ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ಒತ್ತಡದ ಜೀವನ ಶೈಲಿಯಲ್ಲಿ ದೈಹಿಕ ಆರೋಗ್ಯಕ್ಕೆ ನೀಡುವ ಮಹತ್ವವನ್ನ ಮಾನಸಿಕ ಆರೋಗ್ಯಕ್ಕೂ ನೀಡುವ ಅಗತ್ಯತೆ ಇದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಗುರುವಾರ ಹೇಳಿದರು.
Published: 11th August 2023 09:17 AM | Last Updated: 11th August 2023 03:15 PM | A+A A-

ಪುಸ್ತಕಗಳ ಬಿಡುಗಡೆ ಮಾಡುತ್ತಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್.
ಬೆಂಗಳೂರು: ಒತ್ತಡದ ಜೀವನ ಶೈಲಿಯಲ್ಲಿ ದೈಹಿಕ ಆರೋಗ್ಯಕ್ಕೆ ನೀಡುವ ಮಹತ್ವವನ್ನ ಮಾನಸಿಕ ಆರೋಗ್ಯಕ್ಕೂ ನೀಡುವ ಅಗತ್ಯತೆ ಇದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಗುರುವಾರ ಹೇಳಿದರು.
ಕ್ಲಿನಿಕಲ್ ಸೈಕಾಲಜಿ ಸೊಸೈಟಿ ಆಫ್ ಇಂಡಿಯಾ ಹಾಗೂ ನಿಮ್ಹಾನ್ಸ್‌ನ ಕ್ಲಿನಿಕಲ್ ಸೈಕಾಲಜಿ ವಿಭಾಗದ ಸಹಯೋಗದೊಂದಿಗೆ ಆಯೋಜಿಸಿದ್ದ ಮಾನಸಿಕ ಆರೋಗ್ಯ ಕುರಿತ ತಜ್ಞರ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಯೋಗ, ಧ್ಯಾನ, ಮನಸ್ಸಿನಲ್ಲಿ ಸದಾ ಧನಾತ್ಮಕ ಚಿಂತನೆಗಳನ್ನು ಮಾಡುವ ಮುಖೇನ ನಮ್ಮ ಮಾನಸಿಕ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದು ಎಂದು ಹೇಳಿದರು.
ಮಾನಸಿಕ ಆರೋಗ್ಯ, ಬದಲಾಗುತ್ತಿರುವ ಜಗತ್ತು, ಹೊಸ ಸವಾಲುಗಳು ಮತ್ತು ಅವಕಾಶಗಳ ಕುರಿತಂತೆ ವಿವಿಧ ಶ್ರೇಣಿಯ ಮಾನಸಿಕ ಆರೋಗ್ಯ ತಜ್ಞರು, ವಿದ್ಯಾರ್ಥಿಗಳು, ಕ್ಲಿನಿಕಲ್ ಸೈಕಾಲಜಿಸ್ಟ್‌ಗಳು, ಮನಶಾಸ್ತ್ರಜ್ಞರನ್ನ ಒಟ್ಟುಗೂಡಿಸುವುದು ಸಹ ಮುಖ್ಯವಾಗಿದೆ. ಈ ರೀತಿಯ ಸಮ್ಮೇಳನಗಳು ಹೊಸ ವಿಚಾರಗಳು, ಸಂಶೋಧನೆಗಳನ್ನ ಹಂಚಿಕೊಳ್ಳಲು ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಬೆಂಗಳೂರು: ಶೇ.25 ರಷ್ಟು 'ನಮ್ಮ ಕ್ಲಿನಿಕ್' ಗಳಲ್ಲಿ ರಾತ್ರಿ 8ರವರೆಗೆ ಸೇವೆ
ಮಾನಸಿಕ ಆರೋಗ್ಯದ ಮಹತ್ವ ಮತ್ತು ಸಮುದಾಯದ ಮಾನಸಿಕ ಆರೋಗ್ಯ ಅಗತ್ಯಗಳನ್ನು ನಿಭಾಯಿಸುವಲ್ಲಿ ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ಪಾತ್ರ ಪ್ರಮುಖವಾದದ್ದು. ಈ ನಿಟ್ಟಿನಲ್ಲಿ ನಿಮ್ಹಾನ್ಸ್ ಸಂಸ್ಥೆ ದೇಶದ ಒಂದು ರತ್ನ ಎಂದರೆ ತಪ್ಪಾಗಲಾರದು. ಅದರಲ್ಲೂ ನಿಮ್ಹಾನ್ಸ್ ಕರ್ನಾಟಕದಲ್ಲಿ ನೆಲೆಗೊಂಡಿರುವುದು ಅದೃಷ್ಟ ಎಂದರು.
ಈ ಸಂದರ್ಭದಲ್ಲಿ ನಿಮ್ಹಾನ್ಸ್‌ನ CPSI – Psycho Legal Aid Cell ಹಾಗೂ ಮಾನಸಿಕ ಆರೋಗ್ಯದ ಕುರಿತಾದ ಎರಡು ಪುಸ್ತಕಗಳನ್ನು ಸಚಿವರು ಬಿಡುಗಡೆ ಮಾಡಿದರು.