ಹಳದಿ ಜ್ವರ: ಲಸಿಕೆ ಪ್ರಮಾಣಪತ್ರವಿಲ್ಲದೆ ಸುಡಾನ್'ನಿಂದ ನಗರಕ್ಕೆ ಬಂದ 40 ಜನರ ಕ್ವಾರಂಟೈನ್
ಯುದ್ಧಪೀಡಿತ ಸುಡಾನ್ ನಿಂದ ಆಪರೇಷನ್ ಕಾವೇರಿ ಅಡಿಯಲ್ಲಿ ರಕ್ಷಣೆ ಮಾಡಿ ಭಾರತಕ್ಕೆ ಕರೆತರಲಾಗುತ್ತಿದೆ. ಆದರೆ, ಅಲ್ಲಿಂದ ಬಂದ ಹಲವರಲ್ಲಿ ಹಳದಿ ಜ್ವರಕ್ಕೆ ಲಸಿಕೆ ಪ್ರಮಾಣಪತ್ರ ಇಲ್ಲದಿರುವುದು ಕಂಡು ಬಂದಿದ್ದು, ಹೀಗಾಗಿ 40 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
Published: 29th April 2023 10:23 AM | Last Updated: 29th April 2023 03:15 PM | A+A A-

ಸುಡಾನ್ ನಲ್ಲಿರುವ ಭಾರತೀಯರು.
ತಿರುವನಂತಪುರಂ/ಬೆಂಗಳೂರು: ಯುದ್ಧಪೀಡಿತ ಸುಡಾನ್ ನಿಂದ ಆಪರೇಷನ್ ಕಾವೇರಿ ಅಡಿಯಲ್ಲಿ ರಕ್ಷಣೆ ಮಾಡಿ ಭಾರತಕ್ಕೆ ಕರೆತರಲಾಗುತ್ತಿದೆ. ಆದರೆ, ಅಲ್ಲಿಂದ ಬಂದ ಹಲವರಲ್ಲಿ ಹಳದಿ ಜ್ವರಕ್ಕೆ ಲಸಿಕೆ ಪ್ರಮಾಣಪತ್ರ ಇಲ್ಲದಿರುವುದು ಕಂಡು ಬಂದಿದ್ದು, ಹೀಗಾಗಿ 40 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಅವರು ಮಾತನಾಡಿ, ವಿವಿಧ ರಾಜ್ಯಗಳ 40 ಮಂದಿ ಭಾರತೀಯರು ಹಳದಿ ಜ್ವರ ಲಸಿಕೆ ಪ್ರಮಾಣಪತ್ರ ಹೊಂದಿಲ್ಲದಿರುವುದು ಕಂಡು ಬಂದಿದೆ. ಅವರೆಲ್ಲರನ್ನೂ ರಾಜೀವ್ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್‌ನಲ್ಲಿ ಆರು ದಿನಗಳ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ಹೇಳಿದ್ದಾರೆ.
