ಬೆಂಗಳೂರಿನ ಹೆಸರಘಟ್ಟದಲ್ಲಿ ಕೊಳವೆ ಬಾವಿ ಕಾರ್ಯ:, ವಾಣಿಜ್ಯ ಚಟುವಟಿಕೆಗೆ ದಾರಿ ಮಾಡಿಕೊಡುವ ಪ್ರಯತ್ನ ಎಂದು ಹೋರಾಟಗಾರರ ಕಳವಳ
ಜೀವ ವೈವಿಧ್ಯದಿಂದ ಕೂಡಿರುವ ಹೆಸರಘಟ್ಟದಲ್ಲಿ ಬೋರ್‌ವೆಲ್ ಕೊರೆಸುವ ಕೆಲಸವನ್ನು ಪಶುಸಂಗೋಪನಾ ಇಲಾಖೆ ಕೈಗೆತ್ತಿಕೊಂಡಿರುವುದಕ್ಕೆ ಪರಿಸರ ಸಂರಕ್ಷಣಾ ವಾದಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಇದು ಹುಲ್ಲುಗಾವಲನ್ನು ವಾಣಿಜ್ಯೀಕರಣಗೊಳಿಸುವುದಕ್ಕೆ ನಾಂದಿಯಾಗಿದೆ ಎಂದು ಹೇಳಿದ್ದಾರೆ.
Published: 08th April 2023 10:47 AM | Last Updated: 08th April 2023 04:36 PM | A+A A-

ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಜೀವ ವೈವಿಧ್ಯದಿಂದ ಕೂಡಿರುವ ಹೆಸರಘಟ್ಟದಲ್ಲಿ ಬೋರ್‌ವೆಲ್ ಕೊರೆಸುವ ಕೆಲಸವನ್ನು ಪಶುಸಂಗೋಪನಾ ಇಲಾಖೆ ಕೈಗೆತ್ತಿಕೊಂಡಿರುವುದಕ್ಕೆ ಪರಿಸರ ಸಂರಕ್ಷಣಾ ವಾದಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಇದು ಹುಲ್ಲುಗಾವಲನ್ನು ವಾಣಿಜ್ಯೀಕರಣಗೊಳಿಸುವುದಕ್ಕೆ ನಾಂದಿಯಾಗಿದೆ ಎಂದು ಹೇಳಿದ್ದಾರೆ.
ಸಸ್ಯ ಮತ್ತು ಪ್ರಾಣಿಗಳ ಸಮೃದ್ಧ ವೈವಿಧ್ಯತೆಯನ್ನು ಹೊಂದಿರುವ ಹುಲ್ಲುಗಾವಲನ್ನು ಸಂರಕ್ಷಣಾ ಮೀಸಲು ಪ್ರದೇಶ ಎಂದು ಘೋಷಿಸಬೇಕೆಂದು ವನ್ಯಜೀವಿ ಕಾರ್ಯಕರ್ತರು ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಿದ್ದಾರೆ.
ಇಲಾಖೆಗೆ ಸೇರಿದ 23 ಎಕರೆ ಜಾಗದಲ್ಲಿ ಪರಿಸರ ಸ್ನೇಹಿ ಗೋಶಾಲೆ ನಿರ್ಮಿಸಲು ರಾಜ್ಯ ಸರ್ಕಾರದ ಅನುಮೋದನೆ ಪಡೆದು ಕೊಳವೆಬಾವಿ ಕೊರೆಸಲಾಗುತ್ತಿದೆ. ಬೆಂಗಳೂರು ಮತ್ತು ಇತರ ಜಿಲ್ಲೆಗಳಿಂದ ದಿನನಿತ್ಯದ ಆಧಾರದ ಮೇಲೆ ಅವರಿಗೆ ಹಸ್ತಾಂತರಿಸಲ್ಪಟ್ಟ ಪರಿತ್ಯಕ್ತ ಮತ್ತು ರಕ್ಷಿಸಲ್ಪಟ್ಟ ಜಾನುವಾರುಗಳನ್ನು ಇರಿಸುವ ಗುರಿಯನ್ನು ಗೋಶಾಲೆ ಹೊಂದಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
'ವಾರಕ್ಕೆ ಸರಾಸರಿ 40-50 ಜಾನುವಾರುಗಳನ್ನು ಪಡೆಯುತ್ತೇವೆ ಮತ್ತು ಅವುಗಳನ್ನು ಇರಿಸಲು ನಮಗೆ ಸ್ಥಳವಿಲ್ಲ. ನಾವು ಖಾಸಗಿ ಆಶ್ರಯ ಮನೆಗಳಿಗೆ ಮನವಿ ಮಾಡುತ್ತಿದ್ದೇವೆ. ಆದರೆ, ಅದೂ ಕಷ್ಟವಾಗುತ್ತಿದೆ. ರಾಜ್ಯದಲ್ಲಿ 100 ಗೋಶಾಲೆಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಇದುವರೆಗೆ 33ನ್ನು ನಿರ್ಮಿಸಲಾಗಿದೆ. ಹೆಸರಘಟ್ಟ ಮತ್ತು ಆನೇಕಲ್‌ನಲ್ಲಿರುವವರನ್ನು ಎಲ್ಲೆಲ್ಲಿ ಇಲಾಖೆಯು ಜಮೀನು ಹೊಂದಿದೆಯೋ ಅಲ್ಲಲ್ಲಿ ಪಟ್ಟಿಯಲ್ಲಿ ಸೇರಿಸಲಾಗಿದೆ' ಎಂದು ಅಧಿಕಾರಿ ತಿಳಿಸಿದರು.
