ಮೃತಪಟ್ಟಿರುವುದಾಗಿ ಘೋಷಿಸಲಾಗಿದ್ದ ಚುನಾವಣಾಧಿಕಾರಿ ಶವಾಗಾರದಲ್ಲಿ ಜೀವಂತವಾಗಿ ಪತ್ತೆ!
ಮೃತಪಟ್ಟಿದ್ದಾರೆ ಎಂದು ಘೋಷಿಸಲಾದ ಚುನಾವಣಾಧಿಕಾರಿಯೊಬ್ಬರು ಮಂಗಳವಾರ ಆಸ್ಪತ್ರೆಯ ಶವಾಗಾರದಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾರೆ. ಕೂಡಲೇ ಅವರನ್ನು ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Published: 19th April 2023 11:06 AM | Last Updated: 19th April 2023 03:21 PM | A+A A-

ಪ್ರಾತಿನಿಧಿಕ ಚಿತ್ರ
ಮೈಸೂರು: ಮೃತಪಟ್ಟಿದ್ದಾರೆ ಎಂದು ಘೋಷಿಸಲಾದ ಚುನಾವಣಾಧಿಕಾರಿಯೊಬ್ಬರು ಮಂಗಳವಾರ ಆಸ್ಪತ್ರೆಯ ಶವಾಗಾರದಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾರೆ. ಕೂಡಲೇ ಅವರನ್ನು ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಅಧಿಕಾರಿ ಜಗದೀಶ್ ಅವರು ವಿವೇಕಾನಂದ ಶಾಲೆಯಲ್ಲಿ ಚುನಾವಣಾ ತರಬೇತಿ ಕಾರ್ಯಕ್ರಮಕ್ಕೆ ಹಾಜರಾಗಿ ಬೆಳಗ್ಗೆ 10 ಗಂಟೆ ಸುಮಾರಿಗೆ ಮೆಟ್ಟಿಲು ಹತ್ತುತ್ತಿದ್ದಾಗ ಆಯತಪ್ಪಿ ಬಿದ್ದಿದ್ದಾರೆ. ತಲೆಗೆ ಗಾಯವಾಗಿದ್ದರಿಂದ ಪ್ರಜ್ಞೆ ತಪ್ಪಿದ್ದರು. ಚುನಾವಣಾ ಕರ್ತವ್ಯದಲ್ಲಿದ್ದ ಇತರ ಅಧಿಕಾರಿಗಳು ತಕ್ಷಣ ಅವರನ್ನು ಸಮೀಪದ ಹೋಲಿ ಕ್ರಾಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಅವರನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ವಿಷಯ ತಿಳಿದ ಚಾಮರಾಜನಗರ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಆಸ್ಪತ್ರೆಗೆ ಆಗಮಿಸಿ ಸಿಬ್ಬಂದಿಯಿಂದ ವಿವರ ಪಡೆದಿದ್ದಾರೆ.
ಮಧ್ಯಾಹ್ನದ ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಜಗದೀಶ್ ಅವರನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಈ ವೇಳೆ ಅವರ ತಾಯಿ ಆತನ ಕೈಯನ್ನು ಮುಟ್ಟಿದಾಗ ಜಗದೀಶ್ ಅವರು ಕೈಕಾಲುಗಳನ್ನು ಅಲುಗಾಡಿಸುತ್ತಿರುವುದನ್ನು ನೋಡಿದ್ದಾರೆ. ಕೂಡಲೇ ವೈದ್ಯರಿಗೆ ಮಾಹಿತಿ ನೀಡಿದ್ದಾರೆ.
ತಾಲೂಕು ಪ್ರಭಾರಿ ವೈದ್ಯಾಧಿಕಾರಿ ಡಾ. ಪ್ರಕಾಶ್ ಪರೀಕ್ಷೆ ನಡೆಸಿ ಜಗದೀಶ್ ಜೀವಂತವಾಗಿರುವುದು ಪತ್ತೆಯಾಗಿದೆ. ಕೂಡಲೇ ಅವರನ್ನು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಗದೀಶ್ ಬಿದ್ದು ತಲೆಗೆ ಗಾಯ ಮಾಡಿಕೊಂಡಿದ್ದು, ಮಧ್ಯಾಹ್ನದವರೆಗೂ ಪ್ರಜ್ಞೆ ಬಂದಿರಲಿಲ್ಲ. ಶವಾಗಾರಕ್ಕೆ ಸ್ಥಳಾಂತರಿಸಿದಾಗ, ಅವರು ಜೀವಂತವಾಗಿರುವುದು ಕಂಡುಬಂದಿತು ಮತ್ತು ತಕ್ಷಣವೇ ಅಪೋಲೋ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ಡಾ.ಪ್ರಕಾಶ್ ಸುದ್ದಿಗಾರರಿಗೆ ತಿಳಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ತಹಶೀಲ್ದಾರ್ ಗುರುಪ್ರಸಾದ್, ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.