ನಿರ್ಭಯಾ ನಿಧಿ: ಸಾಮೂಹಿಕ ಅತ್ಯಾಚಾರಕ್ಕೊಳಗಾದ ಬಾಂಗ್ಲಾದೇಶದ ಮಹಿಳೆಗೆ ಸರ್ಕಾರದಿಂದ ಗರಿಷ್ಠ ಪರಿಹಾರ!

ಸಾಮೂಹಿಕ ಅತ್ಯಾಚಾರಕ್ಕೊಳಗಾದ ವಿದೇಶಿ ಮಹಿಳೆಯೊಬ್ಬರಿಗೆ ದೇಶದಲ್ಲಿ ಇದೇ ಮೊದಲ ಬಾರಿಗೆ ನಿರ್ಭಯಾ ನಿಧಿಯಡಿ ಗರಿಷ್ಠ ಮೊತ್ತದ ಪರಿಹಾರ ಹಣವನ್ನು ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಾಮೂಹಿಕ ಅತ್ಯಾಚಾರಕ್ಕೊಳಗಾದ ವಿದೇಶಿ ಮಹಿಳೆಯೊಬ್ಬರಿಗೆ ದೇಶದಲ್ಲಿ ಇದೇ ಮೊದಲ ಬಾರಿಗೆ ನಿರ್ಭಯಾ ನಿಧಿಯಡಿ ಗರಿಷ್ಠ ಮೊತ್ತದ ಪರಿಹಾರ ಹಣವನ್ನು ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

2021ರ ಮೇ ನಲ್ಲಿ ಬಾಂಗ್ಲಾದೇಶದ ಮಹಿಳೆಯರು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದರು. ಅಂತರಾಷ್ಟ್ರೀಯ ಮಾನವ ಕಳ್ಳಸಾಗಣೆ ಜಾಲದಲ್ಲಿ ಸಿಲುಕಿಕೊಂಡಿದ್ದ ಮಹಿಳೆ ಲೈಂಗಿಕ ಶೋಷಣೆ ಮತ್ತು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದರು. ಘಟನೆ ಬಳಿಕ ಕಳೆದ ವರ್ಷ ಮೇ ತಿಂಗಳಲ್ಲಿ ಮಹಿಳೆ ತನ್ನ ದೇಶಕ್ಕೆ ವಾಪಸ್ಸಾಗಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ವಿಚಾರಣಾ ನ್ಯಾಯಾಲಯವು ನಿರ್ಭಯಾ ನಿಧಿಯಡಿ ಪರಿಹಾರ ನೀಡುವಂತೆ ಸರ್ಕಾರಕ್ಕೆ ಸೂಚಿಸಿದೆ.

ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಮೇ 2022 ರ ತನ್ನ ಆದೇಶದಲ್ಲಿ, “ಅಪರಾಧದ ತೀವ್ರತೆಯನ್ನು ಅನುಸರಿಸಿ ಸಂತ್ರಸ್ತ ಮಹಿಳೆಯು NALSA (ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ) ಅಡಿಯಲ್ಲಿ 7,00,000 ರೂ.ಗಳ ಪರಿಹಾರಕ್ಕೆ ಅರ್ಹಳಾಗಿದ್ದಾಳೆ. ಸೆಕ್ಷನ್ 357A CrPC (ತಿದ್ದುಪಡಿ ಕಾಯಿದೆ 1973) ಅಡಿಯಲ್ಲಿ ಒದಗಿಸಲಾದ 'ಮಹಿಳಾ ಸಂತ್ರಸ್ತರಿಗೆ ಪರಿಹಾರ ಯೋಜನೆ'ಯಿಂದ ರಾಜ್ಯ ಸರ್ಕಾರವು ಸಂತ್ರಸ್ತ ಮಹಿಳೆಗೆ ರೂ 7,00,000 ಪರಿಹಾರವನ್ನು ಒದಗಿಸಬೇಕು. ಪರಿಹಾರ ಒದಗಿಸಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದೆ.

ಇದೇ ವೇಳೆ ಮಹಿಳೆಯ ಸುರಕ್ಷತೆಯ ಬಗ್ಗೆ ಗಮನಹರಿಸಿದ ನ್ಯಾಯಾಲಯವರು, ವೀಡಿಯೋ ಕಾನ್ಫರೆನ್ಸ್ ಮೂಲಕ ಸಂಸ್ತ್ರಸ್ತ್ರ ಮಹಿಳೆಯ ಉಪಸ್ಥಿತಿಯೊಂದಿಗೆ ಆಕೆಯ ಬ್ಯಾಂಕ್ ಖಾತೆಗೆ ಪರಿಹಾರ ಹಣವನ್ನು ಇ ಪಾವತಿ ಮಾಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶಿಸಿತು.

