ನಡೆದಾಡುವ ದೇವರು ಶಿವಕುಮಾರ ಸ್ವಾಮೀಜಿ ಜನ್ಮದಿನೋತ್ಸವ: 116 ಮಕ್ಕಳಿಗೆ ಸ್ವಾಮೀಜಿ ಹೆಸರು ನಾಮಕರಣ

ನಡೆದಾಡುವ ದೇವರು ತ್ರಿವಿಧ ದಾಸೋಹಿ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರ 116ನೇ ಜಯಂತಿ ಹಿನ್ನೆಲೆ ಶ್ರೀ ಮಠದಲ್ಲಿ ಪ್ರಾತಃ ಕಾಲದಿಂದಲೇ ಪೂಜಾ ಕೈಂಕರ್ಯಗಳು ಆರಂಭವಾಗಿವೆ.
ಶಿವಕುಮಾರ ಸ್ವಾಮೀಜಿ
ಶಿವಕುಮಾರ ಸ್ವಾಮೀಜಿ

ತುಮಕೂರು: ನಡೆದಾಡುವ ದೇವರು ತ್ರಿವಿಧ ದಾಸೋಹಿ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರ 116ನೇ ಜಯಂತಿ ಹಿನ್ನೆಲೆ ಶ್ರೀ ಮಠದಲ್ಲಿ ಪ್ರಾತಃ ಕಾಲದಿಂದಲೇ ಪೂಜಾ ಕೈಂಕರ್ಯಗಳು ಆರಂಭವಾಗಿವೆ.

ಜನ್ಮದಿನ ಹಿನ್ನೆಲೆಯಲ್ಲಿ ಶ್ರೀಗಳ ಗದ್ದುಗೆಗೆ ದೀಪಾಲಂಕಾರ, ಪುಷ್ಪಗಳಿಂದ ಅಲಂಕಾರ ಮಾಡಲಾಗಿದ್ದು, ಸಿದ್ದಲಿಂಗಾಶ್ರೀ ಸೇರಿದಂತೆ ವಿವಿಧ ಮಠಾಧೀಶರು ಶಿವಕುಮಾರ ಶ್ರೀಗಳ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ ನೆರವೇರಿಸಿದ್ದಾರೆ. ಮಠದಲ್ಲಿಂದು ವಿಶೇಷ ಕಾರ್ಯಕ್ರಮಗಳು ನಡೆಯಲಿದ್ದು, ಲಕ್ಷಾಂತರ ಭಕ್ತರು ಭಾಗವಹಿಸುತ್ತಿದ್ದಾರೆ.

ಬೆಳಿಗ್ಗೆ 11 ಗಂಟೆಗೆ ಗೋಸಲಸಿದ್ದೇಶ್ವರ ವೇದಿಕೆಯಲ್ಲಿ ಅದ್ದೂರಿ ಸಭಾ ಕಾರ್ಯಕ್ರಮ ನಡೆಯಲಿದ್ದು, ನೀತಿ ಸಂಹಿತೆ ಜಾರಿ ಇರುವ ಹಿನ್ನೆಲೆಯಲ್ಲಿ ರಾಜಕಾರಣಿಗಳು, ಜನಪ್ರತಿನಿಧಿಗಳು ಈ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ ಎಂದು ತಿಳಿದುಬಂದಿದೆ. ಆದರೆ, ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಪ್ರಭಾಕರ್ ಕೋರೆ ಸೇರಿದಂತೆ ವಿವಿಧ ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ.

ಶ್ರೀಗಳ 116ನೇ ಜಯಂತ್ಯೋತ್ಸವದ ಪ್ರಯುಕ್ತ ಒಟ್ಟು 116 ಮಕ್ಕಳಿಗೆ ಶಿವಕುಮಾರ ಶ್ರೀಗಳ ಹೆಸರನ್ನು ನಾಮಕರಣ ಮಾಡುವ ಸಲುವಾಗಿ ಈಗಾಗಲೇ ಪೋಷಕರು ಹೆಸರನ್ನ ನೊಂದಾಯಿಸಿಕೊಂಡಿದ್ದು, ಮಠದಲ್ಲಿ ನಾಮಕರಣ ಕಾರ್ಯಕ್ರಮ ಕೂಡ ನಡೆಯಲಿದೆ.

ಕನ್ನಡದಲ್ಲಿ ಟ್ವೀಟ್​ ಮಾಡಿ ಶ್ರೀಗಳ ಸ್ಮರಿಸಿದ ಪ್ರಧಾನಿ ಮೋದಿ
ಶ್ರೀ ಶಿವಕುಮಾರ ಸ್ವಾಮೀಜಿಗಳ ಜನ್ಮದಿನ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕನ್ನಡದಲ್ಲೇ ಟ್ವೀಟ್ ಮಾಡಿ ಶ್ರೀಗಳನ್ನು ಸ್ಮರಿಸಿದ್ದಾರೆ.