ಆದಾಗ್ಯೂ, ಪರಿಸರ ವಾದಿಗಳು ಮತ್ತು ಕಾರ್ಯಕರ್ತರು, 'ಇದು ಹುಲ್ಲುಗಾವಲನ್ನು ಸಂರಕ್ಷಿಸುವ ಬದಲು ಇತರ ಯೋಜನೆಗಳಿಗೆ ದಾರಿ ಮಾಡಿಕೊಡುವ ಪ್ರಯತ್ನದಂತೆ ತೋರುತ್ತಿದೆ. ಈ ಕಾರಣಕ್ಕಾಗಿಯೇ ರಾಜ್ಯ ವನ್ಯಜೀವಿ ಮಂಡಳಿ ಸಭೆಯಿಂದ ಎರಡು ಬಾರಿ ಪ್ರಸ್ತಾವನೆ ಕೈಬಿಡಲಾಗಿತ್ತು' ಎಂದಿದ್ದಾರೆ.
ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು, ಪರಿಸರ ಸಂರಕ್ಷಣಾಕಾರರು ಎತ್ತಿರುವ ಆಕ್ಷೇಪಗಳನ್ನು ಬೆಂಬಲಿಸಿದರು ಮತ್ತು ಇತರ ಜಾಗಗಳನ್ನು ರಚಿಸುವುದರಿಂದ ಸಂರಕ್ಷಣೆ ಕಷ್ಟಕರವಾಗುತ್ತದೆ. ಈ ಪ್ರದೇಶವನ್ನು ಸಂರಕ್ಷಣಾ ಮೀಸಲು ಪ್ರದೇಶ ಎಂದು ಘೋಷಿಸಲು ಪಶುಸಂಗೋಪನಾ ಇಲಾಖೆ ಒಲವು ತೋರಿದಾಗ ಪ್ರಸ್ತಾವನೆಯನ್ನೂ ತಮ್ಮ ಬಳಿ ಚರ್ಚಿಸಿಲ್ಲ ಎಂದು ಹೇಳಿದರು.
ನಾಗರಿಕರು, ಪಕ್ಷಿ ವಿಜ್ಞಾನಿಗಳು ಮತ್ತು ತಜ್ಞರು ನಡೆಸಿದ ಸಸ್ಯ ಮತ್ತು ಪ್ರಾಣಿಗಳ ಸಮೀಕ್ಷೆಯು ಈ ಪ್ರದೇಶವು ಶ್ರೀಮಂತ ಜೀವವೈವಿಧ್ಯತೆಯನ್ನು ಹೊಂದಿದೆ ಎಂದು ಬಹಿರಂಗಪಡಿಸಿದೆ. ಇದು ದೊಡ್ಡ ಪಕ್ಷಿ ಜನಸಂಖ್ಯೆ ಮತ್ತು ಸಣ್ಣ ಪ್ರಾಣಿಗಳಿಗೆ ನೆಲೆಯಾಗಿದೆ. ಹೀಗಾಗಿ, ಇದನ್ನು ಸಂರಕ್ಷಣಾ ಮೀಸಲು ವಲಯ ಎಂದು ಘೋಷಿಸಲು ಸೂಕ್ತವಾಗಿದೆ ಎಂದು ಸಂರಕ್ಷಣಾಕಾರರು ಹೇಳಿದ್ದಾರೆ.