ಪುನೀತ್ ಕೆರೆಹಳ್ಳಿ ವಿರುದ್ಧ ಮತ್ತೊಂದು ದೂರು, ಆರೋಪಿಗಳಿಗೆ 7 ದಿನ ಪೋಲಿಸ್ ಕಸ್ಟಡಿ

ಜಾನುವಾರು ಸಾಗಾಟ ವೇಳೆ ವ್ಯಕ್ತಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಪುನೀತ್ ಕೆರೆಹಳ್ಳಿ ವಿರುದ್ಧ ಮತ್ತೊಂದು ಹಲ್ಲೆ ಪ್ರಕರಣ ದಾಖಲಾಗಿದೆ.
ಪುನೀತ್ ಕೆರೆಹಳ್ಳಿ ಮತ್ತು ತಂಡ
ಪುನೀತ್ ಕೆರೆಹಳ್ಳಿ ಮತ್ತು ತಂಡ

ಬೆಂಗಳೂರು: ಜಾನುವಾರು ಸಾಗಾಟ ವೇಳೆ ವ್ಯಕ್ತಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಪುನೀತ್ ಕೆರೆಹಳ್ಳಿ ವಿರುದ್ಧ ಮತ್ತೊಂದು ಹಲ್ಲೆ ಪ್ರಕರಣ ದಾಖಲಾಗಿದೆ.

ಮಾರ್ಚ್ 20 ರಂದು ನಗರದ ಹೊರವಲಯದ ಹೊಸೂರು ರಸ್ತೆಯಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಅಲೀಮುಲ್ಲಾ ಬೇಗ್ ಎಂಬ 30 ವರ್ಷದ ಯುವಕನ ಮೇಲೆ ಪುನೀತ್ ಕೆರೆಹಳ್ಳಿ ಮತ್ತು ಇತರ ಮೂವರು ಸ್ಟನ್ ಗನ್ ನಿಂದ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿದ್ದರು. ಅಲೀಮುಲ್ಲಾ ಅವರ ದೂರಿನ ಆಧಾರದ ಮೇಲೆ, ಏಪ್ರಿಲ್ 6 ರಂದು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪುನೀತ್ ವಿರುದ್ಧ ಹಲ್ಲೆ, ಅಕ್ರಮ ತಡೆ ಮತ್ತು ಕ್ರಿಮಿನಲ್ ಬೆದರಿಕೆ ಸೇರಿದಂತೆ ಇತರ ಅಪರಾಧಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಎಫ್‌ಐಆರ್‌ನ ಪ್ರಕಾರ, ಅಲೀಮುಲ್ಲಾ ಅವರನ್ನು ತಮಿಳುನಾಡಿನ ಕೃಷ್ಣಗಿರಿಗೆ ದನಗಳನ್ನು ಸಾಗಿಸುವ ಕೆಲಸಕ್ಕೆ ನಿಯೋಜಿಸಲಾಗಿತ್ತು. ಅವರನ್ನು ಪುನೀತ್ ಕೆರೆಹಳ್ಳಿ ಮತ್ತು ಅವರ ಮೂವರು ಸಹಚರರಾದ ಸಂತೋಷ್, ಚೇತನ್ ಮತ್ತು ದೀಪಕ್ ಅವರು ನೈಸ್ ರಸ್ತೆಯಲ್ಲಿ ತಡೆದಿದ್ದಾರೆ. ಪುನೀತ್ ಮತ್ತು ಆತನ ಸಹಚರರು ವಾಹನದ ಚಾಲಕ ರಫೀಕ್ ಅವರನ್ನು ಮೊದಲು ಥಳಿಸಿದ್ದಾರೆ. ದನಗಳನ್ನು ಸಾಗಿಸುತ್ತಿದ್ದ ಕಾರಣ ಆತನನ್ನು ನಿಂದಿಸಿ ಹೊಡೆದಿದ್ದಾರೆ ಬಳಿಕ ವಿದ್ಯುತ್ ಶಾಕ್ ನೀಡಲು ಸ್ಟನ್ ಗನ್ ಅನ್ನು ಬಳಸಿದ್ದಾರೆ ಎಂದು ತಿಳಿಸಿದ್ದಾರೆ.

ಪೊಲೀಸ್ ಕಸ್ಟಡಿಗೆ
ಇನ್ನು ಇದ್ರೀಶ್ ಪಾಷಾ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪುನೀತ್ ಕೆರೆಹಳ್ಳಿ(Puneeth Kerehalli) ಸೇರಿದಂತೆ ಇತರೆ ನಾಲ್ಕು ಆರೋಪಿಗಳಿಗೆ 7 ದಿನಗಳ‌ ಕಾಲ ಪೋಲಿಸ್ ಕಸ್ಟಡಿಗೆ ನೀಡಿ ಕನಕಪುರ JMFC ನ್ಯಾಯಾಲಯ ಆದೇಶ ಹೊರಡಿಸಿದೆ. ಇದ್ರೀಶ್ ಪಾಷಾ ಅನುಮಾನಾಸ್ಪದ ಸಾವು ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಹಿಂದೂಪರ ಸಂಘಟನೆ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಮತ್ತು ನಾಲ್ವರು ಸಹಚರರನ್ನು ಇಂದು ಬೆಳಗ್ಗೆ ರಾಜಸ್ಥಾನದಿಂದ ರಾಮನಗರಕ್ಕೆ ಕರೆತಂದಿದ್ದು, ಬಳಿಕ ಪೊಲೀಸರು ಆರೋಪಿಗಳನ್ನು ಕನಕಪುರ ಜೆಎಂಎಫ್​ಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಹೆಚ್ಚಿನ‌ ವಿಚಾರಣೆಗೆ ಆರೋಪಿಗಳನ್ನು 7 ದಿನಗಳ‌ ಕಾಲ ಪೋಲಿಸ್ ಕಸ್ಟಡಿಗೆ ನೀಡಿ ನ್ಯಾಯಾಧೀಶರು ಆದೇಶಿಸಿದ್ದಾರೆ.

ಈ ಪ್ರಕರಣದ ಬಗ್ಗೆ ಇನ್ನಷ್ಟು ವಿಚಾರಣೆ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ತಮ್ಮ ಕಸ್ಟಡಿಗೆ ನೀಡಬೇಕೆಂದು ನ್ಯಾಯಾಲಕ್ಕೆ ಪೊಲೀಸರು ಮನವಿ ಮಾಡಿದ್ದರು. ಪೊಲೀಸ್ ಮನವಿ ಪುರಸ್ಕರಿಸಿದ ಕೋರ್ಟ್, ಆರೋಪಿಗಳನ್ನು ಏಳು ದಿನ ಪೊಲೀಸ್​ ಕಸ್ಟಡಿಗೆ ನೀಡಿ ಆದೇಶಿಸಿದೆ. ಇನ್ನು ಪುನೀತ್ ಕೆರಹಳ್ಳಿ ಪರವಾಗಿ ಬೆಂಗಳೂರು ಮೂಲದ ಇಬ್ಬರು ವಕೀಲರು ವಕಾಲತ್ತು ವಹಿಸಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com