ಹಲವು ಕ್ರಮಗಳ ಬಳಿಕ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಇಳಿಮುಖ..!

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರು ಕಾರ್ಯಾಚರಣೆಗೆ ಇಳಿದು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಪರಿಣಾಮ ಅಪಘಾತ ಸಂಖ್ಯೆ ಇಳಿಮುಖಗೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರು ಕಾರ್ಯಾಚರಣೆಗೆ ಇಳಿದು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಪರಿಣಾಮ ಅಪಘಾತ ಸಂಖ್ಯೆ ಇಳಿಮುಖಗೊಂಡಿದೆ.
 
ಮೊದಲು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಅಪಘಾತಗಳು ಸಂಭವಿಸಿ, ಸಾವು ನೋವು ಸಂಭವಿಸುತ್ತಿತ್ತು. ಆದರೀಗ ಸುರಕ್ಷತೆ ಮತ್ತು ಅಪಘಾತ ತಡೆಗೆ ಕೆಲವು ಕ್ರಮಗಳನ್ನು ಕೈಗೊಂಡ ಪರಿಣಾಮ ಅಪಘಾತಗಳ ಸಂಖ್ಯೆ ಕ್ಷೀಣಿಸಿದೆ.

ಎಕ್ಸ್‌ ಪ್ರೆಸ್‌ ವೇನಲ್ಲಿ ಬೆಂಗಳೂರಿನಿಂದ ಮೈಸೂರಿನವರೆಗೆ ಮೇ ತಿಂಗಳಲ್ಲಿ ಸಂಭವಿಸಿದ ಅಪಘಾತದಲ್ಲಿ 29 ಮಂದಿ ಸಾವನ್ನಪ್ಪಿದರೆ, ಜೂನ್‌ ತಿಂಗಳಲ್ಲಿ 28 ಮಂದಿ ಕೊನೆಯುಸಿರೆಳೆದಿದ್ದರು.

ಜುಲೈ ತಿಂಗಳಲ್ಲಿ ರಸ್ತೆ ಸುರಕ್ಷತೆ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡಿದ್ದರಿಂದ ಅಪಘಾತಗಳ ಪ್ರಮಾಣ ಕುಸಿದು ಸಾವಿನ ಸಂಖ್ಯೆ 8ಕ್ಕೆ ಇಳಿದಿದೆ. ಇದರಲ್ಲಿ ರಾಮನಗರ ವ್ಯಾಪ್ತಿಯಲ್ಲಿ 3, ಮಂಡ್ಯ ವ್ಯಾಪ್ತಿಯಲ್ಲಿ 5 ಮಂದಿ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆಂದು ತಿಳಿದುಬಂದಿದೆ. ಹೆದ್ದಾರಿ ಉದ್ಘಾಟನೆಗೊಂಡ ನಂತರ 90 ಮಂದಿ ಜನರನ್ನು ಬಲಿಪಡೆದುಕೊಂಡಿತ್ತು.

ಆರಂಭದಲ್ಲಿ ರಸ್ತೆಯ ವಿನ್ಯಾಸ, ಸೂಚನಾ ಫಲಕಗಳ ಕೊರತೆ ಮತ್ತು ನೀರು ನಿಲ್ಲುತ್ತಿದ್ದರಿಂದ ವಾಹನಗಳು ಸ್ಕಿಡ್ ಆಗಿ ಹೆದ್ದಾರಿಯಲ್ಲಿ ಅಪಘಾತಗಳು ಸಂಭವಿಸಿದ್ದವು. ಅಪಘಾತಕ್ಕೆ ವೇಗದ ಮಿತಿ ದಾಟುವುದು ಕೂಡ ಕಾರಣವಾಗಿತ್ತು. ಕಾರು ಚಾಲಕರು ವೇಗದ ಮಿತಿಯನ್ನು ಮೀರಿ ಗಂಟೆಗೆ 120-160 ಕಿ.ಮೀ ವೇಗದಲ್ಲಿ ಚಾಲನೆ ಮಾಡುತ್ತಿದ್ದರು. ಇದನ್ನು ಗಮನಿಸಿದ ಎಡಿಜಿಪಿ ಅಲೋಕ್ ಕುಮಾರ್, ಅಪಘಾತ ತಪ್ಪಿಸಲು, ಹೆದ್ದಾರಿಯನ್ನು ಪರಿಶೀಲನೆ ನಡೆಸಿ, ಹಲವು ಕ್ರಮಗಳನ್ನು ಕೈಗೊಂಡಿದ್ದರು. ಅಪಘಾತ ಸಂಖ್ಯೆ ಕಡಿಮೆಯಾಗುವುದಕ್ಕೆ ಇದೇ ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ.

ಹೆದ್ದಾರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುತ್ತಿದೆ. ಇದರಿಂದಾಗಿ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಮಂಡ್ಯ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಲೋಕ್ ಕುಮಾರ್ ಅವರು ಎಡಿಜಿಪಿ (ಟ್ರಾಫಿಕ್) ಆಗಿ ಅಧಿಕಾರ ವಹಿಸಿಕೊಂಡ ನಂತರ, ಹೆದ್ದಾರಿಗೆ ಸಂಬಂಧಪಟ್ಟಂತಹ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಿದ್ದರು. ವಾಹನ ಚಾಲಕರಿಗೆ ಹೆದ್ದಾರಿಯನ್ನು ಸುರಕ್ಷಿತವಾಗಿಸಲು ಹಲವು ಉಪಕ್ರಮಗಳನ್ನು ಕೈಗೊಂಡರು.

