ಚಿತ್ರ
ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಕುಲಪತಿ (ವಿಸಿ) ಹುದ್ದೆಗೆ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರು ರಚಿಸಿದ್ದ ಶೋಧನಾ ಸಮಿತಿ ಮೂವರು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ. ಅಭ್ಯರ್ಥಿಗಳ ಶಾರ್ಟ್‌ಲಿಸ್ಟ್ ಮಾಡಿದ ನಂತರವೂ ಹುದ್ದೆಗೆ ಭಾರಿ ಲಾಬಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ, ಶಾರ್ಟ್‌ಲಿಸ್ಟ್ ಮಾಡಿರುವ ಮೂವರು ಅಭ್ಯರ್ಥಿಗಳಲ್ಲಿ ಒಬ್ಬರನ್ನು ವಿಸಿಯಾಗಿ ಆಯ್ಕೆ ಮಾಡುವಾಗ ರಾಜ್ಯಪಾಲರು, ಗಂಭೀರ ಸ್ವರೂಪದ ಆರೋಪಗಳನ್ನು ಎದುರಿಸುತ್ತಿರುವ ಅಭ್ಯರ್ಥಿಗಳನ್ನು ಪರಿಗಣಿಸುವ ಸಾಧ್ಯತೆಯಿಲ್ಲ. ಉನ್ನತ ಮಟ್ಟದಲ್ಲಿ ಅವರ ಸಂಪರ್ಕಗಳು ಮತ್ತು ಲಿಂಕ್‌ಗಳನ್ನು ಅನ್ವೇಷಿಸಲಾಗುತ್ತದೆ.
ಕುಲಪತಿ ಹುದ್ದೆಗೆ 78 ಅರ್ಜಿದಾರರ ಪೈಕಿ ಶೋಧನಾ ಸಮಿತಿಯು, ಗೋವಾದ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ (ಎನ್ಐಟಿ) ನಿರ್ದೇಶಕ ಡಾ. ಗೋಪಾಲ್ ಮುಗೇರಾಯ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ರಿಜಿಸ್ಟ್ರಾರ್ ಡಾ. ಆನಂದ ದೇಶಪಾಂಡೆ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್ಒಯು) ಕುಲಪತಿ ಡಾ. ಎಸ್. ವಿದ್ಯಾಶಂಕರ್ ಅವರನ್ನು ಶಾರ್ಟ್‌ಲಿಸ್ಟ್ ಮಾಡಿದೆ.
ಶೋಧನಾ ಸಮಿತಿಯು ಮೂವರು ಅಭ್ಯರ್ಥಿಗಳ ಪಟ್ಟಿಯನ್ನು ಶನಿವಾರ ರಾಜಭವನಕ್ಕೆ ಸಲ್ಲಿಸಿದ್ದು, ರಾಜ್ಯಪಾಲರು ಅವರಲ್ಲಿ ಒಬ್ಬರನ್ನು ವಿಟಿಯುನ ವಿಸಿ ಆಗಿ ಶೀಘ್ರದಲ್ಲೇ ಆಯ್ಕೆ ಮಾಡುವ ನಿರೀಕ್ಷೆಯಿದೆ.
