ಬೆಂಗಳೂರು: ಸಿಸಿಬಿ ಎಸಿಪಿ ಹೆಸರಲ್ಲಿ ಸ್ಪಾಗಳಿಂದ ಹಣ ಸುಲಿಗೆ ಮಾಡುತ್ತಿದ್ದ ಅಗ್ನಿಶಾಮಕ ಸಿಬ್ಬಂದಿ ಬಂಧನ

ಸಿಸಿಬಿ ಎಸಿಪಿ ರಿನಾ ಸುವರ್ಣ ಹೆಸರಲ್ಲಿ ಸ್ಪಾ ಗಳಿಂದ ಹಣ ಸುಲಿಗೆ ಮಾಡಿದ್ದ ಬೆಳಗಾವಿಯ ಅಥಣಿ ತಾಲೂಕಿನ ಅಗ್ನಿಶಾಮಕ ದಳ ಸಿಬ್ಬಂದಿ ಆನಂದ್​ ಎಂಬಾತನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಿಸಿಬಿ ಎಸಿಪಿ ರಿನಾ ಸುವರ್ಣ ಹೆಸರಲ್ಲಿ ಸ್ಪಾ ಗಳಿಂದ ಹಣ ಸುಲಿಗೆ ಮಾಡಿದ್ದ ಬೆಳಗಾವಿಯ ಅಥಣಿ ತಾಲೂಕಿನ ಅಗ್ನಿಶಾಮಕ ದಳ ಸಿಬ್ಬಂದಿ ಆನಂದ್​ ಎಂಬಾತನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಪೀಣ್ಯ ನಿವಾಸಿ ಆರ್.ಆನಂದ್ ಎಸಿಪಿ ರೀನಾ ಸುವರ್ಣ ಅವರ ಆಪ್ತ ಸಹಾಯಕ ಎಂದು ಹೇಳಿಕೊಂಡಿದ್ದಾರೆ. ‘ಮಾಸಿಕ ಮಾಮೂಲು’ ಎಂದು ಎರಡು ಸ್ಪಾಗಳಿಂದ  ತಲಾ 20 ಸಾವಿರ ರೂಪಾಯಿ ಪಡೆದಿದ್ದಾರೆ, ಪ್ರತಿ ತಿಂಗಳು ಹಣ ನೀಡಬೇಕು ಒಂದು ವೇಳೆ ವಿಫಲವಾದರೆ ಸಿಸಿಬಿ ದಾಳಿ ನಡೆಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಸುಳ್ಳು ಪ್ರಕರಣಗಳನ್ನು ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದ.

ಎಸಿಪಿ ಸೂಚನೆ ಮೇರೆಗೆ  ಹಣ ವಸೂಲಿ ಮಾಡುತ್ತಿದ್ದಾಗಿ ತಿಳಿಸಿದ ಆತ ತನ್ನ ಸಂಪರ್ಕ ವಿವರಗಳನ್ನು ಸಹ ಅವರಿಗೆ ಕೊಟ್ಟು ಹೋಗಿದ್ದ. ಸ್ಪಾ ಮಾಲೀಕರೊಬ್ಬರು ಕೊಡಿಗೇಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.

ಆಗಸ್ಟ್ 10 ರಂದು ಮಧ್ಯಾಹ್ನ ಸಹಕಾರನಗರದ ಕೊಡಿಗೇಹಳ್ಳಿ ಮುಖ್ಯರಸ್ತೆಯಲ್ಲಿರುವ ಸ್ಪಾವೊಂದರ ವ್ಯವಸ್ಥಾಪಕರನ್ನು ಭೇಟಿಯಾದ ಅಗ್ನಿಶಾಮಕ ಸಿಬ್ಬಂದಿ, ತಾನು ಎಸಿಪಿಯ ಆಪ್ತ ಸಹಾಯಕ ಎಂದು ಹೇಳಿಕೊಂಡಿದ್ದ. ಮ್ಯಾನೇಜರ್ ಬಳಿ 25 ಸಾವಿರ ಹಣ ನೀಡುವಂತೆ ಒತ್ತಾಯಿಸಿ 20 ಸಾವಿರ ಹಣ ವಸೂಲಿ ಮಾಡಿ ಅಲ್ಲಿಂದ ತೆರಳಿದ್ದಾನೆ.

ಆದರೆ, ಸ್ಪಾ ಮಾಲೀಕರು ಸುಮಾರು ಒಂದು ತಿಂಗಳ ನಂತರ ಸೆಪ್ಟೆಂಬರ್ 19 ರಂದು ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ವಿದ್ಯಾರಣ್ಯಪುರದ ಸ್ಪಾವೊಂದರಿಂದಲೂ ಹಣ ಸುಲಿಗೆ ಮಾಡಿದ್ದ. ಆತ ಎರಡನೇ ಬಾರಿ ಸ್ಪಾವನ್ನು ಸಂಪರ್ಕಿಸಿ, ಹಣಕ್ಕೆ ಬೇಡಿಕೆಯಿಟ್ಟಾಗ, ಮ್ಯಾನೇಜರ್ ದೂರು ದಾಖಲಿಸಿದ್ದಾರೆ.

ಈ ಹಿಂದೆ ಹಲವು ಕಡೆ ಇದೇ ರೀತಿ ಮಾಡಿರೋದಾಗಿ ಬೆಳಕಿಗೆ ಬಂದಿದ್ದು,  ಮೊದಲು ಪೀಣ್ಯಾ ಅಗ್ನಿಶಾಮಕದಳ ಸಿಬ್ಬಂದಿ ಯಾಗಿದ್ದ ಆನಂದ, ನಂತರ ಇದೇ ರೀತಿ ದಂಧೆ ಮಾಡಿ ಸಸ್ಪೆಂಡ್ ಆಗಿದ್ದ. ಕಳೆದ ಕೆಲವು ತಿಂಗಳುಗಳ ಹಿಂದೆ ಅಥಣಿ ಯಲ್ಲಿ ಅಗ್ನಿಶಾಮಕದಳ ಸಿಬ್ಬಂದಿಯಾಗಿ ಪೋಸ್ಟಿಂಗ್ ಮಾಡಲಾಗಿತ್ತು.  ನಾಲ್ಕು ತಿಂಗಳ ಹಿಂದೆ ಆಸ್ಪತ್ರೆಯಲ್ಲಿ ಬೇಡಿಕೆಯಿಟ್ಟಿದ್ದ ಆನಂದ, ಆಸ್ಪತ್ರೆಯಲ್ಲಿ ಓಡಾಟ ನಡೆಸಿರುವ ಎಕ್ಸ್ಕ್ಲೂಸಿವ್ ಸಿಸಿಟಿವಿ ದೃಶ್ಯ ಕೂಡ ಲಭ್ಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com