ಕೆಎಂಎಫ್ ಖಾಸಗೀಕರಣಗೊಳಿಸಲು ಬಿಜೆಪಿ ಸರ್ಕಾರ ಹುನ್ನಾರ: ಡಿಕೆ ಸುರೇಶ್ ಗಂಭೀರ ಆರೋಪ

ಕೆಎಂಎಫ್ ಖಾಸಗೀಕರಣಗೊಳಿಸಲು ಬಿಜೆಪಿ ಸರ್ಕಾರದ ಹುನ್ನಾರ ನಡೆಸಿದೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್ ಗಂಭೀರ ಆರೋಪ ಮಾಡಿದ್ದಾರೆ.
ಡಿಕೆ ಸುರೇಶ್
ಡಿಕೆ ಸುರೇಶ್

ಬೆಂಗಳೂರು: ಕೆಎಂಎಫ್ ಖಾಸಗೀಕರಣಗೊಳಿಸಲು ಬಿಜೆಪಿ ಸರ್ಕಾರದ ಹುನ್ನಾರ ನಡೆಸಿದೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್ ಗಂಭೀರ ಆರೋಪ ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 'ಗುಜರಾತ್‍ನಿಂದ ಬರುವ ಆದೇಶದ ಮೇರೆಗೆ ಇಲ್ಲಿ ಆಡಳಿತ ನಡೆಸುವ ಬಿಜೆಪಿಯವರು ಕೆಎಂಎಫ್ ಸೇರಿದಂತೆ ನಾಡಿನ ಹೆಮ್ಮೆಯ ಸಂಸ್ಥೆಗಳನ್ನು ಮುಚ್ಚಿಸಲು ಹಲವು ರೀತಿಯ ಹುನ್ನಾರಗಳನ್ನು ನಡೆಸುತ್ತಿದ್ದಾರೆ. ನಾಡಿನ ರೈತರು ರಾಷ್ಟ್ರದಲ್ಲೇ ವಿಶಿಷ್ಠ ಗೌರವ ಸಂಪಾದಿಸಿದ್ದಾರೆ. ಇಲ್ಲಿ ಅತ್ಯುತ್ತಮ ಸಹಕಾರ ಹಾಗೂ ಬ್ಯಾಂಕಿಂಗ್ ವ್ಯವಸ್ಥೆ ಇದೆ. ದೇಶದಲ್ಲೇ ಹೆಚ್ಚು ಸ್ವತಂತ್ರ ಬ್ಯಾಂಕ್‍ಗಳು ರಾಜ್ಯದಲ್ಲೇ ಇದ್ದವು. ಕರ್ನಾಟಕ ಬ್ಯಾಂಕ್, ಕಾಪೋರೆಷನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್, ವಿಜಯಾ ಬ್ಯಾಂಕ್, ಎಸ್‍ಬಿಎಂ ಸೇರಿ ಅನೇಕ ಸಂಸ್ಥಗಳು ಲಾಭದಲ್ಲಿದ್ದವು. ಬ್ಯಾಂಕ್‍ಗಳ ವಿಲೀನ ಪ್ರಕ್ರಿಯೆ ಮೂಲಕ ಅವುಗಳನ್ನು ಮುಚ್ಚಿಸಲಾಗಿದೆ ಎಂದರು.

ಅಂತೆಯೇ ಈಗ ನಾವು ಸಿಂಡಿಕೇಟ್ ಬ್ಯಾಂಕ್ ಎಂದು ಕರೆಯುವಂತ್ತಿಲ್ಲ, ಕೆನರಾ ಎಂಬ ಹೆಮ್ಮೆಯ ಹೆಸರನ್ನು ನಮ್ಮ ರಾಜ್ಯದ ಬಿಜೆಪಿ ಸಂಸದರು ಬಿಟ್ಟುಕೊಟ್ಟರು. ಬೇರೆ ರಾಜ್ಯದ ಪ್ರಭಾವಿಗಳು ಛೀ.. ತೂ.. ಎಂದು ಹೇಳಿ ನಮ್ಮ ನಾಡಿನ ಅಸ್ಮಿತೆಯ ಹೆಸರನ್ನು ಕೀಳಾಗಿ ಕಂಡು ಬದಲಾವಣೆ ಮಾಡಿದರು. ಅವರ ಭಾಗದ ಹೆಸರನ್ನು ಬ್ಯಾಂಕ್‍ಗೆ ಇಟ್ಟುಕೊಂಡರು. ನಮ್ಮ ನಾಡಿನ ಬಿಜೆಪಿ ರಾಜಕಾರಣಿಗಳಿಗೆ ಇದು ಇನ್ನೂ ಅರ್ಥವಾಗಲಿಲ್ಲ ಎಂದು ಸುರೇಶ್ ಆಕ್ಷೇಪಿಸಿದರು.