ಮೂಲಗಳ ಪ್ರಕಾರ, ಉನ್ನತ ಹುದ್ದೆಯನ್ನು ಹಿಡಿಯಲು ಅಭ್ಯರ್ಥಿಗಳು ರಾಜ್ಯದ ಪ್ರಮುಖ ರಾಜಕಾರಣಿಗಳಲ್ಲದೆ ಕೆಲವು ಆರ್‌ಎಸ್‌ಎಸ್ ನಾಯಕರ ಬೆನ್ನು ಬಿದ್ದಿದ್ದು, ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಅವ್ಯವಹಾರ; ಲೋಕಾಯುಕ್ತಕ್ಕೆ ದೂರು ದಾಖಲು
ವಿಸಿ ಹುದ್ದೆಗೆ ಸ್ಪರ್ಧಿಸಿರುವ ಕೆಲವು ಅಭ್ಯರ್ಥಿಗಳು ಭಾಗಿಯಾಗಿದ್ದಾರೆ ಎನ್ನಲಾದ ಪ್ರಕರಣಗಳು ಮತ್ತು ವಿವಾದಗಳ ಕುರಿತು ಹಲವಾರು ಶಿಕ್ಷಣ ತಜ್ಞರು ಟಿಎನ್‌ಐಇಯೊಂದಿಗೆ ವಿವರಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ಶಾರ್ಟ್‌ಲಿಸ್ಟ್ ಆಗಿರುವ ಅಭ್ಯರ್ಖಿಗಳ ವಿರುದ್ಧ ಗಂಭೀರ ಸ್ವರೂಪದ ಪ್ರಕರಣಗಳು ದಾಖಲಾಗಿವೆ ಎಂದು ಕೆಲವು ದಾಖಲೆಗಳನ್ನು ಮತ್ತು ಆಡಿಯೋ ಟೇಪ್ ಅನ್ನು ಹಂಚಿಕೊಂಡಿದ್ದಾರೆ.
ಶೋಧನಾ ಸಮಿತಿಯ ಸದಸ್ಯರೊಬ್ಬರ ಪ್ರಕಾರ, ಶೋಧನಾ ಸಮಿತಿಯಿಂದ ಆಯ್ಕೆಯಾದ ಅಭ್ಯರ್ಥಿಯನ್ನು ಎಐಸಿಟಿಇ ಚಟುವಟಿಕೆಗಳಿಂದ ಕೆಲವು ವರ್ಷಗಳ ಹಿಂದೆ ಡಿಬಾರ್ ಮಾಡಲಾಗಿದೆ ಎಂಬ ಅಂಶವು ಶೋಧನಾ ಸಮಿತಿಗೆ ತಿಳಿದಿರಲಿಲ್ಲ ಎಂದಿರುವ ಅವರು, ಶಾರ್ಟ್‌ಲಿಸ್ಟ್ ಮಾಡಲಾದ ಅಭ್ಯರ್ಥಿಗಳಲ್ಲಿ ಒಬ್ಬರನ್ನು ಕೌನ್ಸಿಲ್ ಚಟುವಟಿಕೆಗಳಿಂದ ಡಿಬಾರ್ ಮಾಡಲಾಗಿರುವ ಮತ್ತು ಇನ್ಮುಂದೆ ಯಾವುದೇ ಕಮಿಟಿಗಳಲ್ಲಿರದಂತೆ ಹೇಳಿರುವ ಎಐಸಿಟಿಇಯ ಅಧಿಕೃತ ಪತ್ರವನ್ನು ಹಂಚಿಕೊಂಡಿದ್ದಾರೆ.
'ರಾಜ್ಯಪಾಲರು ಹೊಸ ವಿಸಿ ಹೆಸರನ್ನು ಇನ್ನೂ ಘೋಷಿಸದಿದ್ದರೂ, 78 ಅರ್ಜಿದಾರರ ಪಟ್ಟಿಯಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಕಳಂಕಿತ ಅಭ್ಯರ್ಥಿಗಳನ್ನು ಶೋಧನಾ ಸಮಿತಿಯು ಕೈಬಿಡಬೇಕಿತ್ತು' ಎಂದು ರಾಜ್ಯದ ಶಿಕ್ಷಣ ತಜ್ಞರ ವಿಭಾಗ ಅಭಿಪ್ರಾಯಪಟ್ಟಿದೆ.
ರಾಜ್ಯದ ವಿವಿಧ ಭಾಗಗಳಲ್ಲಿ ಹಲವು ಪ್ರಮುಖ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಲ್ಲಿ ನಿರತರಾಗಿರುವ ರಾಜ್ಯಪಾಲರು ಸೆಪ್ಟೆಂಬರ್ 28 ರಂದು ನೂತನ ವಿಸಿ ಹೆಸರನ್ನು ಘೋಷಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.