ಜುಲೈ ತಿಂಗಳಿನಲ್ಲಿ ಸ್ಮಾರ್ಟ್ ಕ್ಯಾಮೆರಾಗಳ ಅಳವಡಿಕೆ ಮಾಡಿದ್ದು, ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡಿದ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ. ಹೆದ್ದಾರಿಯಲ್ಲಿ ನಿಯಮ ಉಲ್ಲಂಘಿಸಿದವರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ತಮಗೆ ಟ್ಯಾಗ್ ಮಾಡುವಂತೆಯೂ ಪೊಲೀಸರು ತಿಳಿಸಿದ್ದರು. ಇವರ ವಿರುದ್ಧವೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಯಿತು. ಜುಲೈ ತಿಂಗಳೊಂದರಲ್ಲೇ 1,000 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಹೆದ್ದಾರಿಯಲ್ಲಿ ಕೈಗೊಂಡ ಕ್ರಮಗಳು ಇಂತಿವೆ...
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎಕ್ಸ್‌ಪ್ರೆಸ್‌ ವೇನಲ್ಲಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿದೆ. ಇಂಡಿಯನ್‌ ರೋಡ್‌ ಕಾಂಗ್ರೆಸ್‌ ನಿಯಮಗಳಂತೆ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಪ್ರವೇಶ ಮತ್ತು ನಿರ್ಗಮನ ಪಾಯಿಂಟ್ಸ್‌ಗಳಲ್ಲಿ ಮಾಹಿತಿ ಫಲಕಗಳನ್ನು ಹಾಕಲಾಗಿದೆ. ನಾಲ್ಕು ಹೆದ್ದಾರಿ ಗಸ್ತು ವಾಹನಗಳನ್ನು ನಿಯೋಜಿಸಲಾಗಿದ್ದು, ಎರಡು ವಿಭಾಗದಲ್ಲಿ ತಲಾ ಎರಡು ಗಸ್ತು ವಾಹನಗಳು ಕಾರ್ಯನಿರ್ವಹಿಸುತ್ತಿವೆ. ಅದಲ್ಲದೇ ನಿಗಾವಹಿಸಲು ಕ್ಯಾಮೆರಾಗಳನ್ನು ಕೂಡ ಅಳವಡಿಸಲಾಗಿದ್ದು, ಹೆದ್ದಾರಿಯಲ್ಲಿ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ ಹಾಗೂ ಟ್ರಾಕ್ಟರ್‌ ಸೇರಿ ಮೋಟಾರು ರಹಿತ ವಾಹನಗಳ ಸಂಚಾರವನ್ನು ನಿಷೇಧಿಸುವ ಮೂಲಕ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅಲ್ಲದೆ, ರಸ್ತೆ ಸುರಕ್ಷತಾ ಸಮಿತಿಯನ್ನು ನೇಮಿಸಲಾಗಿದೆ.

ಇನ್ನು ಕರ್ನಾಟಕ ಪೊಲೀಸ್‌ ಇಲಾಖೆ ಕೂಡ ಇಂಟರ್‌ ಸೆಪ್ಟರ್‌ಗಳ ಮೂಲಕ ವೇಗದ ಮಿತಿಯನ್ನು ಜಾರಿಗೆ ತರಲು ಹಲವು ಉಪಕ್ರಮಗಳನ್ನು ತೆಗೆದುಕೊಂಡಿದೆ. ತುರ್ತು ಸೇವೆಗಾಗಿ ಬೇಸಿಕ್‌ ಲೈಫ್‌ ಸಪೋರ್ಚ್‌ ಸಿಸ್ಟಮ್‌ ಹೊಂದಿರುವ ನಾಲ್ಕು ಆಂಬುಲೆನ್ಸ್‌ಗಳನ್ನು ನಿಯೋಜಿಸಲಾಗಿದ್ದು, ಪ್ಯಾರಾಮೆಡಿಕಲ್‌ ಸಿಬ್ಬಂದಿ ಕೂಡ ಹೆದ್ದಾರಿಯಲ್ಲಿ ಇದ್ದಾರೆ. ಎಲ್ಲ ಟೋಲ್‌ ಪ್ಲಾಜಾಗಳಲ್ಲಿ ಪ್ರಥಮ ಚಿಕಿತ್ಸೆ ಕಿಟ್‌ಗಳನ್ನು ಇಡಲಾಗಿದೆ.

ಇಷ್ಟೇ ಅಲ್ಲದೆ, ರಸ್ತೆ ಸುರಕ್ಷತೆ ಸಮಿತಿ ವರದಿ ಕೈ ಸೇರಿದ ತರುವಾಯ ಐದು ಸ್ಪೀಡ್‌ ರೆಡಾರ್‌ ಗನ್‌ಗಳು ಹಾಗೂ 10 ಹೆಚ್ಚುವರಿ ಗಸ್ತು ವಾಹನಗಳನ್ನು ನಿಯೋಜಿಸಿ ಅಪಘಾತಗಳಿಗೆ ಕಡಿವಾಣ ಹಾಕಿ ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಕ್ರಮ ವಹಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com