ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಟೆಕ್ಕಿ ಮೇಲೆ ಹಲ್ಲೆ ನಡೆಸಿದ ಟಿಕೆಟ್ ಪರೀಕ್ಷಕ ಅಧಿಕಾರಿ

ಮಹಿಳಾ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ ಕಾರಣಕ್ಕಾಗಿ ಬೆಂಗಳೂರು ರೈಲ್ವೆ ವಿಭಾಗದ ಹಿರಿಯ ರೈಲ್ವೆ ಟೆಕೆಟ್ ಪರೀಕ್ಷಕನನ್ನು ಸೇವೆಯಿಂದ ವಜಾಗೊಳಿಸಿರುವ ಬೆನ್ನಲ್ಲೇ, ಐಟಿ ವೃತ್ತಿಪರರನ್ನು ಅವಮಾನಿಸಿದ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಮಹಿಳಾ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ ಕಾರಣಕ್ಕಾಗಿ ಬೆಂಗಳೂರು ರೈಲ್ವೆ ವಿಭಾಗದ ಹಿರಿಯ ರೈಲ್ವೆ ಟೆಕೆಟ್ ಪರೀಕ್ಷಕನನ್ನು ಸೇವೆಯಿಂದ ವಜಾಗೊಳಿಸಿರುವ ಬೆನ್ನಲ್ಲೇ, ಐಟಿ ವೃತ್ತಿಪರರನ್ನು ಅವಮಾನಿಸಿದ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

ಏಪ್ರಿಲ್ 18ರಂದು ಹಿರಿಯ ಟಿಕೆಟಿಂಗ್ ಅಧಿಕಾರಿಯೊಬ್ಬರು ತನ್ನ ಕಾಲರ್‌ ಹಿಡಿದು ಎಳೆದು ತಂದಿದ್ದಾರೆ, ಕನ್ನಡಕವನ್ನು ಕಿತ್ತೆಸೆದಿದ್ದಾರೆ ಮತ್ತು ನಿಂದಿಸಿದ್ದಾರೆ ಎಂದು ಟೆಕ್ಕಿ ಹೇಳಿದ್ದಾರೆ. ಘಟನೆಯು ಕೆಎಸ್‌ಆರ್ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ 1 ರಲ್ಲಿ ಬೆಳಿಗ್ಗೆ 9.15ಕ್ಕೆ ಸಂಭವಿಸಿದೆ.

ಕೆಎಸ್‌ಆರ್ ಮತ್ತು ವೈಟ್‌ಫೀಲ್ಡ್ ನಡುವೆ ನಿತ್ಯ ಪ್ರಯಾಣಿಸುವ ಕಾರ್ತಿಕ್ ಪೂಜಾರ್ ಅವರ ಫೋನ್‌ನಲ್ಲಿ ಯುಟಿಎಸ್ ಅಪ್ಲಿಕೇಶನ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದರಿಂದ ಸಮಸ್ಯೆ ಉದ್ಭವಿಸಿದೆ. ಮುಖ್ಯ ಟಿಕೆಟಿಂಗ್ ಮೇಲ್ವಿಚಾರಕ ಬಿಎಂ ರಾಧಾಕೃಷ್ಣನ್ ಅವರು ಪ್ರಯಾಣದ ಟಿಕೆಟ್ ಅನ್ನು ನೀಡುವಂತೆ ಕೇಳಿದ್ದಾರೆ. 

ಈ ವೇಳೆ ಪೂಜಾರ್, 'ನಾನು ಸಿಟಿ ರೈಲ್ವೆ ನಿಲ್ದಾಣದ ಮೆಟ್ರೋ ನಿಲ್ದಾಣದಲ್ಲಿ ಇಳಿದೆ ಮತ್ತು ವೈಟ್‌ಫೀಲ್ಡ್‌ಗೆ ರೈಲು ಹತ್ತಲು ಹೋಗುತ್ತಿದ್ದೆ. ಟಿಕೆಟ್ ಪರೀಕ್ಷಕರು ನನ್ನನ್ನು ಟಿಕೆಟ್ ಕೇಳಿದರು. ಆಗ ನಾನು ಯುಟಿಎಸ್ ಅಪ್ಲಿಕೇಶನ್ ಅನ್ನು ತೆರೆದೆ. ಆದರೆ, ಇಂಟರ್ನೆಟ್ ಸಂಪರ್ಕದ ಸಮಸ್ಯೆಯಿಂದಾಗಿ ಅದನ್ನು ತೆರೆಯಲು ಸಾಧ್ಯವಾಗಲಿಲ್ಲ. ನಾನು ಇದನ್ನು ವಿವರಿಸಲು ಪ್ರಯತ್ನಿಸಿದರೂ, ದಂಡ ಪಾವತಿಸಿ ಹೊರಡುವಂತೆ ಅವರು ನನ್ನನ್ನು ಕೇಳಿದರು. ಅಧಿಕಾರಿ ನನ್ನನ್ನು ಏಕವಚನದಲ್ಲಿ ಸಂಬೋಧಿಸುತ್ತಿದ್ದರು ಮತ್ತು ತುಂಬಾ ಅಸಭ್ಯವಾಗಿ ಮಾತನಾಡಿದರು' ಎಂದು ದೂರಿದ್ದಾರೆ.