ಅಲ್ಲದೆ ಸಹಕಾರ ಕ್ಷೇತ್ರದಲ್ಲಿ ಕರ್ನಾಟಕ ಅನೇಕ ಕೃಷಿ ಪತ್ತಿನ ಸಂಘಗಳನ್ನು ಹೊಂದಿದೆ. ಅದರ ಮೂಲಕ ಕೆಎಂಎಫ್ ಸ್ಥಾಪನೆಯಾಗಿದೆ. ಕೃಷಿ ಪತ್ತಿನ ಸಹಕಾರ ಸಂಘಗಳು ಗ್ರಾಮೀಣ ಭಾಗದಲ್ಲಿ ಆರ್ಥಿಕ ಕ್ರಾಂತಿಯನ್ನೇ ಮಾಡಿವೆ. ರಾಜ್ಯದಲ್ಲಿ 28 ಲಕ್ಷ ರೈತ ಕುಟುಂಬಗಳು ಹೈನುಗಾರಿಕೆಯನ್ನು ಅವಲಂಬಿಸಿವೆ. ಪ್ರತಿ ಸೊಸೈಟಿಯಲ್ಲಿ ನಾಲ್ಕು ಜನರಂತೆ 50 ಸಾವಿರಕ್ಕೂ ಹೆಚ್ಚು ಜನ ಹಾಲು ಒಕ್ಕೂಟವನ್ನ ಆಶ್ರಯಿಸಿದ್ದಾರೆ. ಚುನಾವಣೆ ಕಾಲದಲ್ಲಿ ಗುಜರಾತಿನ ರಾಜಕಾರಣಿಗಳು ಬಿಲ ತೋಡುವ ಮೂಲಕ ರಾಜ್ಯದ ಒಳಗೆ ನುಸಳುವ ಯತ್ನ ಮಾಡುತ್ತಿದ್ದಾರೆ. ಕನ್ನಡಿಗರ ಕೆಎಂಎಫ್ ಗುಜರಾತ್‍ಗಳಿಗೆ ಏನು ಅನ್ಯಾಯ ಮಾಡಿದೆ. ಅದನ್ನು ಹಾಳು ಮಾಡಲು ಏಕೆ ಹುನ್ನಾರ ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಖಾಸಗಿ ಸಂಸ್ಥೆಯ ಪೈಪೋಟಿಯ ಜೊತೆಗೆ ಸಹಕಾರದ ಮತ್ತೊಂದು ಸಹಕಾರ ಸಂಸ್ಥೆಯೇ ಸ್ಪರ್ಧೆ ಮಾಡಬೇಕಾ ಎಂಬ ಜಿಜ್ಞಾಸೆ ಈಗ ಎದುರಾಗಿದೆ. ನಮ್ಮ ಕೆಎಂಎಫ್ 160 ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದೆ. ಕೆಎಂಎಫ್‍ನಲ್ಲಿ ಹಾಲಿನ ಅಭಾವ ಇಲ್ಲ, ಆದರೂ ಗ್ರಾಹಕರಿಗೆ ಹಾಲು ದೊರೆಯದಂತೆ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ. ಇದಕ್ಕೆ ಸರ್ಕಾರವೇ ಕುಮ್ಮಕ್ಕು ನೀಡಿತ್ತು. ನಮ್ಮ ಹಾಲಿನ ದರ 38 ರೂಪಾಯಿ ಇದೆ. ಬೇರೆ ರಾಜ್ಯದ ಹಾಲಿನ ದರ 58 ರೂಪಾಯಿ ಇದೆ. ನಮ್ಮ ಹಾಲಿನ ಗುಣಮಟ್ಟದಲ್ಲಿ ಎಂದಿಗೂ ಕುಂದುಂಟಾಗಿಲ್ಲ. ಉತ್ಕೃಷ್ಟತೆ ಕಾಪಾಡಿಕೊಂಡು ಬರಲಾಗಿದೆ. ಗ್ರಾಹಕ ಹಿತದೃಷ್ಟಿಯಿಂದ ಕಡಿಮೆ ಬೆಲೆಗೂ ಮಾರಾಟ ಮಾಡುತ್ತಿದ್ದೇವೆ. ಕೆಎಂಎಫ್ ಹಾಲಿಗೆ ಕೃತಕ ಅಭಾವ ಸೃಷ್ಟಿಸಿ ಖಾಸಗಿ ಹಾಲಿಗೆ ಲಾಭ ಮಾಡಿಕೊಡಲಾಗಿದೆ ಎಂದು ಸುರೇಶ್ ಆರೋಪಿಸಿದರು.