ಲಾಭ ರಹಿತ ಹಾಗೂ ಮಾನವ ಹಕ್ಕುಗಳ ಸಂಘಟನೆಯಾಗಿರುವ ತಲಾಶ್ ಅಸೋಸಿಯೇಷನ್ ​​ಸಂಸ್ಥಾಪಕ ಅಧ್ಯಕ್ಷೆ ಸೀಮಾ ದಿವಾನ್ ಅವರು ಮಾತನಾಡಿ, ಸಂತ್ರಸ್ತ ಮಹಿಳೆಯನ್ನು ಮರಳಿ ಆಕೆಯ ದೇಶಕ್ಕೆ ರವಾನಿಸಲು ಪೊಲೀಸರಿಗೆ ಸಹಾಯ ಮಾಡಲಾಯಿತು. ನಿರ್ಭಯಾ ನಿಧಿಯಡಿಯಲ್ಲಿ ಸಂತ್ರಸ್ತ ಮಹಿಳೆಗೆ ಪರಿಹಾರ ದೊರೆಯುವಂತೆ ಮಾಡಲಾಗಿದೆ. 2014-2019 ನಡುವೆ ನಗರದಲ್ಲಿ ಬೆಂಗಳೂರು ಗ್ರಾಮಾಂತರ, ಬೆಳಗಾವಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶ ಪ್ರಜೆಗಳ ಪತ್ತೆಗೆ ಪೊಲೀಸರಿಗೆ ನೆರವು ನೀಡಲಾಗಿತ್ತು ಎಂದು ಹೇಳಿದ್ದಾರೆ.

ಸಾಮೂಹಿಕ ಅತ್ಯಾಚಾರದಿಂದ ಬದುಕುಳಿದ ಮಹಿಳೆ ಪ್ರತಿಕ್ರಿಯೆ ನೀಡಿ, ನನ್ನ ಪತಿ ನನ್ನನ್ನು ದೂರಾಗಿಸಿದ ಬಳಿಕ ಆಘಾತಕ್ಕೊಳಗಾದೆ, ಇದೀಗ ಬಾಂಗ್ಲಾದೇಶದಲ್ಲಿರುವ ನನ್ನ ಹಳ್ಳಿ ಕಿಶೋರ್‌ಗುಂಜ್‌ನಲ್ಲಿ ಹೊಸ ಜೀವನವನ್ನು ಮರು ಕಟ್ಟಿಕೊಳ್ಳುತ್ತಿದ್ದೇನೆ. ಆರ್ಥಿಕವಾಗಿ ಮತ್ತು ಭಾವನಾತ್ಮಕವಾಗಿ ತುಂಬಾ ದುರ್ಬಲಳಾಗಿದ್ದೇನೆ. ಬೆಂಗಳೂರಿನ ಬ್ಯೂಟಿ ಪಾರ್ಲರ್ ನಲ್ಲಿ ತಿಂಗಳಿಗೆ ರೂ.40000 ಕೊಡಿಸುವುದಾಗಿ ಸ್ನೇಹಿತೆ ರಿಯಾ ಭರವಸೆ ನೀಡಿದ್ದಳು. ಗಡಿ ದಾಟಲು ಕೆಲವರು ಸಹಾಯ ಮಾಡುತ್ತಾರೆಂದು ರಿಯಾ ನನಗೆ ತಿಳಿಸಿದ್ದಳು. ರೂ.10,000 ನೀಡಿ ನಾನು ಗಡಿ ದಾಟಿದ್ದೆ. ಅಲ್ಲಿಂದ ಕೋಲ್ಕತಾ ತಲುಪಿದಾಗ ವ್ಯಕ್ತಿಯೊಬ್ಬರು ನನ್ನನ್ನು ಕರೆದುಕೊಂಡು ಹೋಗಿ ನನ್ನ ಭಾವಚಿತ್ರವಿರುವ ಆಧಾರ್ ಕಾರ್ಡ್ ಸಿದ್ಧಪಡಿಸಿ ನೀಡಿದರು. ಬಳಿಕ ವಿಮಾನದ ಮೂಲಕ ಬೆಂಗಳೂರು ತಲುಪಿದೆ. ಆದರೆ, ಅಲ್ಲಿಗೆ ಬಂದಾಗ ವೇಶ್ಯಾವಾಟಿಕೆಗೆ ಬಲವಂತ ಮಾಡಲಾಯಿತು ಎಂದು ಹೇಳಿದ್ದಾರೆ.

2021ರ ಮೇ ತಿಂಗಳಿನಲ್ಲಿ ರಾಮಮೂರ್ತಿ ನಗರದಲ್ಲಿನ ಬಾಡಿಗೆ ಫ್ಲಾಟ್‌ನಲ್ಲಿ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಪ್ರಕರಣ ಸಂಬಂಧ 12 ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು, ಅದೇ ವರ್ಷ ಜುಲೈನಲ್ಲಿ ಆರೋಪಪಟ್ಟಿ ಸಲ್ಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com