ತುಮಕೂರು ಭೇಟಿ ವೇಳೆಯ ಭಾಷಣದ ತುಣಕ್ಕೊಂದು ಮೋದಿಯವರು ಹಂಚಿಕೊಂಡಿದ್ದು, ಅದರಲ್ಲಿ ಸಿದ್ದಗಂಗಾ ಶ್ರೀಗಳು ಗುಜರಾತ್​ನ ನರೇಂದ್ರ ಮೋದಿಯವರ ಮನೆಗೆ ಭೇಟಿ ನೀಡಿ ತುಮಕೂರಿಗೆ ಬನ್ನಿ ಎಂದು ಆಹ್ವಾನ ನೀಡಿರುವುದನ್ನು ಉಲ್ಲೇಖಿಸಿದ್ದಾರೆ.

ಈ ಸಂದರ್ಭದಲ್ಲಿ ಮೋದಿಯವರು ಗುಜರಾತ್​ ಮುಖ್ಯಮಂತ್ರಿಯಾಗಿದ್ದರು. “ಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಹುಟ್ಟು ಹಬ್ಬದ ಈ ವಿಶೇಷ ಸಂದರ್ಭದಲ್ಲಿ ಅವರಿಗೆ ನನ್ನ ನಮನ. ಅವರು ಲಕ್ಷಾಂತರ ಜನರ ಮೇಲೆ ಅಪಾರ ಪ್ರಭಾವ ಬೀರಿದ್ದಾರೆ. ಸಮಾಜಸೇವೆಗೆ ಉನ್ನತ ಸ್ಥಾನ ಮತ್ತು ಜನರನ್ನು ಸಶಕ್ತಗೊಳಿಸುವುದಕ್ಕೆ ಅವರು ಪ್ರಾಮುಖ್ಯ ನೀಡಿದ್ದರು. ಅವರ ಕನಸುಗಳನ್ನು ಪೂರೈಸಲು ನಾವು ಸದಾ ಶ್ರಮಿಸುತ್ತೇವೆ.” ಎಂದು ಮೋದಿಯವರು ಟ್ವೀಟ್​ ಮಾಡಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಟ್ವೀಟ್ ಮಾಡಿ, ಶತಮಾನ ಕಂಡ ಶ್ರೇಷ್ಠ ಸಂತ, ತ್ರಿವಿಧ ದಾಸೋಹಿ ಸಿದ್ದಗಂಗೆಯ ಲಿಂಗೈಕ್ಯ ಪರಮಪೂಜ್ಯ ಡಾ:ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಜನ್ಮಸ್ಮರಣೆಯಂದು ಅವರಿಗೆ ಭಕ್ತಿಪೂರ್ವಕ ನಮನಗಳು. ಕಾಯಕ, ಶಿಕ್ಷಣ ಹಾಗೂ ದಾಸೋಹಕ್ಕೆ ಮಹತ್ವ ನೀಡಿ, ಸಮಾಜವನ್ನು ಪರಿವರ್ತಿಸುವ ಹಾದಿಯಲ್ಲಿ ಶ್ರೀಗಳು ರೂಪಿಸಿರುವ ಪರಂಪರೆ ಶತಶತಮಾನಗಳವರೆಗೆ ಮುಂದುವರೆಯಲಿ ಎಂದು ಹೇಳಿದ್ದಾರೆ.

ಕೇಂದ್ರ ಸಚಿವ ಅಮಿತ್ ಶಾ ಅವರೂ ಕೂಡ ಕನ್ನಡದಲ್ಲಿ ಟ್ವೀಟ್ ಮಾಡಿದ್ದು, ಸಿದ್ದಗಂಗಾ ಮಠದ ಲಿಂಗೈಕ್ಯ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಅವರ ಜಯಂತಿಯಂದು ಶಿರಬಾಗಿ ನಮಿಸುತ್ತೇನೆ. ನಡೆದಾಡುವ ದೇವರು ಸಮಾಜ ಸೇವೆಗಳ ಮೂಲಕ ಅಪಾರ ಜನರ ಜೀವನ ಪರಿವರ್ತನೆಗೊಳಿಸಿದ್ದಾರೆ. ಹಲವು ಸಂಸ್ಥೆಗಳ ಮೂಲಕ ನಿಸ್ವಾರ್ಥ ಸೇವೆಯ ಹೆಜ್ಜೆ ಗುರುತು ಬಿಟ್ಟು ಹೋಗಿದ್ದಾರೆ. ಅವರ ಕಾರ್ಯ ಮುಂದಿನ ಪೀಳಿಗೆಗಳಿಗೂ ಪ್ರೇರಣೆ ನೀಡಲಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com