ಸಾಮಾನ್ಯ ಸೀಸನ್ ಟಿಕೆಟ್ ಹೊಂದಿದ್ದ ಪೂಜಾರ್ ಅವರು ಟಿಕೆಟ್ ಚೆಕ್ಕರ್‌ನಲ್ಲಿ ತೆಗೆದ ಸ್ಕ್ರೀನ್‌ಶಾಟ್ ಅನ್ನು ತೋರಿಸಿದ್ದಾರೆ. 'ರೈಲು ಹೊರಡಲಿದೆ ಎಂದು ಹೇಳಿದರೂ ಕೂಡ, ಅವರು ನನ್ನನ್ನು ಹಿಡಿದುಕೊಂಡರು ಮತ್ತು ನಾನು ಹೋಗಲು ಸಾಧ್ಯವಾಗಲಿಲ್ಲ. ನನಗೆ ಓಡಿಹೋಗುವ ಯೋಜನೆಯೇ ಇರಲಿಲ್ಲ. ಟಿಕೆಟ್ ಪರೀಕ್ಷಿಸುವವರು ಟಿಕೆಟ್ ಕೇಳಿದಾಗ ನೀಡಬೇಕು ಮತ್ತು ಅಲ್ಲಿಂದ ಹೊರಡಬಾರದು ಎಂದು ನನಗೆ ತಿಳಿದಿದೆ. ನಂತರ, ನನ್ನನ್ನು ಡೆಪ್ಯೂಟಿ ಎಸ್‌ಎಂಆರ್ ಕೊಠಡಿಗೆ ಕರೆದೊಯ್ಯಲಾಯಿತು. ನಾನು ಆ್ಯಪ್ ಅನ್ನು ತೆರೆಯಲು ಪದೇ ಪದೆ ಪ್ರಯತ್ನಿಸಿದೆ. ಅದನ್ನು ಅನ್‌ಇನ್‌ಸ್ಟಾಲ್ ಮಾಡಿ ಇನ್‌ಸ್ಟಾಲ್ ಮಾಡಿದೆ. ಬಳಿಕ ಜೂನಿಯರ್ ರೈಲ್ವೇ ಅಧಿಕಾರಿಯ ಸಹಾಯದಿಂದ ಲಾಗ್ ಇನ್ ಮಾಡಿದೆ ಮತ್ತು ಅಂತಿಮವಾಗಿ ಟಿಕೆಟ್ ಅನ್ನು ತೋರಿಸಿದೆ. ನಾನು 10 ಗಂಟೆಗೆ ಬದಲಾಗಿ 11.20ಕ್ಕೆ ಕಚೇರಿಯನ್ನು ತಲುಪಿದೆ' ಎಂದು ಅವರು ಹೇಳಿದರು.

ಆದರೆ, ಟಿಕೆಟ್ ಕೇಳಿದರೂ ತೋರಿಸದೆ ಪೂಜಾರ್ ರೈಲು ಹತ್ತಲು ಓಡುತ್ತಿದ್ದರು ಎಂದು ರಾಧಾಕೃಷ್ಣನ್ ಹೇಳಿಕೊಂಡಿದ್ದಾರೆ. 'ನಾನು ಅವರ ಕಾಲರ್ ಹಿಡಿದುಕೊಂಡು ಅವರ ಜೀವವನ್ನು ಉಳಿಸಿದೆ. ನಾವು ಪ್ಲಾಟ್‌ಫಾರ್ಮ್ 1 ರಲ್ಲಿದ್ದೆವು ಮತ್ತು ಅವರ ರೈಲು ಫ್ಲಾಟ್‌ಫಾರ್ಮ್ 2 ರಲ್ಲಿತ್ತು. ಅವರು ರೈಲು ಹತ್ತಲು ಹಳಿಗಳ ಮೇಲೆ ತೆರಳುತ್ತಾರೆ ಎಂದು ನನಗೆ ಅನಿಸಿತು. ಆ್ಯಪ್ ಕೆಲಸ ಮಾಡದ ಕಾರಣ ಅವರು ಭಾರತೀಯ ರೈಲ್ವೆಯನ್ನು ನಿಂದಿಸುತ್ತಿದ್ದರು. ಹಾಗಾಗಿ, ನಾನು ಅವರೊಂದಿಗೆ ಅಸಭ್ಯವಾಗಿ ವರ್ತಿಸಿದೆ. ಭವಿಷ್ಯದಲ್ಲಿ ಹೀಗಾಗದಂತೆ ನೋಡಿಕೊಳ್ಳುವೆ ಎಂಬ ಭರವಸೆಯನ್ನು ಅವರು ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com