ಕೇಂದ್ರ ಸಹಕಾರ ಸಚಿವರು ಕೆಎಂಎಫ್ ಮೇಲೆ ಕಣ್ಣು ಹಾಕಿದ ಬಳಿಕ ರಾಜ್ಯ ಸರ್ಕಾರವೂ ರೈತರ ಸಂಸ್ಥೆಯನ್ನು ಮಲತಾಯಿ ಧೋರಣೆಯಿಂದ ನೊಡಲಾರಂಭಿಸಿದೆ. ಗುಜರಾತಿನ ರಾಜಕಾರಣಿಗಳು ಎಲ್ಲವನ್ನೂ ವ್ಯಾಪಾರಿ ಮನೋಭಾವದಿಂದಲೇ ನೋಡುತ್ತಾರೆ. ರಾಜಕಾರಣದಲ್ಲೂ ಅವರು ವ್ಯಾಪಾರ ಮಾಡುತ್ತಿದ್ದಾರೆ. ಆದರೆ ಕನ್ನಡಿಗರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ಕೆಎಂಎಫ್ ನಿಮಗೆ ಏನು ಅನ್ಯಾಯ ಮಾಡಿದೆ ಎಂದು ಮತ್ತೊಮ್ಮೆ ಪ್ರಶ್ನಿಸಿದರು.

ಮುಂದಿನ ದಿನಗಳಲ್ಲಿ ಆತ್ಮಹತ್ಯೆಗಳು ಹೆಚ್ಚಾದರೆ, ಹಾಲಿನ ಉತ್ಪಾದನೆ ಕಡಿಮೆಯಾದರೆ ಅದಕ್ಕೆ ಬಿಜೆಪಿ ಸರ್ಕಾರವೇ ನೇರ ಹೊಣೆ. ಬಿಜೆಪಿಯವರಿಂದಲೇ ಗೊಂದಲ ಸೃಷ್ಟಿಯಾಗುತ್ತಿದೆ. ನಾಡಿನ ವಿಮಾನ ನಿಲ್ದಾಣ, ಬಂದರು, ಹೆದ್ಧಾರಿ ಸೇರಿ ಹಲವು ಸ್ವತ್ತುಗಳನ್ನು ಮಾರಾಟ ಮಾಡಲಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಜೀವ ವಿಮಾ ನಿಗಮವನ್ನೂ ಮಾರಾಟ ಮಾಡುವ ಹುನ್ನಾರ ನಡೆದಿದೆ. ಈಗ ಕೆಎಂಎಫ್ ಅನ್ನು ಖಾಸಗೀಕರಣಗೊಳಿಸುವ ಯತ್ನ ನಡೆಸಲಾಗುತ್ತಿದೆ ಎಂದು ಆರೋಪಿಸಿದರು. ಪತ್ರಿಕಾಗೋಷ್ಟಿಯಲ್ಲಿ ನಂದಿನಿ ಲಸ್ಸಿಯನ್ನು ಕುಡಿದು ಸಂಸದರು ಬೆಂಬಲ ವ್ಯಕ್ತಪಡಿಸಿದರು. ಹೆಚ್ಚು ಜಿಎಸ್‍ಟಿ ಸಂಗ್ರಹ ಮಾಡಿಕೊಡಲು ಕೇಂದ್ರದ ನಾಯಕರಿಗೆ ಕರ್ನಾಟಕ ಬೇಕು.ಬರ, ನೆರೆ, ಕೋವಿಡ್ ಸಂದರ್ಭದಲ್ಲಿ ಬರದ ರಾಷ್ಟ್ರೀಯ ನಾಯಕರ್ಯಾರು ರಾಜ್ಯಕ್ಕೆ ಬರಲಿಲ್ಲ, ಜನರಿಗೆ ನೆರವು ನೀಡಲಿಲ್ಲ. ಚುನಾವಣೆ ಸಮಯದಲ್ಲಿ ರಾಜ್ಯಕ್ಕೆ ಸರಣಿ ಪ್ರವಾಸಗಳನ್ನು ಕೈಗೊಳ್ಳುತ್ತಿದ್ದಾರೆ. ಈ ಕುರಿತು ಕನ್ನಡಿಗರು ಎಚ್ಚೆತ್ತುಕೊಳ್ಳಬೇಕು ಎಂದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com