ಎಸ್‌ಎಸ್‌ಎಲ್‌ಸಿ ಕನ್ನಡ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ
ಕಲಬುರಗಿಯಲ್ಲಿ ಶುಕ್ರವಾರ ಕನ್ನಡ ಭಾಷೆಯ ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ವದಂತಿಯನ್ನು ಜಿಲ್ಲಾಧಿಕಾರಿ ಯಶವಂತ ಗುರಕಾರ ತಳ್ಳಿಹಾಕಿದ್ದಾರೆ.
Published: 01st April 2023 12:52 PM | Last Updated: 01st April 2023 01:30 PM | A+A A-

ಸಂಗ್ರಹ ಚಿತ್ರ
ಕಲಬುರಗಿ: ಕಲಬುರಗಿಯಲ್ಲಿ ಶುಕ್ರವಾರ ಕನ್ನಡ ಭಾಷೆಯ ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ವದಂತಿಯನ್ನು ಜಿಲ್ಲಾಧಿಕಾರಿ ಯಶವಂತ ಗುರಕಾರ ತಳ್ಳಿಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೀಕ್ಷೆಯ ಸಮಯ ಮುಗಿಯುವ ವೇಳೆ ಮಧ್ಯಾಹ್ನ ಸುಮಾರು 12.30 ಕ್ಕೆ ನನ್ನ ವಾಟ್ಸಾಪ್'ಗೂ ಪ್ರಶ್ನೆ ಪತ್ರಿಕೆಯ ಫೋಟೋಕಾಪಿ ಬಂದಿತ್ತು. 1 ಗಂಟೆಗೂ ಮುನ್ನ ಉತ್ತರ ಪತ್ರಿಯೆ ನೀಡಿ ಕೊಠಡಿಯಿಂದ ಹೊರಬಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ. ಈ ರೀತಿ ಹೊರಬಂದ ಕೆಲ ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆಯ ಫೋಟೋವನ್ನು ತೆಗೆದು ವೈರಲ್ ಮಾಡಿರಬಹುದು. ಆದರೆ, ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬುದು ಸುಳ್ಳು ಎಂದು ಹೇಳಿದರು.
ಇದನ್ನೂ ಓದಿ: ಎಸ್ಎಸ್ಎಲ್'ಸಿ ಪರೀಕ್ಷೆಗೆ 8.14 ಲಕ್ಷ ವಿದ್ಯಾರ್ಥಿಗಳು ಹಾಜರು
ಈ ನಡುವೆ ಬೇರೊಬ್ಬ ವಿದ್ಯಾರ್ಥಿ ಹೆಸರಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿದ್ದ ನಕಲಿ ವಿದ್ಯಾರ್ಥಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ ಎಂದು ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಕ್ರೆಪ್ಪಗೌಡ ಬಿರಾದಾರ್ ಅವರು ತಿಳಿಸಿದ್ದಾರೆ.
ಕಲಬುರಗಿ ನಗರದ ವಿನಾಯಕ ಶಾಲೆ ಪರೀಕ್ಷಾ ಕೇಂದ್ರದಲ್ಲಿ ಮೂಲ ಅಭ್ಯರ್ಥಿ ಶಿವಕುಮಾರ್ ಪರವಾಗಿ ಕುಮಾರ ತಾರಾಸಿಂಗ್ ಎಂಬ ಬಾಲಕ ಪರೀಕ್ಷೆ ಬರೆಯುತ್ತಿದ್ದ. ಈ ವೇಳೆ ಡಿಡಿಪಿಐ ಸಕ್ರೆಪ್ಪಗೌಡ ಕೊಠಡಿಗೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ ವೇಳೆ ಅಕ್ರಮ ಬೆಳಕಿಗೆ ಬಂದಿತ್ತು. ಇದೀಗ ತಾರಾ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇದನ್ನು ಹೊರತುಪಡಿಸಿ ಇಡೀ ಜಿಲ್ಲೆಯಲ್ಲಿ ಪರೀಕ್ಷೆಗಳು ಶಾಂತಿಯುತವಾಗಿ ನಡೆದಿದೆ ಎಂದು ಸಕ್ರೆಪ್ಪಗೌಡ ಬಿರಾದಾರ್ ತಿಳಿಸಿದ್ದಾರೆ.