ಕೆಲವರು ಲಸಿಕೆ ಪ್ರಮಾಣಪತ್ರವನ್ನು ಕಳೆದುಕೊಂಡಿದ್ದು, ಇನ್ನು ಕೆಲವರು ಸುಡಾನ್ ನಲ್ಲಿಯೇ ಬಿಟ್ಟು ಭಾರತಕ್ಕೆ ಬಂದಿದ್ದಾರೆ. ಲಸಿಕೆ ಪ್ರಮಾಣಪತ್ರ ಕಳೆದುಕೊಂಡವರ ಪಾಸ್‌ಪೋರ್ಟ್‌ಗಳು ಮತ್ತು ಇತರ ದಾಖಲೆಗಳನ್ನು ಬಳಸಿಕೊಂಡು ಇದೀಗ ಪ್ರಮಾಣಪತ್ರಗಳನ್ನು ಟ್ರ್ಯಾಕ್ ಮಾಡುವ ಕೆಲಸ ಮಾಡಲಾಗುತ್ತಿದೆ. ಪ್ರಮಾಣಪತ್ರಗಳು ಸಿಕ್ಕಿದ ಕೂಡಲೇ ಅವರ ಕ್ವಾರಂಟೈನ್'ನ್ನು ರದ್ದುಪಡಿಸಲಾಗುತ್ತದೆ. ಸಿಕ್ಕದವರು ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸಬೇಕಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: ಆಪರೇಷನ್ ಕಾವೇರಿ: ಯುದ್ಧ ಪೀಡಿತ ಸುಡಾನ್‌ನಿಂದ 362 ಕನ್ನಡಿಗರು ಸುರಕ್ಷಿತವಾಗಿ ಬೆಂಗಳೂರಿಗೆ ಆಗಮನ
ದಕ್ಷಿಣ ಆಫ್ರಿಕಾ, ದಕ್ಷಿಣಾ ಅಮೆರಿಕಾ, ಉಗಾಂಡ, ನೈಜಿರಿಯಾ, ಕೀನ್ಯಾ ಸೇರಿ ಕೆಲ ಭಾಗಗಳಲ್ಲಿ ಹಳದಿ ಜ್ವರ ಹರಡಿದ್ದು ಇದೊಂದು ಭೀಕರ ಕಾಯಿಲೆಯಾಗಿದೆ.
ಹೀಗಾಗಿ ಸುಡಾನ್‌ನಿಂದ ರಾಜಧಾನಿಗೆ ಬಂದವರಿಂದಾಗಿ ಬೆಂಗಳೂರಿನಲ್ಲಿ ಹಳದಿ ಜ್ವರ ಹರಡುವ ಭೀತಿ ಎದುರಾಗಿದೆ. ಯಲ್ಲೋ ಫೀವರ್ಗೆ ವ್ಯಾಕ್ಸಿನ್ ಪಡೆಯದೇ ಅಂತರ್ಯುದ್ಧದಲ್ಲಿ ಸಿಲುಕಿದ್ದವರು ರಾಜಧಾನಿಗೆ ಪ್ರವೇಶಿಸಿದ್ದರಿಂದ ಈ ಭೀತಿ ಎದುರಾಗಿದೆ.
ಒಟ್ಟು ಲಸಿಕೆ ಪಡೆಯದೇ ಬಂದವರು 40 ಮಂದಿ ಇದ್ದು ಅವರನ್ನು 6 ದಿನಗಳ ಕಾಲ ಆರೋಗ್ಯ ಇಲಾಖೆ ಕ್ವಾರಂಟೈನ್‌ಗೆ ಒಳಪಡಿಸಿದೆ.
ಈ ನಡುವೆ ಸುಡಾನ್‌ನಿಂದ ಬೆಂಗಳೂರಿಗೆ ಬಂದ 52 ಕೇರಳೀಯರ ಪೈಕಿ ಆರು ಮಂದಿ ಶುಕ್ರವಾರ ರಾತ್ರಿ ವಿಮಾನದ ಮೂಲಕ ತಿರುವನಂತಪುರಂ ತಲುಪಿದ್ದಾರೆ ಎಂದು ನಾರ್ಕಾ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ಹತ್ತು ಮಂದಿಯನ್ನು ವಿಶೇಷ ವಾಹನದ ಮೂಲಕ ಕೋಝಿಕ್ಕೋಡ್‌ಗೆ ಕಳುಹಿಸಲಾಗಿದೆ. ಉಳಿದ 17 ಮಂದಿ ಶನಿವಾರ ಮಧ್ಯಾಹ್ನ 1.20ಕ್ಕೆ ಕೊಚ್ಚಿ ವಿಮಾನ ನಿಲ್ದಾಣ ತಲುಪಲಿದ್ದಾರೆ ಎಂದು ನಾರ್ಕಾ ಪ್ರಕಟಣೆ ತಿಳಿಸಿದೆ.