ಪುನೀತ್ ಕೆರೆಹಳ್ಳಿ ವಿರುದ್ಧ ಗೂಂಡಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು: ಸಿಸಿಬಿ ಪೊಲೀಸರಿಂದ ಬಂಧನ
ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ವಿರುದ್ಧ ಕರ್ನಾಟಕ ಪೊಲೀಸ್ ಇಲಾಖೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಸಿಸಿಬಿ ವಿಶೇಷ ವಿಭಾಗದ ಪೊಲೀಸರು ನಿನ್ನೆ ಶುಕ್ರವಾರ ತಡರಾತ್ರಿ ವಶಕ್ಕೆ ಪಡೆದು ಬಂಧಿಸಿದ್ದಾರೆ.
Published: 12th August 2023 09:38 AM | Last Updated: 12th August 2023 02:57 PM | A+A A-

ಪುನೀತ್ ಕೆರೆಹಳ್ಳಿ
ಬೆಂಗಳೂರು: ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ವಿರುದ್ಧ ಕರ್ನಾಟಕ ಪೊಲೀಸ್ ಇಲಾಖೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಸಿಸಿಬಿ ವಿಶೇಷ ವಿಭಾಗದ ಪೊಲೀಸರು ನಿನ್ನೆ ಶುಕ್ರವಾರ ತಡರಾತ್ರಿ ವಶಕ್ಕೆ ಪಡೆದು ಬಂಧಿಸಿದ್ದಾರೆ.
ಹಸುವನ್ನು ಸಾಗಿಸಲು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಹೊಡೆದು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಗೋರಕ್ಷಕ ಪುನೀತ್ ಅವರನ್ನು ಬಂಧಿಸಲಾಗಿತ್ತು.ಸಂತ್ರಸ್ತರು ಕಾನೂನುಬದ್ಧವಾಗಿ ಹಸುಗಳನ್ನು ಸಾಗಿಸಿರುವುದು ತನಿಖೆಯಿಂದ ತಿಳಿದುಬಂದಿದೆ. ನಂತರ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ಪುನೀತ್ ಕೆರೆಹಳ್ಳಿ 2013ರಿಂದ 2023ರ ನಡುವೆ 10 ಪೊಲೀಸ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ಹೇಳುತ್ತಾರೆ. ಆರೋಪಿಯು ಪದೇ ಪದೇ ಸಮಾಜದಲ್ಲಿ ಶಾಂತಿ ಕದಡುವ ಯತ್ನ, ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ನಂತರ ಆತನ ಮೇಲೆ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿದೆ.
ಇದನ್ನೂ ಓದಿ: ಹಿಂದೂ ಪರ ಕಾರ್ಯಕರ್ತನಿಗೆ ನೋಟಿಸ್: ಪೊಲೀಸರ ನಡೆಗೆ ಗೃಹ ಸಚಿವ ಪರಮೇಶ್ವರ್ ಸಮರ್ಥನೆ
ಪುನೀತ್ ವಿರುದ್ಧ ಡಿ.ಜೆ. ಹಳ್ಳಿ, ಬೇಗೂರು, ಕಗ್ಗಲಿಪುರ, ಹಲಸೂರುಗೇಟ್, ಚಾಮರಾಜಪೇಟೆ, ಎಲೆಕ್ಟ್ರಾನಿಕ್ ಸಿಟಿ, ಮಳವಳ್ಳಿ ಮತ್ತು ಸಾತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣಗಳು ದಾಖಲಾಗಿವೆ. ಗೂಂಡಾ ಕಾಯ್ದೆಯಡಿ ಬಂಧಿತ ಆರೋಪಿಗಳಿಗೆ ಒಂದು ವರ್ಷದವರೆಗೆ ಜಾಮೀನು ಸಿಗುವುದಿಲ್ಲ. ಪೊಲೀಸರು ಆರೋಪಿಯನ್ನು ಬಂಧಿಸಿದ 24 ಗಂಟೆಗಳ ಒಳಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಅಗತ್ಯವಿಲ್ಲ ಮತ್ತು ಅವರನ್ನು ಪೊಲೀಸ್ ಕಸ್ಟಡಿಗೆ ಪಡೆಯಲು ಕಾರ್ಯವಿಧಾನವನ್ನು ಅನುಸರಿಸುವ ಅಗತ್ಯವಿಲ್ಲ.
ಹಾಸನ ಮೂಲದ ಪುನೀತ್, ರಾಷ್ಟ್ರ ರಕ್ಷಾ ಪಡೆ ಹೆಸರಿನಲ್ಲಿ ಸುಲಿಗೆ ಮಾಡುವ ಉದ್ದೇಶದಿಂದ ಪದೇ ಪದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗೋಹತ್ಯೆ ಸಾಗಣೆದಾರರನ್ನು ಗುರಿಯಾಗಿಸಿಕೊಂಡು ಅಲ್ಲಿನ ವ್ಯಾಪಾರಸ್ಥರನ್ನು ಬೆದರಿಸುವ ಕೆಲಸ ಮಾಡುತ್ತಿದ್ದ ಎಂದು ಹೇಳುತ್ತಿದ್ದಾರೆ.