ನಿಯಮ ಉಲ್ಲಂಘಿಸಿ ಪ್ರಯಾಣಿಸುತ್ತಿದ್ದವರಿಗೆ ಶಾಕ್: ಮಾರ್ಚ್ ಒಂದೇ ತಿಂಗಳಲ್ಲಿ 6.54 ಲಕ್ಷ ರೂ. ದಂಡ ಸಂಗ್ರಹಿಸಿದ ಬಿಎಂಟಿಸಿ
ಟಿಕೆಟ್ ರಹಿತವಾಗಿ ಪ್ರಯಾಣಿಸುವವರನ್ನು ಪತ್ತೆ ಹಚ್ಚುವ ಕಾರ್ಯವನ್ನು ತೀವ್ರಗೊಳಿಸಿದ್ದ ಬಿಎಂಟಿಸಿಯು ಕಳೆದ ಮಾರ್ಚ್ ಒಂದೇ ತಿಂಗಳಿನಲ್ಲಿ ದಂಡದ ರೂಪದಲ್ಲಿ ಒಟ್ಟು 6.54 ಲಕ್ಷ ರೂ ಹಣವನ್ನು ಸಂಗ್ರಹಿಸಿದೆ.
Published: 20th April 2023 11:19 AM | Last Updated: 20th April 2023 05:23 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಟಿಕೆಟ್ ರಹಿತವಾಗಿ ಪ್ರಯಾಣಿಸುವವರನ್ನು ಪತ್ತೆ ಹಚ್ಚುವ ಕಾರ್ಯವನ್ನು ತೀವ್ರಗೊಳಿಸಿದ್ದ ಬಿಎಂಟಿಸಿಯು ಕಳೆದ ಮಾರ್ಚ್ ಒಂದೇ ತಿಂಗಳಿನಲ್ಲಿ ದಂಡದ ರೂಪದಲ್ಲಿ ಒಟ್ಟು 6.54 ಲಕ್ಷ ರೂ ಹಣವನ್ನು ಸಂಗ್ರಹಿಸಿದೆ.
ಬಿಎಂಟಿಸಿ ತಪಾಸಣಾ ಸಿಬ್ಬಂದಿ 14,697 ಟ್ರಿಪ್‌ಗಳ ಬಸ್ ಗಳನ್ನು ಪರಿಶೀಲನೆ ನಡೆಸಿದ್ದು, ಈ ವೇಳೆ 3,449 ಟಿಕೆಟ್ ರಹಿತ ಪ್ರಯಾಣಿಕರಿಗೆ ದಂಡ ವಿಧಿಸಿದ್ದಾರೆ. ಇದಲ್ಲದೆ, ಕರ್ತವ್ಯಲೋಪಕ್ಕಾಗಿ ಕಂಡಕ್ಟರ್‌ಗಳ ವಿರುದ್ಧ 1330 ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಬಿಎಂಟಿಸಿ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಮಾರ್ಚ್ ತಿಂಗಳಲ್ಲಿ, ಮಹಿಳಾ ಪ್ರಯಾಣಿಕರಿಗೆ ಪ್ರತ್ಯೇಕವಾಗಿ ಮೀಸಲಾದ ಆಸನಗಳಲ್ಲಿ ಕುಳಿತು ಪ್ರಯಾಣಿಸಿದ್ದ 146 ಪುರುಷ ಪ್ರಯಾಣಿಕರಿಂದ 14,600 ರೂ.ಗಳ ದಂಡವನ್ನು ಸಂಗ್ರಹಿಸಿದ್ದಾರೆ. ಒಟ್ಟಾರೆಯಾಗಿ ಮಾರ್ಚ್ ತಿಂಗಳಲ್ಲಿ 6,69,340 ರೂ.ಗಳ ದಂಡವನ್ನು ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮಾರ್ಚ್ ಅಂತ್ಯದೊಳಗೆ ಬಿಎಂಟಿಸಿ 'ನಿಮ್ ಬಸ್' ಆ್ಯಪ್ ಬಿಡುಗಡೆ
ದಂಡ ಹಾಗೂ ಮುಜುಗರವನ್ನು ತಪ್ಪಿಸಲು ಸಾರ್ವಜನಿಕರು ಪ್ರಯಾಣಿಸುವಾಗ ಟಿಕೆಟ್ ಮತ್ತು ಪಾಸ್‌ಗಳನ್ನು ಖರೀದಿಸುವಂತೆ ನಿಗಮವು ಮನವಿ ಮಾಡಿಕೊಂಡಿದೆ. ಅಲ್ಲದೆ, ಮಹಿಳಾ ಪ್ರಯಾಣಿಕರಿಗೆ ಮೀಸಲಿರುವ ಆಸನದಲ್ಲಿ ಕುಳಿತು ಪ್ರಯಾಣಿಸದಂತೆಯೂ ಮನವಿ ಮಾಡಿಕೊಂಡಿದೆ. ಆದರೆ, ಕೆಲ ಪ್ರಯಾಣಿಕರು ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವುದು ಕಂಡು ಬರುತ್ತಿದೆ.
ಟಿಕೆಟ್-ಪಾಸ್ ಖರೀದಿಯಿಂದ ಸಂಸ್ಥೆಯು ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸಲು ಸಹಾಯ ಮಾಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.